ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಬ್ಬು: ಟನ್‌ಗೆ ₹4 ಸಾವಿರ ಮುಂಗಡ ಹಣ ಪಾವತಿಸಿ

ರೈತ ಮುಖಂಡರ ಸಭೆಯಲ್ಲಿ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ
Published 18 ಜೂನ್ 2024, 16:15 IST
Last Updated 18 ಜೂನ್ 2024, 16:15 IST
ಅಕ್ಷರ ಗಾತ್ರ

ತಿ.ನರಸೀಪುರ: ‘ಪ್ರಸಕ್ತ ಸಾಲಿನ ಕಬ್ಬಿಗೆ ಪ್ರತಿ ಟನ್‌ಗೆ 4 ಸಾವಿರ ಮುಂಗಡ ಹಣ ಪಾವತಿಸಲು ಜಿಲ್ಲಾಡಳಿತ ಹಾಗೂ ಸರ್ಕಾರ ಅಗತ್ಯ ಕ್ರಮ ವಹಿಸಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹಿಸಿದರು.

ಪಟ್ಟಣದ ಕಬಿನಿ ಅತಿಥಿ ಗೃಹದ ಆವರಣದಲ್ಲಿ ಕರೆದಿದ್ದ ಸಂಘದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸಿ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 4 ಸಾವಿರ ಮುಂಗಡ ಪಾವತಿಸಲು ಕ್ರಮ ವಹಿಸಬೇಕು. ಇಳುವರಿಯಲ್ಲಿ ಆಗುವ ಮೋಸತಪ್ಪಿಸಲು ಸ್ಥಳೀಯ ರೈತ ಮುಖಂಡರ ಜೊತೆ ತಜ್ಞರ ಸಮಿತಿ ರಚಿಸಿ ಸಕ್ಕರೆ ಆಯುಕ್ತರನ್ನು ಕರೆಯಿಸಿ ಸಭೆ ನಡೆಸಬೇಕು’ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ತೀವ್ರ ಬರಗಾಲ ಮತ್ತು ಪ್ರಕೃತಿ ವಿಕೋಪದ ದಾಳಿಗೆ ಸಿಲುಕಿರುವ ರೈತರಿಗೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಸಭೆ ಮಾಡಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮುಖ್ಯಮಂತ್ರಿಗೆ ಒತ್ತಡ ತರಬೇಕು. ಕಳೆದ ತಿಂಗಳಲ್ಲಿ ಬಿರುಗಾಳಿಗೆ ಸಿಲುಕಿ ಬಾಳೆ ಬೆಳೆ ನಷ್ವವಾಗಿದೆ. ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ’ ಮನವಿ ಮಾಡಿದರು.

‘ಬೆಲೆ ನಷ್ಟ ಹೊಂದಿರುವ ಎಲ್ಲಾ ರೈತರಿಗೂ ತಾರತಮ್ಯವಿಲ್ಲದೇ ಪ್ರತಿ ಎಕರೆಗೆ ₹25 ಸಾವಿರ ಬರ ಪರಿಹಾರವನ್ನು ರೈತರ ಖಾತೆಗೆ ಸರ್ಕಾರ ಜಮಾ ಮಾಡಬೇಕು. ಬಿತ್ತನೆ ಬೀಜ ದರ ಯಥಾಸ್ಥಿತಿಯಲ್ಲಿ ಮುಂದುವರಿಯಬೇಕು. ಗೊಬ್ಬರದ ಅಂಗಡಿಗಳಲ್ಲಿ ದರ ಪ್ರಕಟಿಸಬೇಕು’ ಎಂದು ಒತ್ತಾಯಿಸಿದರು.

ರಾಜ್ಯ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಸುಜ್ಜಲೂರು ಜಯಸ್ವಾಮಿ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಬನ್ನೂರು ಕೃಷ್ಣಪ್ಪ. ಬಿ ಸೀ ಹಳ್ಳಿ ರವಿ, ಜಿಲ್ಲಾ ಕಾರ್ಯದರ್ಶಿ ಬನ್ನಳ್ಳಿ ಹುಂಡಿ ರಾಜೇಂದ್ರ, ಜಿಲ್ಲಾ ಕಾರ್ಯದರ್ಶಿ ಕೊಂತಯ್ಯನ ಹುಂಡಿ ಮಹೇಶ್, ಗ್ರಾಮ ಪಂಚಾಯಿತಿ ಸದಸ್ಯ ಪ್ರಭುಸ್ವಾಮಿ ಶಿವಕುಮಾರ್, ಹಾಲಿನ ನಾಗರಾಜ್, ಹಾಡ್ಯ ರವಿ, ಮಲಿಯೂರು ಹರ್ಷ, ಮಹೇಂದ್ರ, ಸತೀಶ್ ದೇವನೂರು, ನಾಗೇಂದ್ರ, ಅಂಬಳೆ ಮಹದೇವಸ್ವಾಮಿ, ಚಂದ್ರಪ್ಪ ಕೀಲಿಪುರ ಶ್ರೀಕಂಠ, ಸುಜ್ಜಲೂರು ಚೇತು, ಚಂದು, ರುದ್ರಪ್ಪ, ನವೀನ್ ಇದ್ದರು.

‘₹12 ಕೋಟಿಗೂ ಹೆಚ್ಚು ಹಣ ಪಾವತಿ ಬಾಕಿ’

‘ಕಳೆದ ವರ್ಷದ ಬಾಕಿ ಪ್ರತಿ ಟನ್‌ಗೆ ₹150 ಹೆಚ್ಚುವರಿ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಸುಮಾರು ₹12 ಕೋಟಿಗೂ ಹೆಚ್ಚು ಹಣ ಜಿಲ್ಲೆಯ ರೈತರಿಗೆ ಪಾವತಿಯಾಗಬೇಕಿದೆ. ಅದನ್ನು ಕಾರ್ಖಾನೆ ರೈತರಿಗೆ ನೀಡಬೇಕು. ಅಲ್ಲದೆ ರೈತರಿಂದ ಹಣ ಕಟಾವು ಮಾಡಿರುವುದನ್ನು ವಾಪಸ್ಸು ನೀಡಬೇಕಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT