ಶನಿವಾರ, 2 ಆಗಸ್ಟ್ 2025
×
ADVERTISEMENT
ADVERTISEMENT

ಕವಿಗೀತೆ ಜನರ ಹೃದಯಕ್ಕೆ ತಲುಪಿಸುವ ಮಾಧ್ಯಮ ಸುಗಮ ಸಂಗೀತ: ಶ್ರೀನಿವಾಸ ಉಡುಪ

ಇಂದಿನಿಂದ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನ ಆರಂಭ
Published : 2 ಆಗಸ್ಟ್ 2025, 5:42 IST
Last Updated : 2 ಆಗಸ್ಟ್ 2025, 5:42 IST
ಫಾಲೋ ಮಾಡಿ
Comments
ಪ್ರ

ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಈ ಕ್ಷೇತ್ರದಲ್ಲಿ ನನ್ನ ಪಯಣ 50 ವರ್ಷಗಳಿಗೂ ಮೀರಿದ್ದಾರೆ. ಬಹಳಷ್ಟು ವರ್ಷಗಳಿಂದ ಸುಗಮ ಸಂಗೀತ ಪರಿಷತ್ತಿನಲ್ಲೂ ಕೆಲಸ ಮಾಡುತ್ತಿದ್ದೇನೆ. ರಂಗದ ಎಲ್ಲರ ಪರಿಚಯವೂ ಇದೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಹಾಡಿದ್ದೇನೆ. ಸಂಘಟನೆ ಮಾಡಿದ್ದೇನೆ. ಇದೆಲ್ಲವನ್ನೂ ಪರಿಗಣಿಸಿ ಪರಿಷತ್ತಿನಿಂದ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಖುಷಿ ಇದೆ. ಎಲ್ಲರೂ ಸರ್ವಸಮ್ಮತವಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಮಹತ್ವವಿದೆ.

ಪ್ರ

ಇಂತಹ ಸಮ್ಮೇಳನಗಳ ಅಗತ್ಯವೇನು?

ಸುಗಮ ಸಂಗೀತಗಾರರು ಸೇರುವುದಕ್ಕೆ ಇದೊಂದು ವೇದಿಕೆ. ರಾಜ್ಯದ ಎಲ್ಲ ಮೂಲೆಗಳಿಂದಲೂ ಬರುತ್ತಾರೆ. ಪ್ರತಿಯೊಂದು ಭಾಗದಲ್ಲೂ ಗಾಯನದ ಶೈಲಿಯಲ್ಲಿ ವ್ಯತ್ಯಾಸ–ವಿಶಿಷ್ಟತೆ ಕಂಡುಬರುತ್ತದೆ. ಅದೆಲ್ಲದರ ಪರಿಚಯ ಎಲ್ಲರಿಗೂ ಆಗುತ್ತದೆ; ವಿನಿಮಯ ಮಾಡಿಕೊಂಡಂತೆಯೂ ಆಗುತ್ತದೆ. ಇದರಿಂದ ಅನುಕೂಲವಿದೆ. ಕವಿಗಳ ಸಮ್ಮುಖದಲ್ಲಿ ಕವನ ಹಾಡುವುದು, ಅವರ ಆಶಯವನ್ನು ತಿಳಿದುಕೊಳ್ಳಲು ಸಹಕಾರಿಯೂ ಹೌದು. ಹಿರಿಯ–ಕಿರಿಯ ಗಾಯಕರು, ಕವಿಗಳು ಸಮ್ಮಿಲನವೇ ಈ ಸಮ್ಮೇಳನ.

ಪ್ರ

ಸಮಾಜಕ್ಕೆ ಸುಗಮ ಸಂಗೀತದ ಕೊಡುಗೆ ಅಥವಾ ಪಾತ್ರವೇನು?

ಈ ‍ಪ್ರಾಕಾರ ಕರ್ನಾಟಕದಲ್ಲಿ ಮಾತ್ರವೇ ಎನಿಸುತ್ತದೆ. ಕವಿಗೀತೆಗಳನ್ನು ಜನಸಾಮಾನ್ಯರು ಓದುವುದು ಕಡಿಮೆ. ಆದರೆ, ಅದಕ್ಕೆ ಸಂಗೀತ ಸಂಯೋಜಿಸಿ ಜನರ ಬಳಿಗೆ ತೆಗೆದುಕೊಂಡು ಆಶಯವನ್ನು ತಲುಪಿಸುವ ಕೆಲಸವನ್ನು ಸುಗಮ ಸಂಗೀತ ಕ್ಷೇತ್ರದವರು ಮಾಡುತ್ತಿದ್ದೇವೆ. ಜನರ ಹೃದಯ ಸಿಂಹಾಸನವನ್ನು ಮುಟ್ಟುವುದಕ್ಕೆ ಸುಲಭವಾದ ಸಾಧನವಿದು. ಕವಿಗಳ ಕವನದಲ್ಲಿರುವ ಸಂದೇಶವನ್ನು ತಲುಪಿಸುವ ಶಕ್ತಿ ಇದಕ್ಕಿದೆ.

ಪ್ರ

ಸುಗಮ ಸಂಗೀತ ಬೆಳೆಯುತ್ತಿದೆಯೇ?

ಇತ್ತೀಚಿನ ವರ್ಷಗಳಲ್ಲಿ ಕೇಳುಗರ ಸಂಖ್ಯೆ ಜಾಸ್ತಿಯಾಗಿದೆ. ಒತ್ತಡ ನಿವಾರಣೆಗೂ ಸಹಕಾರಿಯಾಗಿದೆ. ಸಭೆ– ಸಮಾರಂಭಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಲಿಸುವುದಕ್ಕೆ ಬಹಳಷ್ಟು ಶಾಲೆಗಳು ಆಗಿವೆ. ಕಾರ್ಯಕ್ರಮಗಳ ಆಯೋಜನೆಯೂ ಹೆಚ್ಚುತ್ತಿದೆ. ನಾವು ಚಿಕ್ಕವರಿದ್ದಾಗ ಆಕಾಶವಾಣಿಯಲ್ಲಿ ಮಾತ್ರವೇ ಈ ಸಂಗೀತ ಕೇಳಬೇಕಿತ್ತು. ಈಗ, ಕಲಿಯುವವರ ಸಂಖ್ಯೆಯೂ ಜಾಸ್ತಿಯಾಗಿದೆ. ವಿಶೇಷವಾಗಿ ಮಕ್ಕಳು ಕೂಡ ಬರುತ್ತಿದ್ದಾರೆ. ಆನ್‌ಲೈನ್‌ನಲ್ಲೂ ‍ಪಾಠ ಮಾಡುತ್ತಿದ್ದು, ವಿದೇಶದಲ್ಲಿರುವ ಕನ್ನಡಿಗರು ಕಲಿಯಲು ಮುಂದೆ ಬರುತ್ತಿದ್ದಾರೆ. ಶ್ರದ್ಧೆಯಿಂದ ಕಲಿಯುತ್ತಿದ್ದಾರೆ.

ಪ್ರ

ಸದಭಿರುಚಿಯ ಸಂಗೀತ ಎಂದರೆ ಹೇಗಿರಬೇಕು?

ಸುಗಮ ಸಂಗೀತಕ್ಕೆ ಅಳವಡಿಸುವಾಗ (ರಾಗ ಸಂಯೋಜನೆ) ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತಹ ಕವನಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಟ್ಟ ಸಂಗೀತ ಕೊಡುವುದು ಸಲ್ಲದು. ಚೆನ್ನಾಗಿದ್ದರೆ ಸಂಗೀತ ಪ್ರಿಯರಿಗೆ ಮುದ ಉಂಟಾಗುತ್ತದೆ. ಕವಿಯ ಆಶಯವನ್ನು ರಾಗ ಸಂಯೋಜನೆಯಲ್ಲೂ ತರಬೇಕು. ಅವರ ಭಾವಾರ್ಥ, ಆಶಯ ತಿಳಿದುಕೊಳ್ಳದೇ ಸಂಯೋಜಿಸಬಾರದು. ಸಾಹಿತ್ಯ–ಸಂಗೀತದ ಮಧುರ ಬಾಂಧವ್ಯವೇ ಸುಗಮ ಸಂಗೀತ. ಈ ರೀತಿಯ ಅವಿನಾಭಾವ ಸಂಬಂಧ ಬೇರಾವ ರಾಜ್ಯಗಳಲ್ಲೂ ಇಲ್ಲ. ಭಾವನೆ ಮತ್ತು ಸಂಗೀತ ಎರಡಕ್ಕೂ ಮಹತ್ವ ಕೊಡುತ್ತಿರುವುದು ಹೊಸ ಅಲೆ ಸೃಷ್ಟಿಸಿದೆ.

ಪ್ರ

ಸುಗಮ ಸಂಗೀತಕ್ಕೆ ಪ್ರತ್ಯೇಕ ಅಕಾಡೆಮಿ ಬೇಕೆಂಬ ಕೂಗಿದೆಯಲ್ಲಾ?

ಇದು ಸರಿಯಾದುದು. ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯಿಂದ ಬೇರ್ಪಡಿಸಬೇಕು. ಈ ಬಗ್ಗೆ ರಾಜ್ಯ ಸರ್ಕಾರದ ಮುಂದೆ ನಾವು ಬೇಡಿಕೆ ಮಂಡಿಸಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿದ್ದೇವೆ. ಅಕಾಡೆಮಿಯಾದರೆ ಅನುದಾನ ದೊರೆಯುತ್ತದೆ. ಮತ್ತಷ್ಟು ಕೆಲಸ ಮಾಡುವುದಕ್ಕೆ ‘ಶಕ್ತಿ’ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT