ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.6ರಿಂದ ಸುತ್ತೂರು ಜಾತ್ರೆ: ಸಿಎಂ ಸಿದ್ದರಾಮಯ್ಯ, ಅಮಿತ್‌ ಶಾ ಸೇರಿ ಹಲವರು ಭಾಗಿ

Published 3 ಫೆಬ್ರುವರಿ 2024, 23:30 IST
Last Updated 3 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಫೆ.6ರಿಂದ 11ರವರೆಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ (ಸುತ್ತೂರು ಜಾತ್ರೆ) ಆಯೋಜಿಸಲಾಗಿದ್ದು, ಕಪಿಲಾ ನದಿ ತೀರದ ಈ ಶ್ರೀಕ್ಷೇತ್ರದಲ್ಲಿ ಸಡಗರ ಮೇಳೈಸಲಿದೆ.

ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತಯಾರಿ ಭರದಿಂದ ಸಾಗಿದೆ. 

‘ಬರಗಾಲದಲ್ಲಿ ಕಡಿಮೆ ನೀರು ಬಳಸಿ ಲಾಭದಾಯಕ ಕೃಷಿ ಮಾಡುವ ಬಗೆ’ ತಿಳಿಸುವ ಪ್ರಾತ್ಯಕ್ಷಿಕೆ ಒಳಗೊಂಡ ಕೃಷಿ ಮೇ, ಕೃಷಿ ಪರಿಕರಗಳ ವಸ್ತುಪ್ರದರ್ಶನ, ಆರೋಗ್ಯ ತಪಾಸಣೆ ಶಿಬಿರ, ಸಾಂಸ್ಕೃತಿಕ ಮೇಳ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟಗಳು, ಸೋಬಾನೆ ಪದ, ರಂಗೋಲಿ ಸ್ಪರ್ಧೆ, ಧಾರ್ಮಿಕ ಸಭೆ, ಚಿತ್ರಸಂತೆ, ಚಿತ್ರಕಲೆ ಹಾಗೂ ಗಾಳಿಪಟ ಸ್ಪರ್ಧೆ, ಕುಸ್ತಿ ಪಂದ್ಯಾವಳಿ, ತೆಪ್ಪೋತ್ಸವ, ಕಪಿಲಾರತಿ, ಲಕ್ಷದೀಪೋತ್ಸವ ಜರುಗಲಿದೆ.

‘ಎಲ್ಲ ಜಾತಿಗಳ ಮಠಾಧೀಶರು, ಧರ್ಮಗುರುಗಳು, ಕೇಂದ್ರ, ರಾಜ್ಯ ಸಚಿವರು ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಒಟ್ಟು 25 ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಮೂರು ಹೊತ್ತೂ ಪ್ರಸಾದದ ವ್ಯವಸ್ಥೆ ಇರಲಿದೆ’ ಎಂದು ಜೆಎಸ್‌ಎಸ್‌ ಮಹಾವಿದ್ಯಾಪೀಠದ ಎಸ್.‌ಮಂಜುನಾಥ್ ತಿಳಿಸಿದರು.

ಈ ಬಾರಿ ದನಗಳ ಪರಿಷೆ ನಡೆಯಲಿದೆ. ಹೋದ ವರ್ಷ ಚರ್ಮಗಂಟು ರೋಗ ಹರಡುತ್ತಿದ್ದ ಕಾರಣದಿಂದ ದನಗಳ ಪರಿಷೆ ರದ್ದುಪಡಿಸಲಾಗಿತ್ತು.

ಫೆ.7ರಂದು ಬೆಳಿಗ್ಗೆ 10ಕ್ಕೆ ಸಾಮೂಹಿಕ ವಿವಾಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಫೆ.8ರಂದು ಬೆಳಿಗ್ಗೆ 10.30ಕ್ಕೆ ರಥೋತ್ಸವ ನೆರವೇರಲಿದೆ. ನಂತರ ಧಾರ್ಮಿಕ ಸಭೆ, ಸಂಜೆ 4ಕ್ಕೆ ದನಗಳ ಜಾತ್ರೆ ನಡೆಯಲಿದೆ.

ಫೆ.9ರಂದು ಬೆಳಿಗ್ಗೆ 10.30ಕ್ಕೆ ಕೃಷಿ ವಿಚಾರ ಸಂಕಿರಣ ನಡೆಯಲಿದೆ. ಜೈವಿಕ ಗೊಬ್ಬರ ಉತ್ಪಾದನಾ ಘಟಕದ ಶಿಲಾನ್ಯಾಸವನ್ನು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಭಗವಂತ್‌ ಖೂಬಾ ನೆರವೇರಿಸಲಿದ್ದಾರೆ.

ಸುತ್ತೂರು ಜಾತ್ರೆ ಅಂಗವಾಗಿ ನಡೆಯುವ ಮುಖ್ಯ ಕಾರ್ಯಕ್ರಮಗಳ ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ಶನಿವಾರ ತೊಡಗಿದ್ದರು
ಸುತ್ತೂರು ಜಾತ್ರೆ ಅಂಗವಾಗಿ ನಡೆಯುವ ಮುಖ್ಯ ಕಾರ್ಯಕ್ರಮಗಳ ವೇದಿಕೆ ಸಜ್ಜುಗೊಳಿಸುವ ಕಾರ್ಯದಲ್ಲಿ ಕಾರ್ಮಿಕರು ಶನಿವಾರ ತೊಡಗಿದ್ದರು

ಫೆ.9ರಂದು ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ವಿಜೇತರಿಗೆ ‘ಸುತ್ತೂರು ಕುಮಾರ’ ಹಾಗೂ ‘ಸುತ್ತೂರು ಕೇಸರಿ’ ಪ್ರಶಸ್ತಿ ನೀಡಲಾಗುವುದು. ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದವರು ನಿರ್ಮಿಸಿಕೊಟ್ಟಿರುವ ‘ಪಾರ್ವತಮ್ಮ ಮತ್ತು ಶಾಮನೂರು ಶಿವಶಂಕರಪ್ಪ ಅತಿಥಿಗೃಹ’ವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಫೆ.10ರಂದು ಸಂಜೆ 5ಕ್ಕೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT