ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ಮುಕ್ತ ಭಾರತಕ್ಕೆ ಕೊಡುಗೆ ನೀಡಿ: ಟಿ.ರಾಮಸ್ವಾಮಿ

Last Updated 21 ಅಕ್ಟೋಬರ್ 2022, 12:36 IST
ಅಕ್ಷರ ಗಾತ್ರ

ಮೈಸೂರು: ‘ದೇಶವನ್ನು ಹಸಿವು ಮುಕ್ತಗೊಳಿಸಲು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯವು (ಸಿಎಫ್‌ಟಿಆರ್‌ಐ) ಕೊಡುಗೆ ನೀಡಬೇಕು’ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಟಿ.ರಾಮಸ್ವಾಮಿ ಆಶಯ ವ್ಯಕ್ತಪಡಿಸಿದರು.

ಇಲ್ಲಿನ ಸಿಎಫ್‌ಟಿಆರ್‌ಐನಲ್ಲಿ ಶುಕ್ರವಾರ ನಡೆದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ‘ಭಾರತೀಯ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಅಗತ್ಯಗಳು’ ವಿಷಯದ ಕುರಿತು ಅವರು ಮಾತನಾಡಿದರು.

‘ಜಾಗತಿಕ ಹಸಿವಿನ ಸೂಚ್ಯಂಕ–2022 ಬಿಡುಗಡೆಯಾಗಿದ್ದು 121 ದೇಶಗಳ ಪೈಕಿ ಭಾರತ 107ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತ 101 ಹಾಗೂ 2020ರಲ್ಲಿ 94ನೇ ಸ್ಥಾನದಲ್ಲಿತ್ತು. ನೆರೆಯ ಪಾಕಿಸ್ತಾನ (99), ಬಾಂಗ್ಲಾದೇಶ (84), ನೇಪಾಳ (81) ಮತ್ತು ಶ್ರೀಲಂಕಾ (64) ದೇಶಗಳು ಸೂಚ್ಯಂಕದಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. 109ನೇ ಸ್ಥಾನ ಪಡೆದಿರುವ ಅಫ್ಗಾನಿಸ್ತಾನವು ಭಾರತದ ನಂತರದ ಸ್ಥಾನ ಪಡೆದಿರುವ ಏಷ್ಯಾದ ಏಕೈಕ ದೇಶವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರಲ್ಲಿ ಮಕ್ಕಳ ಸಂಖ್ಯೆ ಜಾಸ್ತಿ ಇದೆ. ಇದು, ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದರು.

ಸುಸ್ಥಿರ ಅಭಿವೃದ್ಧಿ ಆಗಬೇಕು:‘ದೇಶದಲ್ಲಿ ಆಹಾರ ಉತ್ಪಾದನೆಗೆ ಸಂಬಂಧಿಸಿದಂತೆ ತಂತ್ರಜ್ಞಾನಗಳ ಮೂಲಕ ಸಿಎಫ್‌ಟಿಆರ್‌ಐ ಬಹಳ ದೊಡ್ಡ ಕೊಡುಗೆ ನೀಡಿದೆ‌. ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುತ್ತಿದೆ. ಇದನ್ನು ಮುಂದುವರಿಸಬೇಕು’ ಎಂದರು.

‘2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಆಗಬೇಕಿದೆ. ಆಹಾರ ಹಾಗೂ ಪೌಷ್ಟಿಕತೆಯ ಭದ್ರತೆಯನ್ನು ಒದಗಿಸಬೇಕಾಗಿದೆ. ಇದೆಲ್ಲವೂ ತಂತ್ರಜ್ಞಾನ ಒಂದರಿಂದಲೇ ಸಾಧ್ಯವಾಗದು. ಎಲ್ಲರಿಗೂ ಲಭ್ಯವಾಗುವಂತೆ ‌ಮಾಡುವುದು ದೊಡ್ಡ ವಿಷಯ. ಅದನ್ನು ತಂತ್ರಜ್ಞಾನದ ಮೂಲಕ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ಹಸಿವಿನಿಂದ ಬಳಲುತ್ತಿರುವ ಜನರನ್ನು ಆದ್ಯತೆಯಾಗಿ‌ ನೋಡಬೇಕು. ಇದಕ್ಕೆ ಸಿಎಫ್‌ಟಿಆರ್‌ಐ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಯೋಚಿಸಬೇಕು’ ಎಂದು ಕಿವಿಮಾತು ಹೇಳಿದರು.

ಸಂಸ್ಥೆಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಸುಧಾಕರ್ ಎಸ್. (ಅತ್ಯುತ್ತಮ ಕೊಡುಗೆ–ಸಾಮಾನ್ಯ ಆಡಳಿತ), ಎಂ.ವಿ.ದಿವ್ಯಾ (ಅತ್ಯುತ್ತಮ ಆಡಳಿತ– ಹಣಕಾಸು ಮತ್ತು ಲೆಕ್ಕ), ಎಲ್.ಕಾವ್ಯಶ್ರೀ (ಅತ್ಯುತ್ತಮ ಕೊಡುಗೆ–ಸ್ಟೋರ್ಸ್ ಅಂಡ್ ಪರ್ಚೇಸ್), ಮಧುಬಾಲಾಜಿ ಸಿ.ಕೆ., ಅಜಂ ಶೇಖ್, ಸರ್ದಾರ್ ಆರ್. ಮತ್ತು ಸಂದೀಪ್ ಮುದಲಿಯಾರ್ ಎನ್. (ಮೂಲವಿಜ್ಞಾನ–ಅತ್ಯುತ್ತಮ ಸಂಶೋಧನಾ ಪ್ರಕಟಣೆ), ಎಂ.ಎಲ್.ಸುಧಾ, ಸೌಮ್ಯಾ ಸಿ., ಎಂ.ಶರವಣ, ಪಿ.ಮಧುಶ್ರೀ, ಜೆ.ಸಿಂಗ್, ಎಸ್.ರಾಯ್‌ ಹಾಗೂ ಪ್ರಭಾಶಂಕರ್ ಪಿ. (ಅನ್ವಯಿಕ ಸಂಶೋಧನೆ– ಅತ್ಯುತ್ತಮ ಪ್ರಕಟಣೆ), ಶ್ರೇಯಾ ಕಲಾಯಿ (ಆಹಾರ ತಂತ್ರಜ್ಞಾನ– ಎಂ.ಎಸ್ಸಿ.ಯ ಅತ್ಯುತ್ತಮ ವಿದ್ಯಾರ್ಥಿ), ಸುಜಾತಾ ವಿ. (ಅತ್ಯುತ್ತಮ ವಿದ್ಯಾರ್ಥಿ), ಸಿ.ಕೆ.ಮಧುಬಾಲಾಜಿ, ವೀರೇಶ್ ತೋರಗಲ್ (ಅತ್ಯುತ್ತಮ ಸಂಶೋಧನಾ ಫೆಲೋ), ಡಾ.ಭಾಗ್ಯಲತಾ ಆರ್. (ಅತ್ಯುತ್ತಮ ತಂತ್ರಜ್ಞಾನ ವರ್ಗಾವಣೆ).

ಪುಟ್ಟರಾಜು ಬಿ.ವಿ., ಸಿ.ನಟರಾಜ್ ಹಾಗೂ ಡಾ.ನರ್ಸಿಂಗ್‌ ರಾವ್ (ಅತ್ಯುತ್ತಮ ತಾಂತ್ರಿಕ ಬೆಂಬಲ ಸಿಬ್ಬಂದಿ), ಡಾ.ಉಷಾ ಧರ್ಮರಾಜ್‌, ಡಾ.ಪದ್ಮಾವತಿ ಟಿ., ಡಾ.ನಂದಿನಿ ಪಿ.ಶೆಟ್ಟಿ, ಎಂ.ಎನ್.ಕೇಶವಪ್ರಕಾಶ್, ಆರ್.ಎಸ್.ಮಾಚೆ (ಅತ್ಯುತ್ತಮ ವೈಯಕ್ತಿಕ ಕೊಡುಗೆ). ಫ್ಲೋರ್‌ ಮಿಲ್ಲಿಂಗ್ ಮತ್ತು ಬೇಕಿಂಗ್ ವಿಭಾಗಕ್ಕೆ ಅತ್ಯುತ್ತಮ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸೆಂಟ್ರಲ್ ಇನ್‌ಸ್ಟ್ರುಮೆಂಟ್ಸ್ ಫಾಕಲ್ಟಿ ಮತ್ತು ಸರ್ವಿಸಸ್ ವಿಭಾಗಕ್ಕೆ ಅತ್ಯುತ್ತಮ ಬೆಂಬಲ ಪ್ರಶಸ್ತಿ ನೀಡಲಾಯಿತು.

ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣಾ ಸಿಂಗ್ ಸಂಸ್ಥೆಯನ್ನು ಪರಿಚಯಿಸಿದರು. ಮುಖ್ಯ ವಿಜ್ಞಾನಿ ಡಾ.ಎಚ್.ಉಮೇಶ್ ಹೆಬ್ಬಾರ್ ಸ್ವಾಗತಿಸಿದರು. ಮುಖ್ಯವಿಜ್ಞಾನಿ ಡಾ.ವಿಜಯಾನಂದ್ ಪಿ. ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT