ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಬಾರದೆ ಶಿಕ್ಷಕರ ಪರದಾಟ: ಎಚ್‌.ಡಿ. ಕೋಟೆ ತಾಲ್ಲೂಕಿನಲ್ಲಿ ಸಮಸ್ಯೆ

3 ತಿಂಗಳಿಂದ ಸಂಬಳ ಆಗಿಲ್ಲ!
ಎಂ. ಮಹೇಶ
Published 5 ಮಾರ್ಚ್ 2024, 6:55 IST
Last Updated 5 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ಮೈಸೂರು: ಸರ್ವ ಶಿಕ್ಷಣ ಅಭಿಯಾನದಡಿ (ಎಸ್‌ಎಸ್‌ಎ) ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿಗೆ ನೇಮಕಗೊಂಡಿರುವ ಶಿಕ್ಷಕರು ಮತ್ತು ಶಿಕ್ಷಕಿಯರಿಗೆ ಮೂರು ತಿಂಗಳಿಂದ (ಡಿಸೆಂಬರ್, ಜನವರಿ ಹಾಗೂ ಫೆಬ್ರುವರಿ) ವೇತನ ಬಂದಿಲ್ಲ. ಇದರಿಂದಾಗಿ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

‘ತಾಂತ್ರಿಕ ಸಮಸ್ಯೆ ಕಾರಣದಿಂದ ವೇತನವಾಗಿಲ್ಲ’ ಎನ್ನುವುದು ಅಧಿಕಾರಿಗಳ ಹೇಳಿಕೆಯಾಗಿದೆ. ಆದರೆ, ನಿಖರವಾಗಿಯೂ ಆಗಿರವುದೇನು ಅಥವಾ ಯಾವಾಗ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸದೇ ಇರುವುದರಿಂದ ಶಿಕ್ಷಕರು ಅತಂತ್ರವಾಗಿದ್ದಾರೆ. ಅಧಿಕಾರಿಗಳು ಕ್ರಮ ವಹಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಎಚ್‌.ಡಿ. ಕೋಟೆ ತಾಲ್ಲೂಕಿಗೆ ಹಂಚಿಕೆಯಾದ ಹಣ ಸರಗೂರಿಗೆ ಹೋಗಿದೆ. ಬೆಂಗಳೂರಿನ ಕಚೇರಿಯಲ್ಲಿ ವ್ಯವಹರಿಸಿ ಎಚ್‌.ಡಿ. ಕೋಟೆಗೆ ವಾಪಸ್ ತೆಗೆದುಕೊಳ್ಳಬೇಕಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

ಆ ತಾಲ್ಲೂಕಿನಲ್ಲಿ ಎಸ್‌ಎಸ್‌ಎ ಅಡಿ ನೇಮಕವಾಗಿರುವ 100 ಮಂದಿಗೂ ಜಾಸ್ತಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 1ರಿಂದ 7ನೇ ತರಗತಿಗೆ ಪಾಠ ಮಾಡುತ್ತಾರೆ.

‘ಸಂಬಳವನ್ನು ನೆಚ್ಚಿಕೊಂಡು ಹಲವು ಕಮಿಟ್‌ಮೆಂಟ್‌ಗಳನ್ನು ಮಾಡಿಕೊಂಡಿರುತ್ತೇವೆ. ಹೌಸಿಂಗ್‌ ಹಾಗೂ ಕಾರು ಮೊದಲಾದ ಸಾಲ ಪಡೆದಿದ್ದೇವೆ. ಇವುಗಳ ಕಂತು ಕಟ್ಟಲಾಗದೇ ಪರದಾಡುತ್ತಿದ್ದೇವೆ. ಮಕ್ಕಳ ಶಾಲೆಗಳಿಗೆ ಪ್ರವೇಶ ಶುಲ್ಕ ಕಟ್ಟುವುದಕ್ಕೂ ಪರದಾಡುತ್ತಿದ್ದವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಮೂರು ತಿಂಗಳಿಂದ ವೇತನ ಬಾರದಿರುವುದಕ್ಕೆ ಕಾರಣವೇನು ಎನ್ನುವುದೇ ಸರಿಯಾಗಿ ಗೊತ್ತಾಗುತ್ತಿಲ್ಲ. ಬಿಇಒ ಕೇಳಿದರೂ ಪ್ರಯೋಜನವಾಗಿಲ್ಲ. ನಾಳೆ ನಾಳೆ ಎಂದೇ ಅಧಿಕಾರಿಗಳು ಹೇಳುತ್ತಿದ್ದಾರೆ. ನಮ್ಮ ಕುಟುಂಬದಲ್ಲಿ ನಾನೊಬ್ಬಳೇ ದುಡಿಯುತ್ತಿದ್ದೇನೆ. ಸಂಬಳ ಬಾರದೇ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ಬೇರೆಯವರ ಬಳಿ ಕೈಸಾಲ ಪಡೆಯುವಂತಹ ಸ್ಥಿತಿ ಬಂದಿದೆ. ಈಗಿನ ದುಬಾರಿ ಜಗತ್ತಿನಲ್ಲಿ ವೇತನವಿಲ್ಲದೇ ಜೀವನ ನಿರ್ವಹಣೆ ಮಾಡುವುದು ಹೇಗೆ? ಸರ್ಕಾರಿ ಕೆಲಸದಲ್ಲಿದ್ದರೂ ಸಾಲ ತೆಗೆದುಕೊಳ್ಳುವುದಕ್ಕೆ ನಾಚಿಕೆ ಪಡುವಂತಹ ಸ್ಥಿತಿ ಬಂದಿದೆ’ ಎಂದು ಅವರು ತಿಳಿಸಿದರು.

‘ಶಿಕ್ಷಕರ ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆಯೇ ಸಂಘದಿಂದ ಬಿಇಒ ಮಾರಯ್ಯ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಭೇಟಿಯಾಗಿಯೂ ಕೋರಿಕೊಂಡಿದ್ದೇವೆ. ಆದರೆ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಕೆಲಸ ಈವರೆಗೂ ಆಗಿಲ್ಲ. ಇದರಿಂದ ಶಿಕ್ಷಕರಿಗೆ ಸಮಸ್ಯೆ ಆಗಿರುವುದು ನಿಜ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಹೇಳಿದರು.

ವೇತನ ಬಾರಿದ್ದರಿಂದ ಶಿಕ್ಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ; ಬಹಳ ಒತ್ತಡಕ್ಕೂ ಒಳಗಾಗಿದ್ದಾರೆ. ಈ ಸ್ಥಿತಿಯಲ್ಲಿ ಅವರು ಮಕ್ಕಳಿಗೆ ಎಷ್ಟು ಪರಿಣಾಮಕಾರಿಯಾಗಿ ಪಾಠ ಮಾಡಬಹುದು? ಆಸಕ್ತಿ ಕಳೆದುಕೊಳ್ಳುವಂತಹ ಅನಿವಾರ್ಯ ಸ್ಥಿತಿ ಬಂದಿದೆ. ಪ್ರಾಥಮಿಕ ಶಾಲಾ ಮಕ್ಕಳಿಗೆ ‘2ನೇ ಸಂಕಲನಾತ್ಮಕ ಪರೀಕ್ಷೆ’ ಶೀಘ್ರದಲ್ಲೇ ಬರಲಿದ್ದು, ಅದಕ್ಕಾಗಿ ಮಕ್ಕಳನ್ನು ಸಿದ್ಧಪಡಿಸಬೇಕಾಗಿದೆ. 5ನೇ ಹಾಗೂ 8ನೇ ತರಗತಿಯವರಿಗೆ ಮಾರ್ಚ್‌ 11ರಿಂದ ‘ಪಬ್ಲಿಕ್ ಪರೀಕ್ಷೆ’ ಶುರುವಾಗಲಿದೆ. ಶಿಕ್ಷಕರಿಗೆ ಎದುರಾಗಿರುವ ತೊಂದರೆಯು, ಈ ಎಲ್ಲ ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ‍ಪರಿಣಾಮ ಬೀರುವ ಆತಂಕ ಎದುರಾಗಿದೆ ಎನ್ನುವುದು ಇತರ ಶಿಕ್ಷಕರ ಕಳವಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT