ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಅರಿಯದೆ ಟಿಪ್ಪು ಹೆಸರಿಗೆ ಮಸಿ: ಮುಸ್ಲಿಂ ಧರ್ಮಗುರು

ಗಂಧದ ಉರುಸ್ ಆಚರಣೆಯಲ್ಲಿ ಮೌಲಾನಾ ಮೊಹಮ್ಮದ್ ಉಸ್ಮಾನ್‌ ಷರೀಫ್ ಆಕ್ರೋಶ
Published 18 ಜೂನ್ 2023, 14:09 IST
Last Updated 18 ಜೂನ್ 2023, 14:09 IST
ಅಕ್ಷರ ಗಾತ್ರ

ಮೈಸೂರು: ‘ಇತಿಹಾಸ ಅರಿಯದ ದೇಶದ್ರೋಹಿಗಳು ಟಿಪ್ಪು ಸುಲ್ತಾನ್‌ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಹೆಸರಿಗೆ ಮಸಿ ಬಳಿಯುತ್ತಿದ್ದಾರೆ’ ಎಂದು ಇಲ್ಲಿನ ಮುಸ್ಲಿಂ ಧರ್ಮಗುರು ಮೌಲಾನಾ ಮೊಹಮ್ಮದ್ ಉಸ್ಮಾನ್‌ ಷರೀಫ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಲಷ್ಕರ್ ಮೊಹಲ್ಲಾದ ಮಿಲಾದ್‌ ಬಾಗ್‌ನಲ್ಲಿ ಟಿಪ್ಪು ಸುಲ್ತಾನ್‌ ಕ್ಷೇಮಾಭಿವೃದ್ಧಿ ಹಾಗೂ ಉರುಸ್‌ ಸಮಿತಿಯಿಂದ ಭಾನುವಾರ ನಡೆದ ‘ಟಿಪ್ಪು ಸುಲ್ತಾನ್‌ ಷಹೀದ್’ 231ನೇ ವಾರ್ಷಿಕ ಗಂಧದ ಉರುಸ್ ಷರೀಫ್‌ ಆಚರಣೆಯಲ್ಲಿ ಅವರು ಮಾತನಾಡಿದರು.

‘ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಹೆಸರು ತಂದವರು ಹಜರತ್ ಟಿಪ್ಪು ಸುಲ್ತಾನ್. ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಡಿದ್ದರು. ಕೆಲವರು ಬ್ರಿಟಿಷರ ಜೊತೆಗೆ ಶಾಮೀಲಾಗಿ, ಅವರ ಗುಲಾಮರಾಗಿ ಬಾಳಿದರೆ, ಟಿಪ್ಪು ಹೋರಾಡಿದ್ದರು. ಗುಲಾಮರಾಗಿ ನೂರು ವರ್ಷ ಬಾಳುವ ಬದಲಿಗೆ, ಅರಸನಾಗಿ ಒಂದು ದಿನವಾದರೂ ಬಾಳಬೇಕು ಎಂದಿದ್ದರು. ಅದರಂತೆಯೇ ನಡೆದುಕೊಂಡರು. ಅವರು ಉಚಿತ ಭಾಗ್ಯಗಳನ್ನು ಪಡೆಯಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಶ್ರಮಿಸಿದ್ದರು. ಅದಕ್ಕಾಗಿಯೇ ಮೈಸೂರು ಹುಲಿ ಎಂದೇ ಪ್ರಸಿದ್ಧರಾಗಿದ್ದಾರೆ’ ಎಂದು ಸ್ಮರಿಸಿದರು.

ಬಸವ ಧ್ಯಾನ ಕೇಂದ್ರದ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ದಲಿತರು ಹಾಗೂ ಹಿಂದುಳಿದ ವರ್ಗಗಳನ್ನು ಶೋಷಣೆ ಮಾಡಿಕೊಂಡು ಬಂದಿದ್ದಾರೆ. ಕೆಲವರಿಗೆ ಸಾವಿರ ಎಕರೆ ಭೂಮಿ ಇದ್ದರೆ, ಬಹುತೇಕರಿಗೆ ಭೂಮಿಯೇ ಇಲ್ಲ. ಭೂಮಿ ಇಲ್ಲದ ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಟಿಪ್ಪು ಭೂಮಿ ನೀಡಿದ್ದರು. ಜೀತಕ್ಕಿದ್ದವರಿಗೆ ವಿಮುಕ್ತಿ ದೊರಕಿಸಿ ಎಲ್ಲರೂ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲೆಂದು ಅನುಕೂಲ ಮಾಡಿಕೊಟ್ಟಿದ್ದರು. ಅವರ ಇತಿಹಾಸವನ್ನು ಬಿಟ್ಟರೆ ಮೈಸೂರಿನ ಚರಿತ್ರೆ ಅಪೂರ್ಣವಾಗುತ್ತದೆ’ ಎಂದರು.

‘ಟಿಪ್ಪು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ಶೃಂಗೇರಿಯ ಶಾರದಾಂಬೆ ದೇವಸ್ಥಾನಕ್ಕೆ ಭೂಮಿಯನ್ನು ನೀಡಿದ್ದರು. ಕೆರೆ– ಕಟ್ಟೆಗಳನ್ನು ಕಟ್ಟಿಸಿದ್ದರು. ಬಡವರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿದ್ದರು. ಸಕಲೇಶಪುರದಲ್ಲಿ ಕೋಟೆಯನ್ನೂ ಕಟ್ಟಿಸಿದ್ದರು. ಕೆಲವೇ ಕೆಲವರು ಟಿಪ್ಪು ಸುಲ್ತಾನ್ ಅವರ ನಿಜವಾದ ಇತಿಹಾಸವನ್ನು ತಿಳಿಯದೆ ಟೀಕೆ–ಟಿಪ್ಪಣಿ ಮಾಡುತ್ತಿದ್ದಾರೆ. ಟಿಪ್ಪು ವಿರೋಧಿಸುವವರು ಅವರು ಬಿಟ್ಟು ಹೋಗಿರುವ ಕೊಡುಗೆಗಳು ಹಾಗೂ ಕುರುಹುಗಳನ್ನು ನೋಡಿ ತಿಳಿಯಲಿ’ ಎಂದು ಹೇಳಿದರು.

ಇದೇ ವೇಳೆ, ಶಾಸಕ ತನ್ವೀರ್ ಸೇಠ್ ಅವರಿಗೆ ‘ಮೈಸೂರು ಹುಲಿ’ ಬಿರುದು ನೀಡಲಾಯಿತು. ನೆರೆದಿದ್ದರಿಂದ ‘ಜೈ ಟಿಪ್ಪು ಸುಲ್ತಾನ್’ ಘೋಷಣೆ ಮೊಳಗಿತು.

ಟಿಪ್ಪು ಸುಲ್ತಾನ್‌ ಕ್ಷೇಮಾಭಿವೃದ್ಧಿ ಹಾಗೂ ಉರುಸ್‌ ಸಮಿತಿ ಅಧ್ಯಕ್ಷ ಎಂ.ಎಸ್.ಮುಕ್ರಂ ಹಾಗೂ ಕಾರ್ಯದರ್ಶಿ ಅಫ್ರೋಜ್‌ ಪಾಷ ಇದ್ದರು.

ತನ್ವೀರ್‌ ಸೇಠ್ ಉರುಸ್ ಮೆರವಣಿಗೆಗೆ ಚಾಲನೆ ನೀಡಿದರು. ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಿಲಾದ್‌ ಬಾಗ್‌ ಉದ್ಯಾನದಿಂದ ಹೂವುಗಳಿಂದ ಅಲಂಕೃತಗೊಂಡಿದ್ದ ಗಂಧವನ್ನು ರಸ್ತೆವರೆಗೆ ಹೊತ್ತು ತಂದ ಸೇಠ್, ನಂತರ ತೆರೆದ ವಾಹನದಲ್ಲಿ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ಹೊತ್ತುಕೊಂಡು ಕುಳಿತು ಸಾಗಿದರು. ಮೆರವಣಿಗೆಯು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ತೆರಳಿತು.

ಟಿಪ್ಪು ಕನಸುಗಳನ್ನು ನನಸಾಗಿಸಲು ಉಸ್ಮಾನ್ ಷರೀಫ್ ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ಸೂಜಿಯ ರೀತಿ ಎಲ್ಲರನ್ನೂ ಒಗ್ಗೂಡಿಸುತ್ತಿದ್ದಾರೆ. ಕೆಲವರು ಕತ್ತರಿ ರೀತಿ ಬೇರೆ–ಬೇರೆ ಮಾಡುತ್ತಿದ್ದಾರೆ
ಬಸವಲಿಂಗ ಸ್ವಾಮೀಜಿ ಬಸವ ಧ್ಯಾನ ಕೇಂದ್ರ
ಶಾಸಕ ತನ್ವಿರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು.
ಮೌಲಾನಾ ಮೊಹಮ್ಮದ್ ಉಸ್ಮಾನ್‌ ಷರೀಫ್ ಮುಸ್ಲಿಂ ಧರ್ಮಗುರು

‘ಟಿಪ್ಪು ಹೆಸರಿಡಬೇಕು’

‘ನಮ್ಮ ಮಕ್ಕಳಿಗೆ ಟಿಪ್ಪು ಹೆಸರಿಡಬೇಕು. ಅವರು ಈ ಭೂಮಿಯ ಪುತ್ರ; ಭಾರತದ ಸುಪುತ್ರ. ಅವರನ್ನು ಮರೆತರೆ ನಾವು ನಮ್ಮನ್ನೇ ಮರೆತಂತಾಗುತ್ತದೆ’ ಎಂದು ಬಸವಲಿಂಗ ಸ್ವಾಮೀಜಿ ಹೇಳಿದರು. ‘ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಟಿಪ್ಪು ದಾರಿಯಲ್ಲಿ ಸಾಗುತ್ತಿರುವ ತನ್ವೀರ್ ಸೇಠ್ ಅವರಿಗೆ ಸಚಿವ ನೀಡದಿರುವುದು ನಮಗೆ ಬೇಸರ ತಂದಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT