ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಜ ವ್ಯಾಪಾರ–ವಹಿವಾಟು ಮೇಲೆ ವಿಚಕ್ಷಣೆ

ತೆರಿಗೆ ಇಲಾಖೆ ಅಧಿಕಾರಿಗಳಿಂದ ನಿಗಾ, ಗಡಿಗಳಲ್ಲಿ ಕಣ್ಣು
Last Updated 15 ಮಾರ್ಚ್ 2023, 21:15 IST
ಅಕ್ಷರ ಗಾತ್ರ

ಮೈಸೂರು: ಅಂತರರಾಜ್ಯಗಳ ನಡುವೆ ನಡೆಯುವ ವ್ಯಾಪಾರ–ವಹಿವಾಟುಗಳಿಗೆ ಹೆಬ್ಬಾಗಿಲಾಗಿರುವ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳಲ್ಲಿ, ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ ನಿಗಾ ವಹಿಸಲಾಗಿದೆ.

ಚುನಾವಣೆ ವೇಳೆ ನಡೆಯಬಹುದಾದ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ವಿಶೇಷವಾಗಿ ವಿಚಕ್ಷಣೆ ವಹಿಸಲಾಗುತ್ತಿದೆ.

ಯಾವ ತಾಲ್ಲೂಕು, ಯಾವ ಪ್ರದೇಶ, ಯಾವ ಗಡಿಯಲ್ಲಿ ಯಾರು, ಯಾವ್ಯಾವ ಸಮಯದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ನೌಕರರು ಹಾಗೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರು ಅಂತರರಾಜ್ಯದಿಂದ ಬರುವ ಗೂಡ್ಸ್‌ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಾರೆ. ತೆರಿಗೆ ವಂಚನೆ ಪ್ರಕರಣವನ್ನಷ್ಟೇ ಅಲ್ಲದೇ, ಚುನಾವಣೆಯಲ್ಲಿ ಹಂಚುವುದಕ್ಕಾಗಿ ಸಾಗಿಸಲಾಗುವ ವಿವಿಧ ಸರಕಗಳ ಮೇಲೂ ಕಣ್ಣಿಟ್ಟಿದ್ದಾರೆ.

ಸಮನ್ವಯದೊಂದಿಗೆ:

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಾದ ನಂತರ ಇಲಾಖೆಯ ಚೆಕ್‌ಪೋಸ್ಟ್‌ಗಳು ಈಗ ಇಲ್ಲ. ಹೀಗಾಗಿ, ಅಧಿಕಾರಿಗಳು ರೌಂಡ್ಸ್‌ನಲ್ಲಿ ಇರುತ್ತಾರೆ. ಪೊಲೀಸ್ ಇಲಾಖೆಯ ಚೆಕ್‌ಪೋಸ್ಟ್‌ನವರೊಂದಿಗೆ ಸಮನ್ವಯದಲ್ಲಿ ಕೆಲಸ ಮಾಡುತ್ತಾರೆ. ದಾಖಲೆಗಳಿಲ್ಲದ ಸರಕು, ಸಾಮಗ್ರಿ ಹಾಗೂ ಚಿನ್ನಾಭರಣ ಮೊದಲಾದವುಗಳನ್ನು ವಶಕ್ಕೆ ಪಡೆದು, ಮುಂದಿನ ಕ್ರಮ ಜರುಗಿಸುತ್ತಾರೆ.

ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿ ಮೈಸೂರು ವಲಯ (ಜಾರಿ)ಯ ವ್ಯಾಪ್ತಿಯಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಡಿದೆ. ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಕೇರಳದ ಗಡಿಯಾದ ಮೈಸೂರು ಜಿಲ್ಲೆಯ ಬಾವಲಿ, ಹ್ಯಾಂಡ್‌ಪೋಸ್ಟ್, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಪೆರಂಬಾಡಿ, ಕುಟ್ಟ, ಚಾಮರಾಜನಗರ ಜಿಲ್ಲೆಯ ಪುಣಜನೂರಿನಲ್ಲಿ ನಿಗಾ ವಹಿಸಲಾಗುತ್ತಿದೆ. ಚುನಾವಣಾ ಆಯೋಗದಿಂದಲೂ ಸೂಚನೆ ನೀಡಲಾಗಿದ್ದು, ಅದರಂತೆ ಕ್ರಮ ವಹಿಸಲಾಗಿದೆ.

ಬೇರೆ ರಾಜ್ಯಗಳಿಂದ ಬರುವ ಸರಕು–ಸಾಮಗ್ರಿಗಳ ಮೇಲೆ ಕಣ್ಣಿಡಲಾಗುತ್ತಿದೆ. ಸೂಕ್ತ ಬಿಲ್‌ಗಳಿವೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಂಡಗಳ ರಚನೆ:

ಮೈಸೂರು ನಗರ ಹಾಗೂ ಗ್ರಾಮಾಂತರ ವಿಭಾಗದಲ್ಲಿ ವಿಚಕ್ಷಣಾ ತಂಡಗಳನ್ನು ರಚಿಸಲಾಗಿದೆ. ಏಳು ಮಂದಿ ಸಿಟಿಒಗಳು (ವಾಣಿಜ್ಯ ತೆರಿಗೆ ಅಧಿಕಾರಿಗಳು) ಇರುತ್ತಾರೆ. ದೂರುಗಳು ಬಂದರೆ ತಕ್ಷಣ ಕ್ರಮ ವಹಿಸುವುದಕ್ಕಾಗಿಯೇ ಇಬ್ಬರು ಸಹಾಯಕ ಆಯುಕ್ತರನ್ನು ಮೈಸೂರು ಕಚೇರಿಯಲ್ಲಿ ನಿಯೋಜಿಸಲಾಗಿದೆ. ವಲಯದ ಪ್ರತಿ ಜಿಲ್ಲೆಗೂ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಎಸ್‌ಟಿ ‍ಪ್ರೈಂ, ಇ–ವೇ ಬಿಲ್‌, ಬೋವೆಬ್‌ ತಂತ್ರಾಂಶಗಳ ಆಧಾರದಲ್ಲಿ ಮಾಹಿತಿ ಆಧರಿಸಿ, ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದಕ್ಕೆ ಕ್ರಮ ವಹಿಸಲಾಗಿದೆ ಎನ್ನುತ್ತವೆ ಮೂಲಗಳು.

ತೆರಿಗೆ ಪಾವತಿಸುವವರಿಗೆ ಸಂಬಂಧಿಸಿದ ಘೋಷಿತ ಗೋದಾಮುಗಳು ಹಾಗೂ ಅನಧಿಕೃತ ಗೋದಾಮುಗಳಿದ್ದರೆ ಅವುಗಳ ಮೇಲೆಯೂ ಕಣ್ಣಿಡಲಾಗಿದೆ. ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿಗಳಿಂದ ಮಾಹಿತಿ ಪಡೆದು ನೋಂದಾಯಿತ ಕರ ಪಾವತಿದಾರರ ಮೇಲೂ ನಿಗಾ ವಹಿಸಲಾಗುತ್ತಿದೆ. ಅಸಹಜ ವ್ಯಾಪಾರ–ವಹಿವಾಟು ನಡೆಯುತ್ತಿದೆಯೇ ಎನ್ನುವುದನ್ನು ಪರಿಶೀಲಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಈ ಸಂಬಂಧ ಚುನಾವಣಾ ಆಯೋಗದಿಂದಲೂ ತರಬೇತಿ ನೀಡಲಾಗಿದೆ ಹಾಗೂ ಅವರ ಸೂಚನೆ ಆಧರಿಸಿ ಮತ್ತು ಜಿಎಸ್‌ಟಿ ಕಾಯ್ದೆ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಆಮಿಷಗಳಿಗೆ ಬ್ರೇಕ್ ಹಾಕಲು:

ರೈಲು ನಿಲ್ದಾಣ, ಟ್ರಾನ್ಸ್‌ಪೋರ್ಟ್‌ ಕಂಪನಿಗಳ ಮೇಲೂ ನಿಗಾ ವಹಿಸಲಾಗುತ್ತಿದೆ. ಮತದಾರರಿಗೆ ಆಮಿಷ ಒಡ್ಡುವುದಕ್ಕಾಗಿ ನೀಡಲಾಗುವ ಉಡುಗೊರೆಗಳ ಮೇಲೂ ವಿಚಕ್ಷಣೆ ಮಾಡಲಾಗುತ್ತಿದೆ. ಕುಕ್ಕರ್, ಸೀರೆ, ಸಿದ್ಧಉಡುಪುಗಳು, ಟಿವಿಗಳು, ಮೊಬೈಲ್‌ ಫೋನ್‌ಗಳು, ಮಿಕ್ಸಿ, ಗ್ರೈಂಡರ್, ಫ್ಯಾನ್‌ಗಳು, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳು, ಚಿಟ್‌ ಪಂಡ್‌, ಸಣ್ಣ ಮತ್ತು ಸೂಕ್ಷ್ಮ ಸಾಲದ ವಹಿವಾಟು ಪ್ರಮಾಣದ ಅಸಹಜ ವ್ಯತ್ಯಾಸವನ್ನು ಗುರುತಿಸಲಾಗುತ್ತಿದೆ. ಆಮಿಷಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುತ್ತಿದೆ.

‘ಬಿಲ್ಡರ್‌ಗಳು ಹಾಗೂ ರಿಯಲ್‌ ಎಸ್ಟೇಟ್‌ ವಲಯದವರಿಗೆ ಯಾವ ರೀತಿ ಪೇಮೆಂಟ್ ಆಗುತ್ತಿದೆ ಎನ್ನುವುದನ್ನು ಗಮನಹರಿಸುತ್ತಿರುತ್ತೇವೆ. ಅಂತರರಾಜ್ಯ ಗಡಿಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗೆ ಸೂಚನೆ ಕೊಡಲಾಗಿದೆ. ಯಾವ್ಯಾವ ಮಾರ್ಗದಲ್ಲಿ ಸಾಗಿಬಹುದು ಎನ್ನುವುದನ್ನು ತಿಳಿಸಲಾಗಿದೆ. ರಾಜ್ಯದೊಳಕ್ಕೆ ಎಂತಹ ಸರಕು, ಯಾವ ಪ್ರಮಾಣದಲ್ಲಿ ಬರುತ್ತಿದೆ ಎನ್ನುವುದನ್ನು ಗಮನಿಸಲಾಗುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಂತ್ರಜ್ಞಾನ ಬಳಸಿ

ಚುನಾವಣಾ ಅಕ್ರಮ ತಡೆಗೆ ಸಂಬಂಧಿಸಿದಂತೆ ಇಲಾಖೆಯಿಂದಲೂ ಕ್ರಮ ವಹಿಸಲಾಗಿದ್ದು, ಸಿಬ್ಬಂದಿ ನಿಯೋಜಿಸಲಾಗಿದೆ. ತಂತ್ರಜ್ಞಾನಗಳನ್ನು ಬಳಸಿಕೊಂಡು ನಿಗಾ ವಹಿಸಲಾಗಿದೆ.

–ಕಂಬಣ್ಣ, ವಾಣಿಜ್ಯ ತೆರಿಗೆ ಜಂಟಿ ಆಯುಕ್ತರು, ಮೈಸೂರು ವಲಯ

ಬ್ಯಾಂಕ್‌ಗಳಿಗೆ ಸೂಚನೆ

ಹೆಚ್ಚು ಮೊತ್ತ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ದೊಡ್ಡ ಮೊತ್ತ ತೆಗೆಯುವುದು ಕಂಡುಬಂದಲ್ಲಿ ಪರಿಶೀಲಿಸಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

–ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT