ನಂಜನಗೂಡು: ತಾಲ್ಲೂಕಿನ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಬೈಕ್ ವ್ಹೀಲಿಂಗ್ ನಡೆಸಿ ವೃದ್ಧರೊಬ್ಬರ ಸಾವಿಗೆ ಕಾರಣರಾಗಿದ್ದ, ನಗರದ ಸಂಚಾರ ಪೊಲೀಸ್ ಠಾಣೆಯ ಮಹಿಳಾ ಅಧಿಕಾರಿ ಪುತ್ರ, ಆರೋಪಿ ಸಯ್ಯದ್ ಐಮಾನ್ ಎಂಬುವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆಯಲ್ಲಿ ಮಹಿಳಾ ಅಧಿಕಾರಿಯನ್ನು ಡಿಸಿಆರ್‌ಬಿಗೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.
ಪ್ರತಿಭಟನೆ: ‘ಪೊಲೀಸ್ ಇಲಾಖೆಯು ಕ್ರಮ ವಹಿಸದ ಕಾರಣಕ್ಕೆ ಅಮಾಯಕ ರೈತನ ಸಾವಾಗಿದೆ’ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಮುಖಂಡ ಮರಂಕಯ್ಯ ಮಾತನಾಡಿ, ‘ಪೊಲೀಸ್ ಅಧಿಕಾರಿಯ ಮಗನಿಗೆ 18 ವರ್ಷ ವಯಸ್ಸಾಗಿದೆ. ಈ ಹಿಂದೆಯೂ ವ್ಹೀಲಿಂಗ್ ನಡೆಸಿದ್ದಕ್ಕೆ ಪ್ರಕರಣ ದಾಖಲಾಗಿದೆ. ಆದರೂ ಕ್ರಮ ವಹಿಸಲಿಲ್ಲ. ಹೀಗಾಗಿಯೇ ರೈತ ಬಲಿಯಾಗಿದ್ದಾನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆರೋಪಿಯ ಮೇಲೆ 8ಕ್ಕೂ ಹೆಚ್ಚು ಪ್ರಕರಣಗಳಿವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಪ್ರಾಪ್ತನಿಗೆ ವಾಹನ ನೀಡುವಂತಿಲ್ಲ. ಪೋಷಕರ ವಿರುದ್ಧವೂ ಕ್ರಮ ಜರುಗಿಸುವ ಕಾನೂನು ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು. ‘ಅಧಿಕಾರಿಯನ್ನು ಅಮಾನತು ಮಾಡಬೇಕು. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.
‘ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಗೋವಿಂದ ರಾಜು ಮನವಿ ಆಲಿಸಿ, ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. 7 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ಪ್ರತಿಭಟನೆ ವಾಪಸ್ ಪಡೆದಿದ್ದೇವೆ’ ಎಂದು ಮರಂಕಯ್ಯ ತಿಳಿಸಿದರು.
ಮುಖಂಡರಾದ ಬಕ್ಕಹಳ್ಳಿ ನಂಜುಂಡಸ್ವಾಮಿ, ಹೆಜ್ಜಿಗೆ ಪ್ರಕಾಶ್, ಬಾಲು ಇಮ್ಮಾವು, ರಂಗಸ್ವಾಮಿ, ಸಂತೋಷ್, ಪ್ರೇಮರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.