ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಕೊನೆ ಚುನಾವಣೆ, ಅವಕಾಶ ಕೇಳಿದ್ದೇನೆ: ರಾಮದಾಸ್

ಮನೆ ಬಳಿ ಜಮಾಯಿಸಿದ್ದ ಕಾರ್ಯಕರ್ತರ ಎದುರು ರಾಮದಾಸ್ ಭಾವುಕ ಭಾಷಣ
Last Updated 15 ಏಪ್ರಿಲ್ 2023, 15:57 IST
ಅಕ್ಷರ ಗಾತ್ರ

ಮೈಸೂರು: ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳು ಶನಿವಾರ ಇಲ್ಲಿನ ವಿದ್ಯಾರಣ್ಯಪುರಂನಲ್ಲಿರುವ ಅವರ ಮನೆ ಮುಂದೆ ಶನಿವಾರ ಜಮಾಯಿಸಿ, ಶಕ್ತಿ ಪ್ರದರ್ಶಿಸಿದರು.

ವರಿಷ್ಠರನ್ನು ಭೇಟಿಯಾಗಿ ಬೆಂಗಳೂರಿನಿಂದ ಬಂದ ರಾಮದಾಸ್ ಅವರನ್ನು ಸುತ್ತುವರಿದು, ಟಿಕೆಟ್‌ ಘೋಷಣೆಯಲ್ಲಿ ವಿಳಂಬ ಧೋರಣೆ ತಾಳಿರುವ ಹೈಕಮಾಂಡ್‌ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಕ್ಷೇತ್ರವನ್ನು ಮಾದರಿಯಾಗಿಸಲು ಶ್ರಮಿಸಿರುವ ನಿಮಗೆ ಕಾಯುವ ಶಿಕ್ಷೆ ಕೊಟ್ಟಿರುವುದು ಹಾಗೂ ಟಿಕೆಟ್‌ ವಿಷಯದಲ್ಲಿ ಆಶಾದಾಯಕ ಬೆಳವಣಿಗೆಗಳು ನಡೆಯದಿರುವುದು ನಮಗೆ ಆತಂಕ ಉಂಟು ಮಾಡಿದೆ. ಕ್ಷೇತ್ರಕ್ಕೆ ಬಂದಿದ್ದ ಎಲ್ಲ ಕೇಂದ್ರ ಹಾಗೂ ರಾಜ್ಯ ನಾಯಕರು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಆದರೆ, ಈವರೆಗೂ ಟಿಕೆಟ್ ಘೋಷಿಸದಿರುವುದು ಸರಿಯಲ್ಲ’ ಎಂದು ತಿಳಿಸಿದರು.

ನೆರೆದಿದ್ದ ಅಭಿಮಾನಿಗಳಲ್ಲಿ ಮಹಿಳೆಯರು ಜಾಸ್ತಿ ಇದ್ದರು. ಮಹಿಳೆಯೊಬ್ಬರು, ‘ಶಾಸಕರಿಗಾಗಿ ಪ್ರಾಣವನ್ನೇ ಕೊಡುತ್ತೇನೆ. ಟಿಕೆಟ್ ಕೊಡದಿದ್ದರೆ ಸಹಿಸುವುದಿಲ್ಲ’ ಎಂದು ಕಣ್ಣೀರಿಟ್ಟರು. ಮುಖಂಡರು ಹಾಗೂ ನೆರೆದಿದ್ದವರು ತಮ್ಮ ಬಗ್ಗೆ ತೋರಿದ ಪ್ರೀತಿ–ಅಭಿಮಾನವನ್ನು ಕಂಡು ರಾಮದಾಸ್ ಕೂಡ ಕಣ್ಣೀರಿಟ್ಟರು. ಎಲ್ಲರನ್ನೂ ಉದ್ದೇಶಿಸಿ ಭಾವುಕವಾಗಿ ಭಾಷಣ ಮಾಡಿದರು.

‘ಕ್ಷೇತ್ರದಲ್ಲಿ ಜಾತಿ–ಧರ್ಮವನ್ನು ಮೀರಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. 30 ವರ್ಷಗಳಿಂದ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದೇನೆ. ಎರಡು ಬಾರಿ ಸಚಿವ ಸ್ಥಾನ ಸಿಗದಿದ್ದರೂ ಬೇಸರ ಮಾಡಿಕೊಂಡಿಲ್ಲ. ಈ ಬಾರಿಯ ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ನನ್ನ ಪರವಾಗಿ ಬಂದಿವೆ. ಇದೆಲ್ಲವನ್ನೂ ವರಿಷ್ಠರ ಗಮನಕ್ಕೆ ತಂದು ಬಂದಿದ್ದೇನೆ. ನಿಯತ್ತನ್ನು ಪರೀಕ್ಷಿಸುವ ಕಾಲ ಇದಾಗಿದೆ. ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದೇನೆ. ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ. ಅವುಗಳನ್ನು ಪೂರ್ಣಗೊಳಿಸಲು ಮತ್ತೊಂದು ಅವಕಾಶ ಕೇಳಿದ್ದೇನೆ’ ಎಂದು ತಿಳಿಸಿದರು.

‘ಕಾಯೋಣ. ಬೇರಾವ ಪಕ್ಷವನ್ನೂ ಸೇರುವುದಿಲ್ಲ. ಬಿಜೆಪಿಯಿಂದ ದೂರಾಗುವುದು ಸುಲಭದ ಮಾತಲ್ಲ. ಏಕೆಂದರೆ ನಾವು ಕಟ್ಟಿರುವುದದು. ಗಣ್ಯರು, ಮಠಧೀಶರ ಜೊತೆಗೂ ಚರ್ಚಿಸಬೇಕಿದೆ. ಮುಂದಿನ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಕಾರ್ಯಕರ್ತರ ನಿರ್ಣಯವೇ ಅಂತಿಮ’ ಎಂದರು.

‘2020ರಿಂದ ನೋವು ನೀಡುವುದು ಆರಂಭವಾಗಿದೆ. ನಿಮ್ಮೆಲ್ಲರ ಒತ್ತಾಯದ ಮೇರೆಗೆ ನಾನು ದೆಹಲಿಗೆ ಹೋದೆ. ಅಲ್ಲಿಗೆ ಹೋಗುವ ಅಗತ್ಯವಿರಲಿಲ್ಲ’ ಎಂದು ತಿಳಿಸಿದರು.

‘ನನಗೆ ಮಂತ್ರಿ ಸ್ಥಾನ ತಪ್ಪಿದಾಗಲೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೋವು ಅನುಭವಿಸಿದ್ದರು. ಆದರೆ, ಹೊರಗೆ ಬಂದು ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಆದರೆ, ಈಚಿನ ಬೆಳವಣಿಗೆಗಳು ಅವರಿಗೆ ಮತ್ತಷ್ಟು ನೋವು ಕೊಟ್ಟಿರುವುದರಿಂದ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವರಿಷ್ಠರ ನಡೆ ಏನಿರಲಿದೆ ಎನ್ನುವುದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಿದ್ದೇವೆ’ ಎಂದು ರಾಮದಾಸ್ ಪತ್ರಕರ್ತರಿಗೆ ತಿಳಿಸಿದರು.

ಟಿಕೆಟ್ ಸಿಗದಿದ್ದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ಅಭಿಮಾನಿಗಳು ಪಟ್ಟು ಹಿಡಿದರು. ‘ನೀವು ಕೈಗೊಳ್ಳುವ ನಿರ್ಣಯಕ್ಕೆ ಬದ್ಧವಾಗಿರಲಿದ್ದೇನೆ’ ಎಂದು ರಾಮದಾಸ್ ಕೂಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT