ಗುರುವಾರ , ಜೂನ್ 30, 2022
25 °C
ಸಿಎಸ್‌ಆರ್ ನಿಧಿಯಡಿ ಜಿಲ್ಲೆಗೆ 100 ಆಮ್ಲಜನಕ ಸಾಂದ್ರಕಗಳು

‘ಆಮ್ಲಜನಕ ಕೊರತೆ ನಿಗಿಸಲು ಜಿಲ್ಲಾಡಳಿತ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಅಕಸ್ಮಾತ್ ಜಿಲ್ಲೆಯಲ್ಲಿ ಕೋವಿಡ್- 19ನ ಮೂರನೇ ಅಲೆ ಎದುರಾದರೆ ಅದರ ನಿಯಂತ್ರಣಕ್ಕೆ ಈಗಿನಿಂದಲೇ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಚಿಕಿತ್ಸೆಯಲ್ಲಿ ನೆರವು ನೀಡುವ ಆಮ್ಲಜನಕ ಸಾಂದ್ರಕ (ಆಕ್ಸಿಜನ್ ಕಾನ್ಸಂಟ್ರೆರ‍್ಸ್) ಯಂತ್ರಗಳನ್ನು ಎಲ್ಲಾ ತಾಲ್ಲೂಕುಗಳಿಗೂ ಹಸ್ತಾಂತರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಯೋಜನಾ ಇಲಾಖೆಯ ಸಿ.ಎಸ್.ಆರ್ (ಕಮ್ಯೂನಿಟಿ ಸೋಸಿಯಲ್ ರೆಸ್ಪಾನ್ಸಿಬಲಿಟಿ) ನಿಧಿಯಿಂದ ನೀಡಲಾದ 100 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಪರಿಶೀಲಿಸಿದ ನಂತರ ಮಾತನಾಡಿದರು.

ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಪ್ರಮಾಣ ಕಡಿಮೆಯಿದೆ. ಸೋಂಕು ತೀವ್ರವಾಗಿ ಬಾಧಿಸದ ಸಾಮಾನ್ಯ ರೋಗಿಗಳಿಂದ ಹಿಡಿದೂ ಪ್ರಾಣವಾಯು ಅಗತ್ಯವಿರುವ ರೋಗಿಗಳ ಚಿಕಿತ್ಸೆಯಲ್ಲಿ ನೆರವು ನೀಡಲಿರುವ 5 ರಿಂದ 10 ಲೀಟರ್ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಸಂಗ್ರಹಿಸುವ ಕೆಲಸವಾಗುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಅಗತ್ಯ ಸಂದರ್ಭದಲ್ಲಿ ಇವುಗಳನ್ನು ಪರ್ಯಾಯವಾಗಿ ಬಳಸಬಹುದಾಗಿದೆ ಎಂದರು.

ಆರೋಗ್ಯ ಇಲಾಖೆಯಿಂದ 50, ಸಿಎಸ್‌ಆರ್ ನಿಧಿಯಿಂದ 20 ಆಮ್ಲಜನಕ ಸಾಂದ್ರಕ ಯಂತ್ರ ಈಗಾಗಲೇ ಪಡೆಯಲಾಗಿದೆ. ಯೋಜನಾ ಇಲಾಖೆಯ ಸಿಎಸ್‌ಆರ್ ನಿಧಿಯಡಿ ಜಿಲ್ಲೆಗೆ ಒಟ್ಟು 180 ಆಮ್ಲಜನಕ ಸಾಂದ್ರಕ ಯಂತ್ರಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಇದೀಗ ಪ್ರಾಥಮಿಕ ಹಂತವಾಗಿ 100 ಯಂತ್ರಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 170 ಆಮ್ಲಜನಕ ಸಾಂದ್ರಕ ಯಂತ್ರಗಳಿದ್ದು, ಅವುಗಳನ್ನು ತಾಲ್ಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ, ಇತ್ತೀಚೆಗೆ ಚಾಲನೆ ನೀಡಲಾದ ಆಕ್ಸಿಜನ್ ಬಸ್‌ಗಳು ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಿಗೂ ಸಹ ನೀಡಲಾಗುವುದು. ಅಲ್ಲದೇ ಈ ಯಂತ್ರಗಳ ಬಳಕೆ ಕುರಿತು ಪ್ರತಿ ಆಸ್ಪತ್ರೆಯ ಇಬ್ಬರೂ ಸಿಬ್ಬಂದಿಗೆ ತಾಂತ್ರಿಕ ತರಬೇತಿ ಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ನಾಲ್ಕು ದಿನಗಳಲ್ಲಿ ತರಬೇತಿ ನೀಡಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬಳಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸುರೇಂದ್ರ ಬಾಬು, ಡಿಎಸ್‌ಒ ಡಾ. ನಾಗರಾಜ್ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು