ಶನಿವಾರ, ಆಗಸ್ಟ್ 13, 2022
23 °C

ದೇವಸೂಗೂರು: 681 ಜನ ನಾಮಪತ್ರ ಸಲ್ಲಿಕೆ

ಉಮಾಪತಿ .ಬಿ.ರಾಮೋಜಿ Updated:

ಅಕ್ಷರ ಗಾತ್ರ : | |

Prajavani

ಶಕ್ತಿನಗರ: ಗ್ರಾಮ ಪಂಚಾಯಿತಿ ಚುನಾವಣೆಗೆ ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ, ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮುಗಿಬಿದ್ದಿದ್ದರು.

ಅಧಿಕಾರ ವಿಕೇಂದ್ರೀಕರಣದಿಂದಾಗಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಬಲ ಬಂದಿದೆ. ಸ್ಥಳೀಯವಾಗಿ ಕರವಸೂಲಿ, ಸರ್ಕಾರದ ಯೋಜನೆಗಳ ಅನುಷ್ಠಾನದ ಜೊತೆಗೆ, ಇದೀಗ ನರೇಗಾ ಕಾಮಗಾರಿಗಳಿಂದಾಗಿ ಗ್ರಾಮ ಪಂಚಾಯಿತಿ ಸದಸ್ಯತ್ವಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ.

ಹೀಗಾಗಿ ಈ ಬಾರಿ ಹಿಂದೆಂದಿಗಿಂತ ತುರುಸಿನ ಸ್ಪರ್ಧೆ ಇರುವುದರಿಂದ ದೇವಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 224 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಕರವಸೂಲಿ ಮಾಡುವ ಪಂಚಾಯಿತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯೂ ಇದೆ. ಇಲ್ಲಿ 58 ಸದಸ್ಯ ಸ್ಥಾನಗಳಿದ್ದು, ರಾಯಚೂರು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದಸ್ಯ ಬಲ ಹೊಂದಿರುವ ಖ್ಯಾತಿಯೂ ಇದರದ್ದೇ ಆಗಿದೆ.

ಜೇಗರಕಲ್–63, ಕಾಡ್ಲೂರು–64, ಶಾಖವಾದಿ–39, ಸಗಮಕುಂಟ –59, ಚಿಕ್ಕಸೂಗೂರು– 44, ಮನ್ಸಲಾಪುರ– 94, ಯದ್ಲಾಪುರ–94 ಸೇರಿ ಒಟ್ಟು 681 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆಕಾಂಕ್ಷಿಗಳು ಮತದಾರರನ್ನು ಸೆಳೆಯಲು ಹಲವಾರು ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಅವಿರೋಧ ಆಯ್ಕೆ ಸಾಧ್ಯತೆ: ಶಾಖವಾದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸಂಕನೂರು ಗ್ರಾಮದ ಪರಿಶಿಷ್ಟ ಜಾತಿ ಮೀಸಲಿರುವ ವಾರ್ಡ್‌ ಸ್ಥಾನಕ್ಕೆ ಹನುಮಂತಪ್ಪ , ಪಲ್ಕಂದೊಡ್ಡಿ ಗ್ರಾಮದ ಪರಿಶಿಷ್ಟ ಪಂಗಡ ಮಹಿಳಾ ಮೀಸಲಿರುವ ವಾರ್ಡ್‌ ಸ್ಥಾನಕ್ಕೆ ಲಕ್ಷ್ಮೀಶ್ರೀನಿವಾಸ. ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹನುಮನದೊಡ್ಡಿ ಗ್ರಾಮದ ಸಾಮಾನ್ಯ ವರ್ಗದ ವಾರ್ಡ್ ಸ್ಥಾನಕ್ಕೆ ಮಲ್ಲಪ್ಪ ದಳಪತಿ, ಹಿಂದುಳಿದ ವರ್ಗಗಳ ಮಹಿಳೆಗೆ ಮೀಸಲಿರುವ ಇನ್ನೊಂದು ವಾರ್ಡ್‌ನ ಸ್ಥಾನಕ್ಕೆ ಶರಣಮ್ಮಶಿವರಾಜ. ಜೇಗರಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಶ್ರೀನಿವಾಸಪುರ ಗ್ರಾಮದ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರುವ ಸ್ಥಾನಕ್ಕೆ ದೇವಮ್ಮಹನುಮರೆಡ್ಡಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರೆಲ್ಲರೂ ಅವಿರೋಧವಾಗಿ ಆಯ್ಕೆ ಮಾಡುವ ಲಕ್ಷಣಗಳು ಇವೆ.

ವಾರ್ಡ್ ಸಂಖ್ಯೆಯ 4 ರಲ್ಲಿ ಹಿಂದುಳಿದ ವರ್ಗಗಳ ಮಹಿಳಾ ಮೀಸಲಿರುವ ಸ್ಥಾನಕ್ಕೆ ಶ್ರೀಮತಿ ಬಸನಗೌಡ ಮತ್ತು ಪರಿಶಿಷ್ಟ ಜಾತಿ ಮಹಿಳಾ ಮೀಸಲಿರುವ ಸ್ಥಾನಕ್ಕೆ ಶರಣಮ್ಮ ಆಂಜಿನಯ್ಯ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದರು.

ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳು ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು