ಭಾನುವಾರ, ಸೆಪ್ಟೆಂಬರ್ 26, 2021
23 °C
ದೇಶದ ವಿವಿಧೆಡೆ ನಡೆದ ಅತ್ಯಾಚಾರ ಪ್ರಕರಣಗಳ ಖಂಡಿಸಿ ಮೆರವಣಿಗೆ

‘ಮಹಿಳೆಯರಿಗೆ ರಕ್ಷಣೆ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ದೆಹಲಿಯಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯಾಗಬೇಕು. ಮೈಸೂರು ವಿದ್ಯಾರ್ಥಿನಿ ಹಾಗೂ ಬಾಂಬೆಯ ಗೃಹಿಣಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ನೆರೆದಿದ್ದ ನೂರಾರು ಸಂಖ್ಯೆಯ ಮುಸ್ಲಿಂ ಸಮುದಾಯ ಮಹಿಳೆಯರು, ವಿವಿಧ ಸಂಘಟನೆಗಳು ಮುಖಂಡರು ಮಹಾತ್ಮಗಾಂಧಿ ವೃತ್ತದ ಮೂಲಕ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೈಯಲ್ಲಿ ಪ್ಲೇಕಾರ್ಡ್‍ಗಳನ್ನು ಹಿಡಿದುಕೊಂಡು ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಪ್ರತಿಭಟನಾ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷೆ ಸರಸ್ವತಿ ಪಾಟೀಲ ಮಾತನಾಡಿ,‘ಆ.26 ರಂದು ದೆಹಲಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ನಾಗರಿಕ ರಕ್ಷಣಾ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದ ರಾಬಿಯಾ ಸೈಫಿ ಅವರನ್ನು ಮೇಲಾಧಿಕಾರಿಗಳ ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಮೂಹಿಕ ಅತ್ಯಾಚಾರಗೈದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಾಂಬೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಮಹಿಳೆ ಸಾವನ್ನಪ್ಪಿದ್ದಾರೆ. ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಇವೆಲ್ಲ ಘಟನೆಗಳು ನಾಗರಿಕ ಸಮಾಜವೇ ತಲೆತಗ್ಗಿಸುವ ಸಂಗತಿಗಳಾಗಿವೆ. ರಾಬಿಯಾ ಸೈಫಿಯಂಥ ಸರ್ಕಾರದ ರಕ್ಷಣಾ ಅಧಿಕಾರಿಗೆ ರಕ್ಷಣೆ ಇಲ್ಲವೆಂದರೆ ಜನಸಾಮಾನ್ಯರ ಗತಿಯೇನು ಎಂಬ ಪ್ರಶ್ನೆ ಮಹಿಳೆಯರಲ್ಲಿ ಇನ್ನಷ್ಟು ಅಭದ್ರತೆ ಹೆಚ್ಚಿಸಿದೆ’ ಎಂದು ದೂರಿದರು.

‘ಟಿವಿ, ಮೊಬೈಲ್, ಪತ್ರಿಕೆಗಳಲ್ಲಿ ಯುವಜನರನ್ನು ಅಶ್ಲೀಲತೆ ಮತ್ತು ಅಪರಾಧ ಕೃತ್ಯಗಳಿಗೆ ಉದ್ರೇಕಿಸುವ ವಿಡಿಯೋ, ಚಿತ್ರಗಳು ಎಗ್ಗಿಲ್ಲದೇ ಪ್ರಸಾರವಾಗುತ್ತಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗಿದೆ. ಸರ್ಕಾರವೇ ಮುಂದಾಗಿ ಮಾರುತ್ತಿರುವ ಮದ್ಯ ಮತ್ತು ಮಾದಕ ವಸ್ತುಗಳು ಸಹ ಇಂಥ ಕೃತ್ಯಗಳನ್ನು ಪ್ರಚೋದಿಸುತ್ತವೆ. ಈ ಕೂಡಲೇ ಮಾಧ್ಯಮಗಳಲ್ಲಿ ಅಶ್ಲೀಲ ಚಿತ್ರ ಮತ್ತು ಅಪರಾಧ ಸಮರ್ಥಿಸುವ ಹಲ್ಲೆ, ಲಿಂಚಿಂಗ್‍ಗಳ ಪ್ರಸಾರವನ್ನು ನಿಷೇಧಿಸಬೇಕು’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಆಗ್ರಹಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯೆಯರಾದ ಲುಬ್ನಾ ಬೆಲಗಾಮಿ ಹಾಗೂ ಕುಬ್ರಾ ಖಾನಮ್ ಅವರಿಂದ ಅತ್ಯಾಚಾರ ಘಟನೆಯ ಕುರಿತು ಕಿರು ಪ್ರದರ್ಶನ ನಡೆಯಿತು. ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಹುಸೇನಸಾಬ ಮನವಿ ಪತ್ರ ಓದಿ ಉಪ ತಹಶೀಲ್ದಾರ್ ಅಂಬಾದಾಸ್ ಅವರಿಗೆ ಸಲ್ಲಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಆಯಿಶಾ ಬತುಲ್, ಸದಸ್ಯೆ ಫಾತೀಮಾ ಬೆಲಗಾಮಿ ಮಾತನಾಡಿದರು.

ಜಮಾಅತೆ ಇಸ್ಲಾಮಿ ಮಹಿಳಾ ಘಟಕದ ಸದಸ್ಯರಾದ ಸೈಯದಾ ಬಷೀರುನ್ನಿಸಾ, ಖಮರ್ ಸುಲ್ತಾನಾ, ಜಿಐಒ ರಾಜ್ಯ ಘಟಕದ ಕಾರ್ಯದರ್ಶಿ ಅಮತುಷಿಫಾ, ಜಿಐಓ ಸ್ಥಾನೀಯ ಅಧ್ಯಕ್ಷೆ ಸಫಿಯಾ ಫರ್ವಿನ್, ಸದಸ್ಯರಾದ ಸುಮಯ್ಯ ಬೇಗಂ, ಸೈದಾ ಬೇಗಂ, ರಿಜ್ವಾನಾ, ರಶೀದಾಬೇಗಂ, ಶಹನಾಜ್ ಬೇಗಂ, ಆರೋಗ್ಯಮ್ಮ ಜವಳಗೇರಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಡಿ.ಎಚ್.ಕಂಬಳಿ, ಶೇಕ್ಷಾಖಾದ್ರಿ, ನರಸಿಂಹಪ್ಪ, ನಾಗರಾಜ್ ಪೂಜಾರ್, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ವೀರಭದ್ರಗೌಡ ಅಮರಾಪುರ, ಬಸವರಾಜ ಏಕ್ಕಿ, ಶಂಕರ ಗುರಿಕಾರ, ನಾರಾಯಣ ಬೆಳಗುರ್ಕಿ, ಮಹಾದೇವಪ್ಪ ಧುಮತಿ, ಸಮ್ಮದ್ ಚೌದ್ರಿ ಹಾಗೂ ಚಾಂದಪಾಷಾ ಜಾಗೀರದಾರ ಅವರು ಇದ್ದರು.

ಅತ್ಯಾಚಾರ ಪ್ರಕರಣ: ಕ್ರಮಕ್ಕೆ ಆಗ್ರಹ

ಲಿಂಗಸುಗೂರು: ದೇಶದಲ್ಲಿ ಅತ್ಯಾಚಾರ, ದೌರ್ಜನ್ಯ ಹಾಗೂ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಅವುಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಭೀಮ್‍ ಆರ್ಮಿ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೋಮವಾರ ದೊಡ್ ಡಹನುಮಂತ ದೇವಸ್ಥಾನದಿಂದ ಗಡಿಯಾರ ವೃತ್ತ, ಪೊಲೀಸ್‍ ಠಾಣೆ ರಸ್ತೆ, ಬಸ್‍ ನಿಲ್ದಾಣ ವೃತ್ತ, ಬೈಪಾಸ್‍, ನ್ಯಾಯಾಲಯದ ಮುಂಭಾಗದಿಂದ ಉಪ ವಿಭಾಗಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ದೆಹಲಿ ಪೊಲೀಸ್‍ ಅಧಿಕಾರಿ ಮೇಲೆ ಅತ್ಯಾಚಾರ ನಡೆಸಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ದೇಶದ ಜನತೆ ತಲೆ ತಗ್ಗಿಸುವಂತೆ ಮಾಡಿದೆ. ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಉತ್ತರಾಂಚಲ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಮೈಸೂರು, ಯಾದಗಿರಿ, ಕೋಲಾರ, ವಿಜಯಪುರ ಸೇರಿ ಹಲವು ಕಡೆ ನಿರಂತರವಾಗಿ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆಯುತ್ತಿವೆ. ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ಮೇಲಿಂದ ಮೇಲೆ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ, ಕೊಲೆಯಂಥ ಪ್ರಕರಣಗಳು ಜರುಗದಂತೆ ಎಚ್ಚರ ವಹಿಸಬೇಕು. ಅಂಥ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡದೆ, ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ವಿಧಿಸಲು ವಿಶೇಷ ಕಾನೂನು ಜಾರಿಗೆ ತರಬೇಕು. ಇದೇ ಸ್ಥಿತಿ ಮುಂದುವರಿದರೆ ರಾಷ್ಟ್ರವ್ಯಾಪಿ ತಮ್ಮ ಸಂಘಟನೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಭೀಮ್ ಆರ್ಮಿ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಖಾಲಿದ್‍ ಚಾವೂಸ್‍, ಮುಖಂಡರಾದ ಗುರುಪ್ರಶಾಂತ ಮ್ಯಾಗೇರಿ, ಅಲ್ಲಾಭಕ್ಷು, ಸೈಯದ್ ಮಫ್ತಿ, ಬಾಬಾಜಾನಿ, ನಾಗರಾಜ, ಮಂಜುನಾಥ, ನಾಗರಾಜ ಕಾನಿಹಾಳ, ಹನುಮಂತ, ಯಂಕೋಬ, ಅಮರೇಶ ಹಾಗೂ ಯಾಖೂಬ ನೇತೃತ್ವ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.