ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗೆ ಜಮೀನು ಗುರುತಿಸಲು ಸೂಚನೆ

13 ವರ್ಷದೊಳಗಿನ ಕೋಣ, ಎಮ್ಮೆಗಳನ್ನು ಹತ್ಯೆ ಮಾಡಿದರೆ ಜೈಲು
Last Updated 18 ಫೆಬ್ರುವರಿ 2021, 15:12 IST
ಅಕ್ಷರ ಗಾತ್ರ

ರಾಯಚೂರು: ಸರ್ಕಾರದ ನಿರ್ದೇಶನದನ್ವಯ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳನ್ನು ಆರಂಭಿಸಬೇಕಿರುವ ಹಿನ್ನೆಲೆಯಲ್ಲಿ ಪ್ರತಿ ಗೋಶಾಲೆಗೆ ಕನಿಷ್ಠ ಎರಡು ಎಕರೆ ಸರ್ಕಾರಿ ಜಮೀನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರಗೇಶ್ ಅವರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಶಿವಣ್ಣ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಿಡಾಡಿ, ಪರಿತ್ಯಕ್ತ ಗೋವುಗಳನ್ನು ರಕ್ಷಿಸುವ ಉದ್ದೇಶದಿಂದ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳನ್ನು ಆರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲಿ ಅದಕ್ಕೆ ಅಗತ್ಯವಿರುವ ಜಮೀನನ್ನು ಗುರುತಿಸಬೇಕು. ಕನಿಷ್ಠ 2 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿ, ಕೂಡಲೇ ಪ್ರಸ್ತಾವನೆ ಸಲ್ಲಿಸಿ, ಮಂಜೂರಾತಿಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಖಾಸಗಿ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸುತ್ತಿರುವ ಗೋಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಔಷಧಿ, ಮೇವು ಬೀಜ ಸೇರಿದಂತೆ ಇನ್ನಿತರೆ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಇನ್ನೂ ಹೆಚ್ಚುವರಿ ನಿರ್ವಹಣೆಗೆ ಅಗತ್ಯಗಳ ಪ್ರಸ್ತಾವನೆಗಳಿದ್ದಲ್ಲೀ ಸಲ್ಲಿಸುವಂತೆಯೂ ಅವರು ಗೋಶಾಲಾ ನಿರ್ವಹಕರಿಗೆ ತಿಳಿಸಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ 2020ರ ಆದ್ಯಾದೇಶ ಕುರಿತಂತೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ಹೊಂದಬೇಕು. ಪ್ರಾಣಿ ಹಿಂಸೆ, ಸಾಗಾಟ ಕುರಿತಂತೆ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಆಕಳು, ಆಕಳ ಕರು, ಹೋರಿ ಮತ್ತು ಎತ್ತು ಹಾಗೂ ಹದಿಮೂರು ವರ್ಷದೊಳಗಿನ ಕೋಣ, ಎಮ್ಮೆಗಳನ್ನು ಹತ್ಯೆ ಮಾಡಿದರೆ ಜೈಲು ಸೆರೆವಾಸ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.

ಜಾನುವಾರುಗಳನ್ನು ಹತ್ಯೆ ಮಾಡುವುದು ಕಂಡುಬಂದಲ್ಲಿ ಏಳು ವರ್ಷ ಜೈಲುವಾಸ, ₹5 ಲಕ್ಷ ವರೆಗೆ ದಂಡ ವಿಧಿಸಲಾಗುತ್ತದೆ. ಕಂದಾಯ ಇಲಾಖೆ, ತಹಶೀಲ್ದಾರರು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ, ಪಶುವೈದ್ಯರು ದಂಡ ವಿಧಿಸಬಹುದು. ಜಾತ್ರೆಗಳಲ್ಲಿ ಜಾನುವಾರುಗಳ ಹತ್ಯೆ ಮಾಡುವುದನ್ನು ನಿಷೇಧಿಸಲು ಸಮಿತಿಯ ಮುಖಂಡರೊಂದಿಗೆ ಚರ್ಚೆಸಿ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು ನಗರಸಭೆ, ಕಂದಾಯ ಇಲಾಖೆ, ಪಶುಸಂಗೋಪನೆ ಇಲಾಖೆ ಮತ್ತು ಪೊಲೀಸರ ನೇತೃತ್ವದಲ್ಲಿ ಗೋಶಾಲೆಗಳಿಗೆ ಹಸ್ತಾಂತರಿಸಬೇಕು. ಪ್ರಾಣಿಗಳಿಗೆ ಹಿಂಸೆ ಮಾಡುವುದು ಅಕ್ಷಮ ಅಪರಾಧ, ಜಾನುವಾರುಗಳು ಹತ್ಯೆ ಮಾಡುವುದನ್ನು ನಿಷೇಧಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ರಾತ್ರಿ ವೇಳೆ ಗೋವುಗಳ ಸಾಗಾಣಿಕೆ ಸಂಪೂರ್ಣ ನಿಷೇಧವಿದೆ. ರಾತ್ರಿ 8 ರಿಂದ ಬೆಳಿಗ್ಗೆ 6ರ ವರೆಗೆ ಗೋವಿಗಳ ಸಾಗಾಣಿಕೆ ಅವಕಾಶವಿಲ್ಲ ಎಂದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಣಿಕೆ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದರು. ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಸಂಪು ನಿರ್ಮಾಣ ಮಾಡಿ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಪಶುಪಾಲನಾ ಮತ್ತು ಮಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಶಿವಣ್ಣ ಅವರು ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಸ್ವಯಂ ಸೇವಾ ಸಂಘಗಳಿಂದ 10 ಗೋಶಾಲೆಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ನಗರಸಭೆ ಪೌರಾಯುಕ್ತ ಎಚ್.ವೆಂಕಟೇಶ, ಪಶುಪಾಲನೆ ಇಲಾಖೆ ಸಹಾಯಕ ಅಧಿಕಾರಿಗಳಾದ ಡಾ.ಎಸ್.ಎಸ್. ಪಾಟೀಲ್, ಡಾ.ರಾಚಪ್ಪ, ಡಾ.ರಾಜು ಕಾಂಬ್ಳೆ, ಡಾ.ಶರಣೆಗೌಡ ಪಾಟೀಲ, ಡಾ.ವಾಲ್ಮೀಕಿ ಹಾಗೂ ಗೋಶಾಲೆಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT