ಶನಿವಾರ, ಆಗಸ್ಟ್ 20, 2022
22 °C
ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್‌ ಅಧ್ಯಕ್ಷತೆಯಲ್ಲಿ ಸಭೆ

ರಾಯಚೂರು: ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಡಿ ಆಯ್ಕೆಯಾಗಿರುವ ರಾಯಚೂರು ಜಿಲ್ಲೆಯನ್ನು ಆರೋಗ್ಯ, ಶಿಕ್ಷಣ, ಕೃಷಿ, ಕೌಶಲ್ಯ ಅಭಿವೃದ್ದಿ ಮತ್ತು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಲ್ಲಿ ಅಧಿಕಾರಿಗಳು ಶ್ರದ್ದೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್ ಹೇಳಿದರು.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹತ್ವಾಕಾಂಕ್ಷಿ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿ ಪಟ್ಟಿಯಲ್ಲಿ ರಾಯಚೂರನ್ನು ಮೊದಲ ರ‍್ಯಾಂಕಿಂಗ್‌ ತರಬೇಕು. ಸದ್ಯಕ್ಕೆ ಜಿಲ್ಲೆಯು ರ‍್ಯಾಂಕಿಂಗ್‌ನಲ್ಲಿ 60ನೇ ಸ್ಥಾನದಲ್ಲಿದೆ. ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯದಿಂದ ಆಯ್ಕೆಯಾಗಿರುವ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಹಿಂದುಳಿದಿರುವುದನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗೆ ಆಯ್ಕೆ ಮಾಡಿದೆ. ದೇಶದಲ್ಲಿ 211 ರ‍್ಯಾಂಕಿಂಗ್‍ಗಳಿರುವ ಜಿಲ್ಲೆಗಳ ಪೈಕಿ ಜುಲೈ ಅಂತ್ಯದವರೆಗೆ ರಾಯಚೂರು ಜಿಲ್ಲೆಯು 60ನೇ ಸ್ಥಾನದಲ್ಲಿದೆ. ಯಾದಗಿರಿ 105ನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಆರೋಗ್ಯ ಕ್ಷೇತ್ರದಲ್ಲಿ ಜುಲೈನಲ್ಲಿ 80.1 ಅಂಕಗಳು ಬಂದಿವೆ. ಶಿಕ್ಷಣದಲ್ಲಿ 55.9, ಕೃಷಿ ಮತ್ತು ನೀರಾವರಿ ಇಲಾಖೆಯು 23.2, ಆರ್ಥಿಕ ಮತ್ತು ಕೌಶಲ ಅಭಿವೃದ್ಧಿಯಲ್ಲಿ 32.3 ಹಾಗೂ ಮೂಲ ಸೌಕರ್ಯ ಕಲ್ಪಿಸುವಲ್ಲಿ 63.9 ಅಂಕ ಪಡೆಯಲಾಗಿದೆ. ಜಿಲ್ಲೆಯ ಜನರ ಆರೋಗ್ಯದ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದರು.

ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸಬೇಕು. ಅಂಗನವಾಡಿ ಕಟ್ಟಡಗಳಿಗೆ ಸ್ಥಳದ ಕೊರತೆಯಿದ್ದಲ್ಲಿ ಶಾಲೆಯಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು. ಶಾಲೆಗಳಲ್ಲಿ ಮಹಿಳಾ ಶೌಚಾಲಯ ವ್ಯವಸ್ಥೆ ಮಾಡಬೇಕು. ಕೃಷಿ ಚಟುವಟಿಕೆ ಮಾಡಲು ರೈತರಿಗೆ ಸಾಲ ಪಾವತಿಸಬೇಕು. ಕೌಶಲ ಅಭಿವೃದ್ಧಿ ಇಲಾಖೆಯಿಂದ ಯುವಕ, ಯುವತಿಯರಿಗೆ ಉದ್ಯೋಗ ಮತ್ತು ತರಬೇತಿ ನೀಡಬೇಕಾಗಿದೆ. ಶಿಕ್ಷಕರ ಕೊರತೆ ನೀಗಿಸಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಚಾರ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಮಹಾತ್ವಕಾಂಕ್ಷಿ ಜಿಲ್ಲೆ ನೋಡಲ್ ಅಧಿಕಾರಿ ಸಂತೋಷ ರಾಣಿ, ಪ್ರಭಾರಿ ಡಿಡಿಪಿಐ ಸುಜಾತ, ಶಾಮಕುಮಾರ್, ರಾಜೇಶ, ಬಾಬು, ಗೀತಾಂಜಲಿ, ದೀಪಾ ಹಾಗೂ ಸಂಬಂಧಿಸಿದ ಇಲಾಖೆಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.