ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಬೆಳೆಯಲ್ಲಿ ಚಿಕ್ಕುಂಟಿ ಹೊಡೆಯಲು ಟ್ರ್ಯಾಕ್ಟರ್‌ ನೆರವು

ಮಂಜುನಾಥ ಎನ್‌ ಬಳ್ಳಾರಿ
Published 9 ಜುಲೈ 2024, 7:23 IST
Last Updated 9 ಜುಲೈ 2024, 7:23 IST
ಅಕ್ಷರ ಗಾತ್ರ

ಕವಿತಾಳ: ಎತ್ತುಗಳ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚಕ್ಕೆ ಪರ್ಯಾಯವಾಗಿ ರೈತರು ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಿಸುತ್ತಿದ್ದಾರೆ. ಉಳುಮೆ, ಬಿತ್ತನೆಗೆ ಬಳಕೆಯಾಗುತ್ತಿದ್ದ ಟ್ರ್ಯಾಕ್ಟರ್‌, ಇದೀಗ ಕಳೆ ನಿರ್ವಹಣೆಗಾಗಿ ಚಿಕ್ಕ ಕುಂಟಿ ಹೊಡೆಯಲೂ ಕೂಡ ಬಳಕೆಯಾಗುತ್ತಿದೆ.

ಪಟ್ಟಣ ಸಮೀಪದ ಜಮೀನುಗಳಲ್ಲಿ ಇತ್ತೀಚೆಗೆ ಈ ದೃಶ್ಯ ಸಾಮಾನ್ಯವಾಗಿದೆ. ಕೃಷಿ ಕೂಲಿ ವೆಚ್ಚ, ಜಾನುವಾರುಗಳ ದುಬಾರಿ ನಿರ್ವಹಣೆಯ ಫಲವಾಗಿ ಅನ್ನದಾತರು ಟ್ರ್ಯಾಕ್ಟರ್‌ ಮೇಲೆ ಇನ್ನಷ್ಟು–ಮತ್ತಷ್ಟು ಅವಲಂಬನೆಯಾಗುತ್ತಿದ್ದಾರೆ.

ಟ್ರ್ಯಾಕ್ಟರ್‌ ಬಳಸಿಕೊಂಡು ಅತ್ಯಂತ ವೇಗದಲ್ಲಿ ಕಳೆಕೀಳುವ ಮೂಲಕ ಸಮಯದ ಜತೆಗೆ ಹಣವನ್ನೂ ಉಳಿಸಬಹುದು ಎನ್ನುವುದು ರೈತರ ಲೆಕ್ಕಾಚಾರ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಜಮೀನಿನಲ್ಲಿ ಕಳೆ ಕೀಳಲು ರೈತರು ಟ್ರ್ಯಾಕ್ಟರ್ ಬಳಕೆ ಮುಂದಾಗಿದ್ದಾರೆ.

‘ಎರಡು ಎತ್ತುಗಳನ್ನು ಬಳಸಿಕೊಂಡು ಮೂರು ಚಿಕ್ಕುಂಟಿ ಕಟ್ಟಿದರೆ ಮೂರು ಕೂಲಿಕಾರರ ಸಹಾಯದೊಂದಿಗೆ ಒಂದು ದಿನದಲ್ಲಿ 3ರಿಂದ 4 ಎಕರೆ ಕುಂಟಿ ಹೊಡೆಯಬಹುದು. ಅದೇ ಟ್ರ್ಯಾಕ್ಟರ್‌ಗೆ ನೊಗ ಕಟ್ಟಿ, ಅದಕ್ಕೆ ಚಿಕ್ಕುಂಟಿ ಜೋಡಿಸಿದರೆ, ಆರು ಕೂಲಿಕಾರರ ಸಹಾಯದೊಂದಿಗೆ ಒಂದೇ ದಿನದಲ್ಲಿ 20 ರಿಂದ 25 ಎಕರೆ ಜಮೀನಿನಲ್ಲಿ ಚಿಕ್ಕುಂಟಿ ಹೊಡೆಯಬಹುದು’ ಎಂದು ರೈತ ಹನುಮಂತ ಹೇಳುತ್ತಾರೆ.

‘ಎತ್ತುಗಳ ಜಾಗವನ್ನು ಟ್ರ್ಯಾಕ್ಟರ್‌ ಮತ್ತಿತರ ಯಂತ್ರಗಳು ಆವರಿಸಿಕೊಂಡಿವೆ. ಮಳೆ ಕೊರತೆ, ಬರ ಪರಿಸ್ಥಿತಿ, ಮೇವು, ಕೂಲಿಕಾರ್ಮಿಕರ ಕೊರತೆ ಹೀಗೆ ಅನೇಕ ಕಾರಣಗಳಿಂದ ಎತ್ತುಗಳ ಸಾಕಣೆಗಿಂತ ಟ್ರ್ಯಾಕ್ಟರ್‌ ನಿರ್ವಹಣೆ ಉತ್ತಮ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹೆಚ್ಚಿನ ರೈತರು ಯಂತ್ರಗಳನ್ನು ಅವಲಂಬಿಸಿದ್ದಾರೆ’ ಎಂದು ರೈತ ಶಿವಲಿಂಗಪ್ಪ ಅಭಿಪ್ರಾಯಪಟ್ಟರು.

‘ಇತ್ತೀಚೆಗೆ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ಕೈಗೊಳ್ಳುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಕೆಲವು ರೈತರು ನೂರಾರು ಎಕರೆ ಜಮೀನು ಗುತ್ತಿಗೆ ಪಡೆದು ಕೃಷಿ ನಡೆಸುತ್ತಿದ್ದಾರೆ. ಅವರಿಗೆಲ್ಲ ಕಡಿಮೆ ಅವಧಿಯಲ್ಲಿ ಜಮೀನು ಹದಗೊಳಿಸುವುದು ಮತ್ತು ಕಳೆ ಕೀಳುವುದು ಸವಾಲು. ಅದಕ್ಕೆ ಅವರು ಟ್ರ್ಯಾಕ್ಟರ್‌ ಬಳಕೆ ಮಾಡುವುದು ಅನಿವಾರ್ಯ’ ಎಂದು ರೈತ ಮೌನೇಶ ಹಿರೇಕುರಬರ್‌ ಪ್ರತಿಪಾದಿಸಿದರು.

ಕವಿತಾಳ ಸಮೀಪದ ಜಮೀನಿನಲ್ಲಿ ರೈತರು ಟ್ರ್ಯಾಕ್ಟರ್‌ಗೆ ನೊಗ ಕಟ್ಟಿ ಚಿಕ್ಕುಂಟಿ ಹೊಡೆದರು
ಕವಿತಾಳ ಸಮೀಪದ ಜಮೀನಿನಲ್ಲಿ ರೈತರು ಟ್ರ್ಯಾಕ್ಟರ್‌ಗೆ ನೊಗ ಕಟ್ಟಿ ಚಿಕ್ಕುಂಟಿ ಹೊಡೆದರು
‘ಲಾಭದಾಯಕ’
ಎರಡು ಎತ್ತುಗಳ ಉಳುಮೆ ಬಾಡಿಗೆ ಮತ್ತು ಇಬ್ಬರು ಕೂಲಿಕಾರರ ಒಂದು ದಿನದ ಕೂಲಿ ಸೇರಿ ಅಂದಾಜು ₹2500 ಖರ್ಚು ಬರುತ್ತದೆ. ಅದರಲ್ಲಿ 3ರಿಂದ 4 ಎಕರೆ ಚಿಕ್ಕುಂಟಿ ಹೊಡೆಯಬಹುದು. ಸ್ವಂತ ಟ್ರ್ಯಾಕ್ಟರ್‌ ಹೊಂದಿದ್ದರೆ 6 ಕೂಲಿಕಾರರ ಒಂದು ದಿನದ ಕೂಲಿ ಮತ್ತು ಡಿಸೇಲ್‌ ಸೇರಿ ಅಂದಾಜು ₹5 ಸಾವಿರದಲ್ಲಿ 20 ಎಕರೆ ಚಿಕ್ಕುಂಟಿ ಹೊಡೆಯಬಹುದು. ಇದು ದೊಡ್ಡ ರೈತರಿಗೆ ಲಾಭದಾಯಕ ಎನ್ನುತ್ತಾರೆ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT