ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ: ಬಿತ್ತನೆಯತ್ತ ಚಿತ್ತ ಹರಿಸಿದ ಅನ್ನದಾತ

ದೇವದುರ್ಗ: 1.11 ಲಕ್ಷದ ‌ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ
Published 22 ಮೇ 2024, 6:43 IST
Last Updated 22 ಮೇ 2024, 6:43 IST
ಅಕ್ಷರ ಗಾತ್ರ

ದೇವದುರ್ಗ: ಕಳೆದ ವಾರದಿಂದ ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ರೈತರು ಮುಂಗಾರು ಮಳೆ ಪೂರ್ವದಲ್ಲಿಯೇ ಬಿತ್ತನೆಯತ್ತ ಚಿತ್ತಹರಿಸಿದ್ದಾರೆ.

ತಾಲ್ಲೂಕಿನ 1 ಲಕ್ಷ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು 33 ಸಾವಿರ ಖುಷ್ಕಿ, 77,700 ಹೆಕ್ಟೇರ್ ಪ್ರದೇಶದ ನೀರಾವರಿ ಪ್ರದೇಶದಲ್ಲಿ ರೈತರು ಬಿತ್ತನೆಯ ಗುರಿ ಹೊಂದಿದ್ದಾರೆ. ಬೇಡಿಕೆಗೆ ಅನುಗುಣವಾಗಿ ಬತ್ತದ ತಳಿಗಳಾದ ಸೋನಾ ಮಸೂರಿ ಮತ್ತು ಆರ್ನಾರ್ 300 ಕ್ವಿಂಟಲ್, 85 ಕ್ವಿಂಟಲ್ ತೊಗರಿ, 2 ಕ್ವಿಂಟಲ್ ಹೆಸರು ಸೂರ್ಯಕಾಂತಿ ಬಿತ್ತನೆ ಬೀಜಗಳಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸ ತಿಳಿಸಿದರು.

ಕಪ್ಪುಮಣ್ಣು ಮತ್ತು ಕೆಂಪು ಮಣ್ಣು ಪ್ರದೇಶದಲ್ಲಿ ರೈತರು ಬಹುತೇಕ ಭೂಮಿಯನ್ನು ಹದ ಮಾಡಿ ಮುಂಗಡ ಬಿತ್ತನೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ರೈತರು ಭೂಮಿಯನ್ನು ಹಸನು ಮಾಡಿಕೊಳ್ಳುವತ್ತ ತಮ್ಮ ಗಮನ ಹರಿಸಿದ್ದಾರೆ. ಮುಂಗಾರು ಪೂರ್ವದ ಮಳೆಗೆ ಬಿತ್ತನೆ ಮಾಡಲು ದೇವದುರ್ಗ, ಅರಕೇರಾ, ಗಬ್ಬೂರು, ಜಾಲಹಳ್ಳಿ ಹೋಬಳಿಗಳಲ್ಲಿ ರೈತರು ಸಿದ್ಧತೆ ನಡೆಸಿದ್ದಾರೆ.

ರೈತರು ಮುಂಗಾರಿನಲ್ಲಿ ಭತ್ತದ ಬೆಳೆ ಬೆಳೆಯಲು ಭೂಮಿಯನ್ನು ಅಣಿಗೊಳಿಸುತ್ತಿದ್ದಾರೆ. ಖುಷ್ಕಿ ಪ್ರದೇಶದ ರೈತರು ಮುಂಗಾರಿನ ಪೂರ್ವದಲ್ಲಿನ ಮಳೆಗೆ ಭೂಮಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಎಲ್ಲಿ ನೋಡಿದರೂ ಉಳುಮೆ ಮಾಡುವ ದೃಶ್ಯಗಳು ಕಾಣುತ್ತಿವೆ. ಮಳೆ ಕೊಂಚ ಬಿಡುವು ನೀಡಿ ಇನ್ನಷ್ಟು ಬರಲಿ ಎಂಬುದು ರೈತರ ಆಶಯವಾಗಿದೆ.

ಹೆಚ್ಚು ಕಡಿಮೆ ತಾಲ್ಲೂಕಿನಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಕೃತಿಕಾ ಮಳೆಯ ಶುಭಾಗಮನವಾಗಿದ್ದು ಈ ಬಾರಿ ಉತ್ತಮ ಮಳೆ ಬೆಳೆ ಬರಬಹುದೆಂಬ ಭರವಸೆಯ ನಿರೀಕ್ಷೆ ಹೊತ್ತ ರೈತರು ಹೊಲಗದ್ದೆಗಳತ್ತ ಮುಖ ಮಾಡಿದ್ದಾರೆ. ಮುಂಗಾರು ಆಗಮನದ ಸುಳಿವು ದೊರೆಯುತ್ತಿದ್ದಂತೆ ರೈತರ ಮೊಗದಲ್ಲಿ ಸಂತಸದ ಗೆರೆಗಳು ಗೋಚರಿಸುತ್ತಿವೆ.

ಮಳೆ ಭರವಸೆಯ ನಡುವೆಯೂ ಮಳೆಗಾಲದ ಬಗ್ಗೆ ರೈತರಲ್ಲಿ ಬಹಳಷ್ಟು ಅನುಮಾನಗಳೂ ಇವೆ. ಕಳೆದ ವರ್ಷ ಆರಂಭದಲ್ಲಿ ಉತ್ತಮ ಮಳೆಯಾಗಿ ದಾಖಲೆ ಪ್ರಮಾಣದಲ್ಲಿ ಬಿತ್ತನೆಯೂ ಆಗಿತ್ತು. ಹೆಸರು, ಸಜ್ಜೆ, ಮೆಕ್ಕೆಜೋಳ, ತೊಗರಿ, ಎಳ್ಳು, ಶೇಂಗಾ ಮೊದಲಾದ ಬೆಳೆಗಳ ಬೀಜಗಳನ್ನು ಹೊಲದೊಡಲಿಗೆ ಹಾಕಿದ್ದೂ ಆಯಿತು. ಆದರೆ ಬೆಳೆಗಳು ಸಮೃದ್ಧವಾಗಿ ಬೆಳೆಗೆ ಹೊಂದುವಷ್ಟರಲ್ಲಿ ಮಳೆ ಸುಳಿವಿಲ್ಲದಂತಾಗಿ ಬೆಳೆದು ನಿಂತ ಬೆಳೆಗಳೆಲ್ಲ ಒಣಗಿದ್ದವು.

ಬಿತ್ತನೆ ಬೀಜ ಖರೀದಿಸಲು ದುಂಬಾಲು: ಬೆಳೆಯಲ್ಲಿ ವೈವಿಧ್ಯತೆ ಇರಲಿ, ಪದೇಪದೆ ಒಂದೇ ಬೆಳೆ ಬೆಳೆಯುವುದು ಬೇಡ ಎಂಬ ಕೃಷಿ ಇಲಾಖೆ ಸೂಚನೆ ಮೇರೆಗೆ ಮೆಣಸಿನಕಾಯಿ, ಹತ್ತಿ, ಭತ್ತ, ಮೆಕ್ಕೆಜೋಳ, ಹೆಸರು, ಶೇಂಗಾ ಬೆಳೆ ಬೆಳೆಯಲು ಮುಂಗಾರು ಮಳೆ ಆಗಮನಕ್ಕೂ ಮುನ್ನವೇ ವಿವಿಧ ಪರಿಟಿ ಲೈಜರ್ಸ್ ಅಂಗಡಿಗಳ ಮುಂದೆ ರೈತರು ಸಾಲಗಟ್ಟಿ ನಿಲ್ಲುತ್ತಿದ್ದಾರೆ.

ದೇವದುರ್ಗ ತಾಲ್ಲೂಕಿನ ಹೇಮನೂರ ಗ್ರಾಮದಲ್ಲಿ ರೈತರೊಬ್ಬರು ಎತ್ತುಗಳಿಂದ ಹೊಲವನ್ನು ಉಳುಮೆ ಮಾಡಿದರು
ದೇವದುರ್ಗ ತಾಲ್ಲೂಕಿನ ಹೇಮನೂರ ಗ್ರಾಮದಲ್ಲಿ ರೈತರೊಬ್ಬರು ಎತ್ತುಗಳಿಂದ ಹೊಲವನ್ನು ಉಳುಮೆ ಮಾಡಿದರು
ಬಿಸಿಲಿನ ಝಳದಿಂದ ಬೇಸತ್ತಿದ್ದ ರೈತರಿಗೆ ಮುಂಗಾರು ಪೂರ್ವ ಮಳೆ ಸಂತಸ ಮೂಡಿಸಿದೆ. ಕೃಷಿ ಚಟುವಟಿಕೆಗಳು ಬರದಿಂದ ಸಾಗಿವೆ. ನಿರೀಕ್ಷೆಗೂ ಮುನ್ನ ಮಳೆ ಬರುತ್ತಿರುವುದು ಕೆಲ ರೈತರು ಹೆಸರು ಬೆಳೆ ಬೆಳೆಯಲು ಮುಂದಾಗಿದ್ದಾರೆ.
–ಹನುಮಂತ್ರಾಯ ಕಂಮದಾಳ, ರೈತ
ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚುವರಿ ಪ್ರಸ್ತಾವನೆ ಸಲ್ಲಿಸಿ ಬೀಜ ರಸಗೊಬ್ಬರ ಸಮಸ್ಯೆಯಾಗದಂತೆ ಕೈಗೊಳ್ಳಲಾಗಿದೆ.
–ಶ್ರೀನಿವಾಸ ನಾಯಕ, ಸಹಾಯಕ ಕೃಷಿ ನಿರ್ದೇಶಕ

ನಿರಂತರ ಮಳೆ ತಂದ ಆಶಾವಾದ

ಬರಗಾಲದ ಬೇಗೆಗೆ ಬೇಸತ್ತು ಹೋಗಿದ್ದ ತಾಲ್ಲೂಕಿನ ಜನರಿಗೆ ಪೂರ್ವ ಮುಂಗಾರಿನಲ್ಲಿ ಮೇಲಿಂದ ಮೇಲೆ ಸುರಿಯುತ್ತಿರುವ ಮಳೆ ಅನ್ನದಾತರಲ್ಲಿ ಆಶಾಭಾವನೆ ಮೂಡಿಸಿದೆ. ಬಿರುಬಿಸಿಲು ಬಿಸಿಗಾಳಿ ಮತ್ತು ಅರೆಝಳಕ್ಕೆ ಬೇಸಿಗೆ ಅವಧಿಯಲ್ಲಿ ರೋಸಿ ಹೋಗಿದ್ದ ಜನರಿಗೆ ಈಗ ಬೀಳುತ್ತಿರುವ ಮಳೆ ಖುಷಿ ನೀಡಿದೆ. ರೈತರ ಹಣೆಯ ಮೇಲಿನ ಚಿಂತೆಯ ಗೆರೆಗಳನ್ನು ದೂರ ಮಾಡುತ್ತಿವೆ. ಬರಿದಾಗಿ ಹೋಗಿದ್ದ ಕೆರೆ ಕಟ್ಟೆಗಳು ನಿಧಾನವಾಗಿ ನೀರು ತುಂಬಿಕೊಳ್ಳುತ್ತಿವೆ. ಮುಖ್ಯವಾಗಿ ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗಿತ್ತು. ಬಿಸಿಲಿನ ಬೇಗೆ ಮುಗಿದು ಮಳೆಯಾಗುತ್ತಿದ್ದಂತೆಯೇ ಜನರಲ್ಲಿ ಸಂಭ್ರಮ ಮನೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT