ಮಾನ್ವಿ: ಪಟ್ಟಣದ ಖಾಸಗಿ ಕಾಲೇಜಿನ ಇಂಗ್ಲಿಷ್ ವಿಷಯದ ಉಪನ್ಯಾಸಕ ನಾಗರಾಜ ಚಿಮ್ಲಾಪೂರ ವೃತ್ತಿಯ ಜತೆಗೆ ಚೆಂಡು ಹೂವು ಕೃಷಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಪಟ್ಟಣದ ಹೊರವಲಯದ ಸೀಕಲ್ ಕ್ರಾಸ್ ಬಳಿ ಮೂರು ಎಕರೆ ಜಮೀನು ಗುತ್ತಿಗೆ ಪಡೆದು ಮೂರು ವರ್ಷಗಳಿಂದ ಚೆಂಡು ಹೂವು ಬೆಳೆಯುತ್ತಿದ್ದಾರೆ. ನಾಗರಾಜ ಅವರು ತಾವು ಬೆಳೆದ ಚೆಂಡು ಹೂವುಗಳನ್ನು ಖುದ್ದಾಗಿ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಈ ವರ್ಷ ಮುಂಗಾರು ಮಳೆ ಕೊರತೆಯಿಂದ ಜೋಳ, ತೊಗರಿ, ಹತ್ತಿ ಬೆಳೆಗಳು ನಿರೀಕ್ಷಿತವಾಗಿ ಬೆಳೆಯದೆ ನಷ್ಟ ಅನುಭವಿಸಿದ್ದ ನಾಗರಾಜ ಅವರಿಗೆ ಚೆಂಡು ಹೂವಿನ ಬೆಳೆ ಕೈಹಿಡಿದಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮೂರು ಎಕರೆ ಜಮೀನಿನಲ್ಲಿ ಬೆಂಗಳೂರಿನಿಂದ ತಂದ ಈಸ್ಟ್ ವೆಸ್ಟ್ ತಳಿಯ ಹತ್ತು ಸಾವಿರ ಸಸಿಗಳನ್ನು ನಾಟಿ ಮಾಡಿದ್ದಾರೆ. ಜಮೀನಿನ ಸಿದ್ಧತೆ, ಜಿಗಿ ಕೀಟದ ಬಾಧೆಯನ್ನು ತಡೆಯಲು ಹಾಗೂ ವಿಶೇಷವಾಗಿ ಚೆಂಡು ಹೂಗಳ ಬಣ್ಣ ಬದಲಾಗದಂತೆ ತಡೆಯಲು ತಮಿಳುನಾಡಿನಿಂದ ಕೀಟನಾಶಕಗಳನ್ನು ತಂದು ಸಿಂಪಡಣೆ ಮಾಡುತ್ತಿದ್ದಾರೆ.
ಇದುವರೆಗೂ ಚೆಂಡು ಹೂವು ಕೃಷಿಗೆ ₹ಲಕ್ಷ ದವರೆಗೆ ಖರ್ಚು ಮಾಡಿದ್ದು, ಈ ವರ್ಷ ಮೂರು ಎಕರೆಯಲ್ಲಿ ನಾಲ್ಕು ಟನ್‌ವರೆಗೆ ಬೆಳೆಯ ಇಳುವರಿಯ ನಿರೀಕ್ಷೆ ಎಂದು ನಾಗರಾಜ ಹೇಳುತ್ತಾರೆ. ನೀರಿನ ಸೌಲಭ್ಯಕ್ಕಾಗಿ ಒಂದು ಕೊಳವೆ ಬಾವಿ ಇದೆ. ಸಕಾಲಕ್ಕೆ ಮಳೆಯಾದರೆ ಪ್ರತಿ ಎಕರೆಗೆ ಎರಡು ಟನ್ ಚೆಂಡು ಹೂವು ಬೆಳೆದು ಹೆಚ್ಚಿನ ಲಾಭ ಗಳಿಸಬಹುದು. ಈ ವರ್ಷ ಮಳೆ ಕೊರತೆಯಿಂದ ಒಟ್ಟು ಇಳುವರಿ ಕುಸಿತವಾಗುವ ಸಂಭವ ಇದೆ ಎಂದು ನಾಗರಾಜ ಆತಂಕ ವ್ಯಕ್ತಪಡಿಸುತ್ತಾರೆ.
ಪ್ರಸ್ತುತ ನಾಗರಾಜ ಅವರ ಜಮೀನಿನ ಗಿಡಗಳಲ್ಲಿ ಸಮೃದ್ಧವಾಗಿ ಹೂಗಳು ಬಿಟ್ಟಿವೆ. ಜಮೀನಿನ ತುಂಬಾ ಕಣ್ಣುಹಾಯಿಸಿದಲ್ಲೆಲ್ಲ ಕೇಸರಿ ಹಾಗೂ ಹಳದಿ ಬಣ್ಣದ ಹೂವುಗಳೇ ಆಕರ್ಷಕವಾಗಿ ಕಾಣುತ್ತಿವೆ.
ಮಾರಾಟ: ಚೆಂಡು ಹೂಗಳ ಮಾರಾಟಕ್ಕಾಗಿ ದೂರದ ಚಿತ್ರದುರ್ಗ, ರಾಣೆಬೆನ್ನೂರು, ದಾವಣಗೆರೆ, ಕೆ.ಆರ್. ಪುರಂ ಮಾರುಕಟ್ಟೆಗಳನ್ನು ಸ್ಥಳೀಯ ರೈತರು ಹೆಚ್ಚಾಗಿ ನೆಚ್ಚಿಕೊಳ್ಳುತ್ತಾರೆ. ಸಾಗಣಿಕೆ ವೆಚ್ಚ ಅಧಿಕವಾಗುವ ಕಾರಣ ಸ್ಥಳಿಯವಾಗಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ನಾಗರಾಜ ಮುಂದಾಗಿದ್ದಾರೆ. ತಾವು ಬೆಳೆದ ಚೆಂಡು ಹೂಗಳ ಮಾರಾಟದ ಕುರಿತು ಫೇಸ್‌ಬುಕ್, ವಾಟ್ಸಆ್ಯಪ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿ ಗ್ರಾಹಕರಿಂದ ಖರೀದಿಗೆ ಬುಕಿಂಗ್ ಪಡೆಯುತ್ತಿದ್ದಾರೆ.
ದಸರಾ ಹಬ್ಬದ ಸಂದರ್ಭದಲ್ಲಿ ಎರಡು ದಿನಗಳ ಮಟ್ಟಿಗೆ ಮಾನ್ವಿ ಪಟ್ಟಣದ ಬಸವ ವೃತ್ತದಲ್ಲಿ ತಾತ್ಕಾಲಿಕ ಮಾರಾಟ ಮಳಿಗೆ ತೆರೆದು ಸುಮಾರು ನಾಲ್ಕು ಕ್ವಿಂಟಲ್ ಮೊತ್ತದ ಚೆಂಡು ಹೂಗಳನ್ನು ನಾಗರಾಜ ಮಾರಾಟ ಮಾಡಿದ್ದಾರೆ. ಮುಂದಿನ ತಿಂಗಳು ದೀಪಾವಳಿ ಹಬ್ಬಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಹೂಗಳು ಮಾರಾಟವಾಗುವ ಭರವಸೆಯನ್ನು ಅವರು ಹೊಂದಿದ್ದಾರೆ.
ಹತ್ತಿ, ಮೆಣಸಿನಕಾಯಿ ಬೆಳೆಗಳಿಗಿಂತ ಚೆಂಡು ಹೂಗಳಿಗೆ ಕೀಟಬಾಧೆ ತಡೆಯಲು ನಿರಂತರ ನಿರ್ವಹಣೆ, ಹೆಚ್ಚಿನ ಮುಂಜಾಗ್ರತೆ ಅಗತ್ಯ.ನಾಗರಾಜ ಚಿಮ್ಲಾಪೂರ, ಉಪನ್ಯಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.