ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

36 ಅಡಿ ಎತ್ತರದ ಅಭಯರಾಮನ ಶಿಲಾಮೂರ್ತಿ ಪ್ರತಿಷ್ಠಾಪನೆ

Published 20 ಜನವರಿ 2024, 15:35 IST
Last Updated 20 ಜನವರಿ 2024, 15:35 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯ ಮಠ ಹಾಗೂ ಬೆಂಗಳೂರಿನ ಅಭಯರಾಮ ಸೇವಾ ಸಮಿತಿ ವತಿಯಿಂದ ರಾಯಚೂರು ಮಾರ್ಗದಲ್ಲಿ ಶನಿವಾರ 36 ಅಡಿ ಎತ್ತರದ ಶ್ರೀ ಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು.

ಅಯೋಧ್ಯೆಯಲ್ಲಿ ರಾಮ ದೇವಸ್ಥಾನ ಉದ್ಘಾಟನೆ ಸಂದರ್ಭದಲ್ಲೇ ಬೆಂಗಳೂರಿನ ಅಭಯರಾಮ ಸೇವಾ ಸಮಿತಿಯವರು ಮಂತ್ರಾಲಯ ಮಠದ ಮಠಾಧೀಶ ಸುಬುಧೇಂದ್ರ ತೀರ್ಥರ ಸಮ್ಮುಖದಲ್ಲಿ ಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.

ಸತ್ಯಸಾಯಿ ಜಿಲ್ಲೆಯ ರೊಳ್ಳ ಮಂಡಲದ ಕೊಡಗರ್ಲಗುಟ್ಟ ಪ್ರದೇಶದಿಂದ ಏಕ ಶಿಲೆಯನ್ನು ಖರೀದಿಸಿ ವಿಶೇಷ ವಾಹನದ ಮೂಲಕ ಇಲ್ಲಿಗೆ ತರಲಾಗಿತ್ತು. ಕಲಾವಿದರು ಮಂತ್ರಾಲಯದಲ್ಲೇ ಕೆತ್ತನೆ ಕಾರ್ಯವನ್ನು ಪೂರ್ತಿಗೊಳಿಸಿದ್ದಾರೆ. ತಜ್ಞರ ತಂಡವು ಡಿಜಿಟಲ್ ತಂತ್ರಜ್ಞಾನ ಬಳಸಿ ಕೆತ್ತನೆ ಕಾರ್ಯವನ್ನು ಪೂರ್ತಿಗೊಳಿಸಿದೆ. 10 ಶಿಲ್ಪಿಗಳು ಮೂರ್ತಿಗೆ ಅಂತಿಮ ರೂಪ ನೀಡಿದ್ದಾರೆ. ಮಧ್ಯಮ ಯುಗದ ಚೋಳ ಶೈಲಿಯಲ್ಲಿ ಶಿಲಾಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಕಮಲಪೀಠದ ಮೇಲೆ ಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.

ಮಂತ್ರಾಲಯದಿಂದ 2 ಕಿ.ಮೀ ಅಂತರದಲ್ಲಿ ರಾಯಚೂರು ರಸ್ತೆಯ ಪಕ್ಕದಲ್ಲಿರುವ ಆರು ಎಕರೆ ಪ್ರದೇಶದಲ್ಲಿ ಕಮಲಪೀಠ ನಿರ್ಮಾಣ ಮಾಡಿ ಅದರ ಮೇಲೆ ಕ್ರೇನ್‌ ಸಹಾಯದಿಂದ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ದೊಡ್ಡ ಪ್ರಮಾಣದಲ್ಲಿ ಶಾಸ್ತ್ರೋಕ್ತವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿಲ್ಲ. ಮಂದಿರ ನಿರ್ಮಾಣದ ಭಾಗವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸೋಮವಾರ ಶಾಂತಿ ಹೋಮ ಮಾತ್ರ ನಡೆಯಲಿದೆ. ಪ್ರಾಣ ಪ್ರತಿಷ್ಠಾಪನೆ ಕಾರ್ಯ ಇರುವುದಿಲ್ಲ ಎಂದು ಮಠದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

‘ಅಭಯರಾಮನ ಮಂದಿರ ನಿರ್ಮಾಣವಾದ ನಂತರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಮಂದಿರ ಪೂರ್ತಿಗೊಳ್ಳಲು ಕನಿಷ್ಠ ಒಂದು ವರ್ಷವಾದರೂ ಬೇಕಾಗಲಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳುತ್ತಿರುವ ಸ್ಮರಣೆಯಲ್ಲಿ ಮಂತ್ರಾಲಯದಲ್ಲಿ ವಿಗ್ರಹ ನಿಲ್ಲಿಸಲಾಗಿದೆ’ ಎಂದು ಅಭಯರಾಮ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಮೂರ್ತಿ ತಿಳಿಸಿದರು.

ಮಂತ್ರಾಲಯದ ಹೊರ ವಲಯದಲ್ಲಿ ಗೊತ್ತುಪಡಿಸಿದ ಪೀಠದಲ್ಲಿ ಶನಿವಾರ 36 ಅಡಿ ಎತ್ತರದ ಶ್ರೀ ಅಭಯರಾಮನ ಶಿಲಾ ಮೂರ್ತಿಯನ್ನು ಕ್ರೇನ್‌ ಸಹಾಯದಿಂದ ಇರಿಸಲಾಯಿತು. ಸುಬುಧೇಂದ್ರ ತೀರ್ಥರು ಹಾಜರಿದ್ದರು.
ಮಂತ್ರಾಲಯದ ಹೊರ ವಲಯದಲ್ಲಿ ಗೊತ್ತುಪಡಿಸಿದ ಪೀಠದಲ್ಲಿ ಶನಿವಾರ 36 ಅಡಿ ಎತ್ತರದ ಶ್ರೀ ಅಭಯರಾಮನ ಶಿಲಾ ಮೂರ್ತಿಯನ್ನು ಕ್ರೇನ್‌ ಸಹಾಯದಿಂದ ಇರಿಸಲಾಯಿತು. ಸುಬುಧೇಂದ್ರ ತೀರ್ಥರು ಹಾಜರಿದ್ದರು.
ಭವ್ಯವಾದ 36 ಅಡಿ ಎತ್ತರದ ಅಭಯ ರಾಮ ಮೂರ್ತಿಯ ಕೆತ್ತನೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಂತ್ರಾಲಯದಲ್ಲಿ ಗೊತ್ತುಪಡಿಸಿದ ಪೀಠದಲ್ಲಿ ಇರಿಸಲಾಗಿದೆ.
–ಸುಬುಧೇಂದ್ರ ತೀರ್ಥರು, ಮಂತ್ರಾಲಯ ಮಠದ ಮಠಾಧೀಶರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT