ಭಾನುವಾರ, ಜೂನ್ 20, 2021
29 °C
ಮಸೀದಿ, ಮನೆಗಳಲ್ಲಿ ಮಾತ್ರ ಪ್ರಾರ್ಥನೆ ಏರ್ಪಾಡು

ರಾಯಚೂರು ಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಲ್ಲಿ ಮುಸ್ಲಿಮರು ಸರಳವಾಗಿ ಸಂಭ್ರಮದಿಂದ ಆಚರಿಸಿದರು. ಪ್ರತಿವರ್ಷದಂತೆ ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಇರಲಿಲ್ಲ. ಮಸೀದಿಗಳಲ್ಲಿ ಹಾಗೂ ಮನೆಗಳಲ್ಲಿಯೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.

ಕೋವಿಡ್‌ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿತ್ತು. ಹೀಗಾಗಿ ಮಸೀದಿಗಳಲ್ಲಿಯೂ ಜನದಟ್ಟಣೆಗೆ ಅವಕಾಶ ಇರಲಿಲ್ಲ. ನಸುಕಿನ ಜಾವದಿಂದಲೇ ಅನೇಕರು ಮಸೀದಿಗಳಿಗೆ ಹೋಗಿ ಬರುತ್ತಿದ್ದ ದೃಶ್ಯ ಕಂಡುಬಂತು. ಎಲ್ಲರೂ ಒಟ್ಟಾಗಿ ನಿಂತುಕೊಳ್ಳುವುದಕ್ಕೆ ಸಾಧ್ಯ ಇರಲಿಲ್ಲ. ಹೀಗಾಗಿ ಕುಟುಂಬದ ಸದಸ್ಯರೊಂದಿಗೆ ಸಣ್ಣ ಗುಂಪುಗಳಲ್ಲಿ ಮಸೀದಿಗಳಿಗೆ ಹೋಗಿ ಪ್ರಾರ್ಥಿಸಿದರು.

ಶುಭ್ರ ವಸ್ತ್ರ ಧರಿಸಿದ್ದ ಮುಸ್ಲಿಮರು ಭಕ್ತಿಭಾವದಿಂದ ಪ್ರಾರ್ಥಿಸುತ್ತಿರುವುದು ಕಂಡುಬಂತು. ಮಕ್ಕಳು ಕೂಡಾ ವಿಶೇಷ ಉಡುಗೆಯೊಂದಿಗೆ ಸಂಭ್ರಮಿಸಿದರು. ಪ್ರತಿವರ್ಷ ಪರಸ್ಪರ ಆಲಂಗಿಸಿ, ಕೈಕುಲುಕಿ ಶುಭಾಶಯ ಹೇಳುತ್ತಿದ್ದ ದೃಶ್ಯ ಸಾಮಾನ್ಯ ಇರುತ್ತಿತ್ತು. ಈ ವರ್ಷ ತಮ್ಮ ಹತ್ತಿರ ಬಂಧುಗಳಿಗೆ ಮಾತ್ರ ಕೈ ಕುಲುಕಿ ಶುಭಾಶಯ ವಿನಿಮಯ ಮಾಡುತ್ತಿದ್ದ ದೃಶ್ಯ ವಿವಿಧ ಬಡಾವಣೆಗಳಲ್ಲಿ ಕಾಣಿಸಿತು.

ಬಕ್ರೀದ್‌ ಹಬ್ಬದ ನಂಬಿಕೆಯಂತೆ ಶನಿವಾರ ಬೆಳಿಗ್ಗೆ ಕುರಿಗಳನ್ನು ಬಲಿ ಕೊಟ್ಟು, ಮನೆಗಳಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯ ಮಾಡಿದರು. ಬಂಧುಗಳೊಂದಿಗೆ ಸಿಹಿ ಭೋಜನ, ಕುರಿ ಮಾಂಸದೂಟ ಸಾಮಾನ್ಯವಾಗಿತ್ತು. ಲಾಕ್‌ಡೌನ್‌ ಕಾರಣದಿಂದ ಈ ವರ್ಷ ಆರ್ಥಿಕ ಸಂಕಷ್ಟ ಇರುವುದರಿಂದ ಬಹಳಷ್ಟು ಮುಸ್ಲಿಮರು ಮೇಕೆ ಖರೀದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಮಟನ್ ಶಾಪ್‌ಗಳಿಂದ ಖರೀದಿಸಿದರು. ಹಬ್ಬವು ಸರಳವಾಗಿತ್ತು.

‘ಕಷ್ಟ ಏನೇ ಇದ್ದರೂ ಧರ್ಮ ಪಾಲಿಸುವುದು ಬಿಡುವುದಿಲ್ಲ. ಕುರಿಗಳು ದುಬಾಯಾಗಿವೆ. ಜನರು ಕೆಲಸ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಖರ್ಚು ಮಾಡುವುದಕ್ಕೆ ಆಗುವುದಿಲ್ಲ. ಸಾಧ್ಯವಿದ್ದಷ್ಟು ಮಟನ್‌ ಖರೀದಿಸಿ ತಂದು ಬ್ರಕೀದ್‌ ಹಬ್ಬದ ಸಂಪ್ರದಾಯ ಆಚರಿಸುತ್ತಿದ್ದೇವೆ’ ಎಂದು ಎಲ್‌ಬಿಎಸ್‌ ನಗರದ ಇಬ್ರಾಹಿಂ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು