ಗುರುವಾರ , ಜನವರಿ 23, 2020
28 °C
ಕೃಷಿಮೇಳದ ಸಮಾರೋಪದಲ್ಲಿ ಹಾಸ್ಯಚತುರ ಗಂಗಾವತಿ ಪ್ರಾಣೇಶ ಹೇಳಿಕೆ

ಕೃಷಿ ನಂಬಿದರೆ ಕೈ ಬಿಡುವುದಿಲ್ಲ: ಪ್ರಾಣೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷಿಯನ್ನು ನಂಬಿದ ದೇಶದಲ್ಲಿ ಎಂದೆಂದಿಗೂ ದುರ್ಭಿಕ್ಷೆ ಬರುವುದಿಲ್ಲ ಎಂದು ವೇದಗಳಲ್ಲೇ ಹೇಳಲಾಗಿದೆ. ಔದ್ಯೋಗಿಕರಣ ಅವಾಂತರಕ್ಕೆ ಸಿಲುಕಬೇಡಿ. ರೈತರು ಕೃಷಿಯನ್ನು ನಂಬಬೇಕು, ಅದು ಕೈ ಬಿಡುವುದಿಲ್ಲ ಎಂದು ಹಾಸ್ಯಚತುರ ಗಂಗಾವತಿ ಪ್ರಾಣೇಶ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮುಖ್ಯಅತಿಥಿಯಾಗಿ ಮಾತನಾಡಿದರು.

ಕೃಷಿಯಿಂದ ಒಳ್ಳೆಯ ಬದುಕು, ಆರೋಗ್ಯ ಪಡೆಯಲು ಸಾಧ್ಯ. ಅದರೆ, ಔದ್ಯೋಗಿಕರಣದ ಪ್ರಭಾವದಿಂದ ದುರಾಸೆಗೆ ಬಿದ್ದು ಕೃಷಿ ಹಾಳು ಮಾಡಿಕೊಳ್ಳುವ ಸ್ಥಿತಿ ಬಂದೊದಗಿದೆ. ರೈತರಿಗೆ ಸಿಗಬೇಕಾದ ಸ್ಥಾನಮಾನ ಸಿಗುತ್ತಿಲ್ಲ. ಹಣವಂತರಿಗೆ ಮಾನ ಎನ್ನುವಂತಾಗಿದೆ. ಸಾಮಾನ್ಯರಿಗೂ ಒಂದು ಕಾಲ ಬಂದೇ ಬರುತ್ತದೆ ಎನ್ನುವುದನ್ನು ತಿಪ್ಪೆಯಲ್ಲಿ ಎಸೆಯುತ್ತಿದ್ದ ಈರುಳ್ಳಿ ಈಗ ಎಲ್ಲರಿಗೂ ಪಾಠ ಕಲಿಸಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಮಕ್ಕಳಿಗೆ ಕೃಷಿಯ ಜ್ಞಾನ ಕೊಡಬೇಕು. ರೈತರ ಕಷ್ಟ ಏನೆಂದು ತಿಳಿಸಬೇಕು. ಇದಕ್ಕಾಗಿ ಪಠ್ಯದಲ್ಲಿ ಕೃಷಿ ವಿಶೇಷತೆ ಅಳವಡಿಸಬೇಕು. ಹಣ್ಣು, ಹೂವು, ದವಸ, ಧಾನ್ಯ ಹಾಗೂ ಜಾನುವಾರು ಹೇಗಿರುತ್ತವೆ, ಹೇಗೆ ಬೆಳೆಯುತ್ತವೆ ಎಂಬುದನ್ನು ಮಕ್ಕಳಿಗೆ ತೋರಿಸಿಕೊಡಬೇಕು. ಅವುಗಳೊಂದಿಗೆ ಒಡನಾಟ ಇಟ್ಟುಕೊಳ್ಳುವುದರಿಂದ ಕ್ರಿಯಾಶೀಲತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ಮಹಾನಗರದ ಜೀವನ ಈಚೆಗೆ ಬೇಸರ ಮೂಡಿಸುತ್ತಿದೆ. ಬೆಂಗಳೂರಿನಲ್ಲಿರುವ ಶೇ 40 ರಷ್ಟು ಜನರು ಮರಳಿ ಗ್ರಾಮೀಣ ಬದುಕಿಗೆ ಹೋಗುವ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ನಿವೃತ್ತರಾದವರು ತಮ್ಮ ಮೂಲ ಗ್ರಾಮಗಳತ್ತ ಹೋಗುವ ಯೋಜನೆಯಲ್ಲಿದ್ದಾರೆ. ಕೃಷಿ ಕಡೆಗೆ ಒಲವು ಹೆಚ್ಚಾಗುತ್ತಿದೆ. ರೈತರು ತಮ್ಮ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಎಂದು ಭಾವಿಸಬಾರದು ಎಂದು ಹೇಳಿದರು.

ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕು. ಮಹಿಳೆಯರಲ್ಲಿ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ. ಇದರಿಂದ ಭಾಷಾಜ್ಞಾನ ವಿಸ್ತರಿಸುವ ಬದಲಾಗಿ, ಕುಬ್ಜವಾಗುತ್ತದೆ. ದೇಶದಲ್ಲಿ ಮಾತೃಭಾಷೆಯನ್ನು ಉಳಿಸಿಕೊಂಡು ಪೋಷಿಸುತ್ತಿರುವುದು ರೈತ ಸಮುದಾಯ ಎಂದು ಅಭಿಪ್ರಾಯಪಟ್ಟರು.

ವಿನೋದಗಾರ ನರಸಿಂಹ ಜೋಶಿ ಅವರು ಹಾಸ್ಯ ಬೆರೆತ ಮಾತುಗಳಿಂದ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು.

ಕುಲಪತಿ ಡಾ.ಕೆ.ಎನ್‌. ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ, ವೀರನಗೌಡ, ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ.ಎಸ್‌.ಕೆ.ಮೇಟಿ, ಕುಲಸಚಿವ ಡಾ.ಎಂ.ಜಿ.ಪಾಟೀಲ, ಡಾ.ಐ.ಶಂಕರಗೌಡ, ಡಾ.ಎಂ.ನೇಮಿಚಂದ್ರಪ್ಪ, ಡಾ.ಅಶೋಕ ಜೆ., ಡಾ.ಎ.ಎಸ್‌. ಹಳೆಪ್ಯಾಟಿ, ಡಾ.ಪ್ರಮೋದ ಕಟ್ಟಿ, ರವಿ ಮೇಸ್ತಾ, ಡಾ.ಡಿ.ಎಂ.ಚಂದರಗಿ, ಡಾ.ಎಂ.ವೀರನಗೌಡ, ಡಾ.ಸುರೇಶ ಎಸ್‌.ಪಾಟೀಲ, ಡಾ.ಆರ್‌.ಲೋಕೇಶ ಇದ್ದರು.

ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ ನಿರೂಪಿಸಿದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಬಿ.ಎಂ.ಚಿತ್ತಾಪುರ ವಂದಿಸಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು