ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‍ಗೆ ಕಾಂಗ್ರೆಸ್ಸೇ ಶತ್ರು, ಬಿಜೆಪಿ ಅಲ್ಲ

ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಳೀನ್‍ಕುಮಾರ್ ಕಟೀಲ್ ಟೀಕೆ
Last Updated 21 ನವೆಂಬರ್ 2020, 3:32 IST
ಅಕ್ಷರ ಗಾತ್ರ

ಸಿಂಧನೂರು: ‘ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ಕಾಂಗ್ರೆಸ್ಸಿಗರು ಮತ್ತು ಗಾಂಧಿ ಕುಟುಂಬದ ನಡುವೆ ಜಗಳ ಶುರುವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ಗುಂಪುಗಳನ್ನಾಗಿ ಮಾಡಿಕೊಂಡು ಮುಖ್ಯಮಂತ್ರಿ ಸ್ಥಾನ್ಕಕಾಗಿ ಗುದ್ದಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಶತ್ರು ಮತ್ತು ಸವಾಲಾಗಿಲ್ಲ. ಬದಲಿಗೆ ಕಾಂಗ್ರೆಸ್‍ಗೆ ಕಾಂಗ್ರೆಸ್ಸೇ ಶತ್ರುವಾಗಿದೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಟೀಕಿಸಿದರು.

ಸ್ಥಳೀಯ ಸತ್ಯಗಾರ್ಡನ್‍ನಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಧರ್ಮ, ಗೂಂಡಾ ಮತ್ತು ಭ್ರಷ್ಟಾಚಾರ ರಾಜಕಾರಣ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಜನರಿಂದ ತಿರಸ್ಕಾರಗೊಂಡು ಕಳೆದ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷವಾಗಲು ನಾಲಾಯಕ್ ಆಗಿದೆ. ಅಧಿಕಾರಕ್ಕಾಗಿ ಕೈ ನಾಯಕರು ವೈಯಕ್ತಿಕ ಕಚ್ಚಾಟ ನಡೆಸಿ, ಆರೋಪ-ಪ್ರತ್ಯಾರೋಪಗಳಲ್ಲಿ ಕಾಲ ಕಳೆದು ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿ ಅವಸಾನದತ್ತ ಸಾಗುತ್ತಿದೆ ಎಂದು ಹೇಳಿದರು.

ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವ ಹಾಗೂ ಜನಪರ ಯೋಜನೆಗಳು, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಭಿವೃದ್ದಿಪರ ಚಿಂತನೆ ಜೊತೆಗೆ ನೆರೆ, ಬರ ಮತ್ತು ಕೋವಿಡ್‍ನಂತಹ ಸಂದಿಗ್ಧ ಸಂದರ್ಭಗಳನ್ನು ಅಚ್ಚುಕಟ್ಟಾಗಿ ನಿವಾರಿಸಿ, ಜನಮುಖಿಯಾಗಿ ಮಾಡಿದ ಕಾರ್ಯಗಳು ಜನಮೆಚ್ಚುಗೆಗೆ ಪಾತ್ರವಾಗಿವೆ. ಇನ್ನೂ ಎರಡುವರೆ ವರ್ಷಗಳ ಕಾಲ ಬಿಎಸ್‍ವೈ ಅವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ. ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದರು.

ಪ್ರತಿ ಜಿಲ್ಲೆಗಳಲ್ಲಿಯೂ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸಭೆ ನಡೆಸಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಪಕ್ಷ ಸಂಘಟನೆಗೆ ಶ್ರಮಿಸಲಾಗುತ್ತಿದೆ. ಶಕ್ತಿಕೇಂದ್ರಗಳು, ಪಂಚರತ್ನ, ಕುಟುಂಬ ಮಿಲನ ಕಾರ್ಯತಂತ್ರಗಳ ಮೂಲಕ ಹೋಬಳಿ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಪಕ್ಷವನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದರು.

ಜೆಡಿಎಸ್ ಪಕ್ಷದ ಶಾಸಕ ವೆಂಕಟರಾವ್ ನಾಡಗೌಡ ಅವರು ಬಿಜೆಪಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಯಾರೇ ಬಂದರೂ ಸಹ ಪಕ್ಷ ಸ್ವಾಗತಿಸುತ್ತದೆ ಎಂದು ಹೇಳಿದರು.

ಮುಂಬರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಚುನಾವಣೆ ಹಾಗೂ ಬೆಳಗಾವಿ ಲೋಕಸಭಾ ಉಪ ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ. ಇದಲ್ಲದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿಂಧನೂರು ಸೇರಿದಂತೆ 150ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಶೇ 80 ರಷ್ಟು ಪಂಚಾಯಿತಿಗಳು ಬಿಜೆಪಿ ಪಾಲಾಗಲಿವೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಸಾಕಷ್ಟು ಅಭಿವೃದ್ದಿ ಹೊಂದುವ ಮೂಲಕ ದೊಡ್ಡ ನಗರವಾಗುತ್ತಿರುವ ಸಿಂಧನೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲು ಮತ್ತು ಬೈಪಾಸ್ ರಿಂಗ್ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಶೇ 50 ಮತ್ತು ರಾಜ್ಯದಿಂದ ಶೇ 50 ರಷ್ಟು ಅನುದಾನ ಮಂಜೂರು ಮಾಡುವ ಕುರಿತು ನಳೀನ್‍ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರ ಗಮನ ಸೆಳೆಯಬೇಕು. ರಾಯಚೂರು ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಬೇಕು’ ಎಂದರು.

ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಮಾನಂದ ಯಾದವ್, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ, ಅಶ್ವತ್‍ನಾರಾಯಣ, ಮಹೇಶ ತೆಂಗಿನಕಾಯಿ ಇದ್ದರು.

ಇದೇ ವೇಳೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ರಾಜ್ಯ ಮಟ್ಟದ ಪದಾಧಿಕಾರಿಗಳ ವಿವಿಧ ಸಭೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT