ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ದಶಕವಾದರೂ ಮುಷ್ಟೂರು ಸೇತುವೆ ಅಪೂರ್ಣ

ಗ್ರಾಮಸ್ಥರ ಪಾಲಿಗೆ ಪರಿಹಾರವಾಗಲಿಲ್ಲ ಸಂಚಾರ ಸಮಸ್ಯೆ
Last Updated 15 ಜೂನ್ 2020, 20:00 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಭೋಗಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಟ್ಟ ಗ್ರಾಮ ಮುಷ್ಟೂರು. ತಾಲ್ಲೂಕು ಕೇಂದ್ರದಿಂದ 5.ಕಿ.ಮೀ. ಸಮೀಪದಲ್ಲಿದ್ದರೂ ಇದು ಮೂಲಸೌಕರ್ಯ ವಂಚಿತ ಪ್ರದೇಶ.

ಗ್ರಾಮದ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ದಶಕದಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಈಚೆಗೆ ಸುರಿದ ಮಳೆಗೆ ನಿರ್ಮಾಣ ಹಂತದ ಸೇತುವೆಯ ಪಕ್ಕದಲ್ಲಿದ್ದ ಹಳೆಯ ಸೇತುವೆ ಸಂಪೂರ್ಣ ಕೊಚ್ಚಿಹೋಗಿರುವ ಕಾರಣ ಸಂಚಾರ ಬಂದ್ ಆಗಿದೆ.

ಒಂದು ತಿಂಗಳಿನಿಂದ ಹಳ್ಳ ದಾಟಲು ಮುಷ್ಟೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದ ಐತಿಹಾಸಿಕ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ಶನಿವಾರ ಜಿಲ್ಲೆಯ ವಿವಿಧೆಡೆಯಿಂದ ಭಕ್ತರು ಬರುತ್ತಾರೆ. ಅದಕ್ಕಾಗಿ ಪಡಿಪಾಟಲು ಪಡುತ್ತಾರೆ. ಆದರೆ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸುತ್ತಿಲ್ಲ.

ಲೋಕೋಪಯೋಗಿ ಇಲಾಖೆ ವತಿಯಿಂದ ಮಾನ್ವಿಯಿಂದ ಮುಷ್ಟೂರುವರೆಗೆ ರಸ್ತೆ ಮತ್ತು ಮುಷ್ಟೂರು ಗ್ರಾಮದಿಂದ ಜಾಗೀರಪನ್ನೂರು ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಕೋಟ್ಯಂತರ ರೂಪಾಯಿ ವೆಚ್ಚವಾಗಿದೆ. ಆದರೆ, ಗ್ರಾಮದ ಪ್ರಮುಖ ಬೇಡಿಕೆಯಾದ ಹಳ್ಳದ ಸೇತುವೆ ನಿರ್ಮಾಣ ಕಾಮಗಾರಿ ಮಾತ್ರ ಯಥಾಸ್ಥಿತಿ ಉಳಿದುಕೊಂಡಿದೆ.

2009ರಲ್ಲಿ ಸಂಭವಿಸಿದ ಭೀಕರ ನೆರೆಹಾವಳಿಗೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಗ್ರಾಮದ ಹಳ್ಳದ ಸೇತುವೆ ಸಂಪೂರ್ಣವಾಗಿ ಕೊಚ್ಚಿಹೋಗಿತ್ತು. ಆಗ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ₹ 63 ಲಕ್ಷ ವೆಚ್ಚದಲ್ಲಿ ಬೃಹತ್ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದರು. ಕಳಪೆ ಕಾಮಗಾರಿಯಿಂದ ಪೂರ್ಣಗೊಳ್ಳುವ ಮೊದಲೇ ನಿರ್ಮಾಣ ಹಂತದ ಸೇತುವೆ ಕುಸಿಯಿತು.

ಹಳೆಯ ಸೇತುವೆ ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಮಳೆ ಬಂದಾಗಲೆಲ್ಲಾ ಈ ಹಳೆಯ ಸೇತುವೆ ನೀರಿನಲ್ಲಿ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯ.
ಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

‘1,700 ಮತದಾರರು ಮತ್ತು ಗ್ರಾಮ ಪಂಚಾಯಿತಿಯ ನಾಲ್ವರು ಸದಸ್ಯರನ್ನು ಈ ಗ್ರಾಮ ಹೊಂದಿದೆ. ಗ್ರಾಮ ಪಂಚಾಯಿತಿ ಕಾರ್ಯಕ್ಕೆ 18ಕಿ.ಮೀ ದೂರದ ಭೋಗಾವತಿ ಗ್ರಾಮಕ್ಕೆ ಮಾನ್ವಿ ಮೂಲಕ ತೆರಳಬೇಕು. ಮುಷ್ಟೂರು ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಂಜೂರು ಮಾಡಬೇಕು. ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು. ಗ್ರಾಮಕ್ಕೆ ಸಾರಿಗೆ ಹಾಗೂ ಮೂಲಸೌಕರ್ಯ ಕಲ್ಪಿಸಬೇಕು’ ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT