ಬುಧವಾರ, ಡಿಸೆಂಬರ್ 8, 2021
18 °C
ಬೆಳಗಾವಿ ವಿಭಾಗದ ವಿಚಕ್ಷಣಾ ದಳದ ಜಂಟಿ ನಿರ್ದೇಶಕ ಹೇಳಿಕೆ

ರಾಯಚೂರು: ನಕಲಿ ಬೀಜ, ಗೊಬ್ಬರ ಮಾರಾಟಕ್ಕೆ ತಡೆ- ಜಿಲಾನಿ ಮೊಕಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಕೃಷಿಗೆ ಸಂಬಂಧಿಸಿದಂತೆ ನಕಲಿ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪರಣೆಗಳು ಮಾರಾಟ ಮಾಡುವುದನ್ನು ವ್ಯಾಪಕವಾಗಿ ತಡೆಗಟ್ಟಲಾಗುತ್ತಿದ್ದು, ಕೃಷಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ತಪಾಸಣೆ ಕೈಗೊಳ್ಳುತ್ತಿದ್ದಾರೆ ಎಂದು ಬೆಳಗಾವಿ ವಿಭಾಗದ ವಿಚಕ್ಷಣಾ ದಳದ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯಲ್ಲಿ 85 ಜೈವಿಕ ಕೀಟನಾಶಕ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ ನಾಲ್ಕು ಕಳಪೆ ಪ್ರಕರಣಗಳು ದಾಖಲಾಗಿವೆ. ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕಗಳು ಸೇರಿದಂತೆ ಒಟ್ಟು ₹10 ಲಕ್ಷದ ಮೌಲ್ಯದ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಮಸ್ಕಿ ತಾಲ್ಲೂಕಿನ ಮಟ್ಟೂರು, ಕುಣೆಕಲ್ಲೂರು ಗ್ರಾಮದ ಶರಣಗೌಡ ಅವರ ಉಗ್ರಾಣದಲ್ಲಿ ನಕಲಿ ರಸಗೊಬ್ಬರ ದೊರೆತಿದ್ದು, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಳ್ಳಲಾಗಿದೆ. ಅನುಮಾನಾಸ್ಪದ ಕ್ರಿಮಿನಾಶಕ, ಔಷಧ, ರಸಗೊಬ್ಬರ ಹಾಗೂ ಬೀಜಗಳ ಮಾರಾಟ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳುವ ಮುನ್ನ ಮಾರಾಟ ಪರವಾನಗಿ ರದ್ದುಪಡಿಸಿ ಪ್ರಯೋಗಾಲಯದ ಫಲಿತಾಂಶ ಬಂದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ವಿವಿಧ ಕೃಷಿ ಪರಿಕರಗಳನ್ನು ಅಧಿಕೃತ ಮಾರಾಟ ಮಳಿಗೆಗಳಿಂದ ಮಾತ್ರ ರೈತರು ಖರೀದಿಸಿ, ರಶೀದಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಬಿಡಿಯಾಗಿ ಮಾರಾಟವಾಗುವ ಬೀಜ ಸೇರಿದಂತೆ ಇತರೆ ಪರಿಕರಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಬಾರದು ಎಂದು ಹೇಳಿದರು.

ರಾಯಚೂರು ಜಿಲ್ಲೆಯ ಅಧಿಕಾರಿಗಳು ಕೃಷಿ ಪರಿಕಾರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಸುಮಾರು 14 ಜೈವಿಕ ಕೀಟನಾಶಕ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳ ವಿಶ್ಲೇಷಣೆಗಾಗಿ ಒಳಪಡಿಸಿದ್ದಾರೆ ಎಂದರು.

ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೈಯದ್ ರಹೀಮ್ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಉತ್ತಮ ಮಳೆಯಾಗಿದ್ದು, ಈ ಬಾರಿ ಕಡಲೆ, ಜೋಳ, ಆಗಸೆ, ಮೆಕ್ಕೆಜೋಳ, ಗೋಧಿ, ಹುರುಳಿ ಸೇರಿದಂತೆ ವಿವಿಧ ಬೆಳೆಗಳು ಬಿತ್ತನೆಯಾಗಿದೆ. ಇತ್ತೀಚೆಗೆ ಸುರಿದ ಮಳೆ ಗಾಳಿಗೆ ಜಿಲ್ಲೆಯಲ್ಲಿ 280 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಜಲಾವೃತಗೊಂಡಿದೆ ಎಂದು ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿ ಮಹಾತೇಂಶ್ ಕಣಗಿ, ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ದೀಪಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು