ಸೋಮವಾರ, ಜುಲೈ 26, 2021
26 °C

ಕೇಂದ್ರದಿಂದ ಅಭಿವೃದ್ಧಿಪರ ನಿರ್ಧಾರಗಳು: ಸಂಸದ ರಾಜಾ ಅಮರೇಶ್ವರ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇಶದಲ್ಲಿ ಎರಡನೇ ಅವಧಿಗೆ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ್ದು, ಸಾಕಷ್ಟು ಅಭಿವೃದ್ಧಿಪರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಮಾಡುವುದಕ್ಕೆ ಒತ್ತು ನೀಡಿದ್ದಾರೆ. ದೂರದೃಷ್ಟಿ ಇಟ್ಟುಕೊಂಡು ಅನೇಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. 370 ನೇ ವಿಧಿಯನ್ನು ರದ್ದುಗೊಳಿಸಿರುವುದು, ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯಲು ಬಿಗಿ ಕಾನೂನು, ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಆದಾಯ ದ್ವಿಗುಣ ಮಾಡುವುದು ಸೇರಿದಂತೆ ಅನೇಕ ಅಭಿವೃದ್ಧಿ ಪರ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಪ್ರತಿಪಕ್ಷದ ಮುಖಂಡರಲ್ಲಿ ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಜನರ ವಿಶ್ವಾಸ ಇರುವುದರಿಂದಲೇ ಎರಡನೇ ಅವಧಿಗೆ ಪ್ರಧಾನಿ ಆಗಿದ್ದರೆ ಎಂಬುದನ್ನು ಮರೆಯಬಾರದು. ಜನರ ನಿರೀಕ್ಷೆಗೆ ತಕ್ಕಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲಸ ಮಾಡುತ್ತಿವೆ. ಕೋವಿಡ್‌ನಿಂದ ಇಡೀ ಜಗತ್ತು ತತ್ತರಿಸಿದೆ. ಇದೇ ಕಾರಣದಿಂದ ಕೆಲವು ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿರಬಹುದು. ಆರ್ಥಿಕ ಚೇತರಿಕೆ ತರುವುದಕ್ಕೆ ಕೇಂದ್ರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದರು.

ಐಐಐಟಿ ರಾಯಚೂರಿನಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡುವುದಕ್ಕೆ ₹8 ಕೋಟಿ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದಲ್ಲದೆ, ಜಿಲ್ಲೆಯಲ್ಲಿ ಫಾರ್ಮಾ ಕಂಪೆನಿಗಳನ್ನು ಸ್ಥಾಪಿಸುವುದಕ್ಕೆ ಸಚಿವ ಸದಾನಂದಗೌಡ ಅವರೊಂದಿಗೆ ಚರ್ಚಿಸಲಾಗಿದೆ. ಯಾದಗಿರಿ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರಿಯಾಗಿದೆ. ಏಮ್ಸ್‌ ಸ್ಥಾಪಿಸಲು ಮತ್ತು ಮೈನಿಂಗ್‌ ಕಾಲೇಜೊಂದನ್ನು ಸ್ಥಾಪಿಸಲು ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಡಿಟಿಟಲ್‌ ರ‍್ಯಾಲಿ: ಕೇಂದ್ರ ಸರ್ಕಾರವು ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಗಳ ಕುರಿತು ಜನಜಾಗೃತಿ ಮೂಡಿಸಲು ಜೂನ್‌ 3 ರಿಂದ 12 ರವರೆಗೂ ಜಿಲ್ಲೆಯಲ್ಲಿ ಡಿಜಿಟಲ್‌ ರ‍್ಯಾಲಿ ಆರಂಭಿಸಲಾಗುತ್ತಿದೆ. 1,470 ಭೂತ್‌ಗಳಿದ್ದು, ಪ್ರತಿ ಭೂತಿನಲ್ಲೂ 100 ಮನೆಗಳನ್ನು ತಲುಪುವ ಯೋಜನೆ ಇದೆ ಎಂದು ಬಿಜೆಪಿ ವಿಭಾಗೀಯ ಉಸ್ತುವಾರಿ ಅಶೋಕ ಗಸ್ತಿ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವ, ನಗರ ಘಟಕದ ಅಧ್ಯಕ್ಷ ಗೋವಿಂದ, ಮುಖಂಡರಾದ ಎ.ಪಾಪರೆಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.