ರಾಯಚೂರು: ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ಜೈನ ಸಮಾಜದವರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜೈನ ಭವನದಿಂದ ಮಹಾವೀರ ವೃತ್ತ, ಗಾಂಧಿ ಚೌಕ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಜೈನ ಸಮುದಾಯದ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಆನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್ ದುರುಗೇಶ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾನಿರತ ಜೈನ ಸಮುದಾಯದ ಮುಖಂಡರು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೈನ ಮುನಿಯ ಹತ್ಯೆ ಶತಮಾನದ ಕರಾಳ ಘಟನೆಯಾಗಿದೆ. ಬೀಬತ್ಸವಾಗಿ ಸ್ವಾಮೀಜಿ ಅವರ ಅಂಗಾಂಗಗಳನ್ನು ತುಂಡು ತುಂಡು ಮಾಡಿ ಹತ್ಯೆ ಮಾಡಿ ಕ್ರೂರತೆ ಮೆರೆಯಲಾಗಿದೆ. ದೇಶಯದಲ್ಲಿ ದಿಗಂಬರ ಮುನಿಗಳು ಇರುವುದು ವಿರಳ. ಸ್ವಾಮೀಜಿಗಳ ಹತ್ಯೆ ನಾಡಿಗೆ ಅವಮಾನ. ಇನ್ನೂ ಮುಂದೆ ದಿಗಂಬರ ಮುನಿಗಳಿಗೆ ಎಲ್ಲೆಲ್ಲಿ ಸಂಚರಿಸುತ್ತಾರೆ, ವಾಸವಾಗಿರುತ್ತಾರೆ ಅಲ್ಲಿ ಬಿಗಿ ಭದ್ರತೆ ನೀಡಿ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜದ ಮುಖಂಡ ಅಶೋಕ ಕುಮಾರ ಜೈನ್ ಮಾತನಾಡಿ, ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಜೈನ ಮುನಿಗಳ ಕೊಲೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ. ಸೂಕ್ಷ್ಮ ಹಾಗೂ ಆಳವಾಗಿ ತನಿಖೆ ನಡೆಸಬೇಕು. ಜೈನ ಮುನಿಗಳು ಇಡೀ ಜೀವನ ಸಮಾಜ ಹಾಗೂ ಧರ್ಮಕ್ಕೆ ಮುಡಿಪಾಗಿಟ್ಟು ಲೋಕ ಕಲ್ಯಾಣಕ್ಕೆ ಸಂಚರಿಸುತ್ತಾರೆ ಇಂತಹ ಅಹಿಂಸಾವಾದಿಗಳನ್ನು ಬರ್ಬರವಾಗಿ ಕೊಲೆ ಮಾಡಿದ್ದು ಹೇಯ ಕೃತ್ಯವಾಗಿದೆ. ರಾಜ್ಯ ಸರ್ಕಾರದಿಂದ ತನಿಖೆ ನಡೆಸಲು ಆಗದಿದ್ದಲ್ಲಿ ಸಿಬಿಐಗೆ ನೀಡಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ದಿಗಂಬರ ಜೈನ ದೇವಸ್ಥಾನದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಮಹಾವೀರ ಹರದರ, ಸ್ಥಾನಿಕವಾಸಿ ಜೈನ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಿಲಾಲ ಮೋತಾ, ಸುಮತಿನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಮಲ್ ಚೋರಡಿಯಾ, ಜೈನ ಶ್ವೇತಾಂಬರ ತೇರಾಪಂತ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಾಣಿಕ ಚಂದ್ ಮರೋಟಿ, ಮುಖಂಡರಾದ ಅಶೋಕ ಕುಮಾರ ಜೈನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.