ಶುಕ್ರವಾರ, ಏಪ್ರಿಲ್ 16, 2021
31 °C

ಬಜೆಟ್ ಅಧಿವೇಶನ: ಕಾರ್ಮಿಕರ ಪರ ಚರ್ಚಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ರೈತ ವಿರೋಧಿ, ಕೃಷಿ ಸಂಬಂಧಿತ ತಿದ್ದುಪಡಿ ಮಸೂದೆಗಳು ಮತ್ತು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ, ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಒತ್ತಾಯಿಸಿ ಸೆಂಟರ್ ಆಫ್ ಟ್ರೇಡ್ ಯುನಿಯನ್ಸ್ (ಸಿಯುಟಿಐ) ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ವಾಲ್ಮೀಕಿ ವೃತ್ತದಿಂದ ನಗರ ಹಾಗೂ ಗ್ರಾಮೀಣ ಶಾಸಕರ ಕಚೇರಿವರೆಗೆ ಬುಧವಾರ ಪಾದಯಾತ್ರೆ ಮಾಡಿ ಬುಧವಾರ ಮನವಿ ಸಲ್ಲಿಸಿದರು.

ಮುಂಬರುವ ಮಾರ್ಚ್ 4ರಂದು ಎಲ್ಲಾ ವಿಭಾಗದ ಕಾರ್ಮಿಕರು ಬಜೆಟ್ ಅಧಿವೇಶನ ಚಲೋ ನಡೆಸಿ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದೇವೆ. 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ಮಾಡಿರುವ ಕೇಂದ್ರದ ಶಾಸನಗಳನ್ನು ರಾಜ್ಯ ಸರ್ಕಾರ ಜಾರಿ ಮಾದೇ ಕಾರ್ಮಿಕರ ಪರ ಕಾನೂನು ಜಾರಿಗೆ ಮುಂದಾಗಬೇಕು.

ಮಹಿಳೆಯರನ್ನು ರಾತ್ರಿ ಪಾಳಿಯಲ್ಲಿ ಮತ್ತು ಅಪಾಯಕಾರಿ ಕೆಲಸಗಳಲ್ಲಿ ದುಡಿಸಿಕೊಳ್ಳಲು ನೀಡಿರುವ ರಿಯಾಯಿತಿ ರದ್ದು ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಹಾಗೂ ಸೇವೆಗಳ ಖಾಸಗೀಕರಣದ ನೀತಿಗಳನ್ನು ಕೈಬಿಡಬೇಕು. ಎಲ್ಲಾ ವಿಭಾಗದ ನೌಕರರಿಗೂ ಕೋವಿಡ್ ಲಾಕ್ ಡೌನ್ ಕಾಲಾವಧಿಯ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಕೆಲಸ ಕಾಯಂ ಮಾಡಬೇಕು. ಕನಿಷ್ಠ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಜಾರಿ ಮಾಡಿ, ಕೋವಿಡ್ ನಿಂದ ಮೃತಪಟ್ಟ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕೂಡಲೇ ಪರಿಹಾರ ನೀಡಬೇಕು. ಬಿಸಿಯೂಟ ನೌಕರರಿಗೆ ಬೇಸಿಗೆ ಮತ್ತು ದಸರಾ ರಜೆಗಳ ವೇತನ ಪಾವತಿಯಾಗಬೇಕು.

ಪ್ರತಿ ಕುಟುಂಬಕ್ಕೆ 6 ತಿಂಗಳು ತಲಾ ₹7,500 ನೇರ ನಗದು ವರ್ಗಾವಣೆ ಮಾಡಿ, ತಲಾ 10 ಕೆ.ಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಕೆಲಸ ಹಾಗೂ ದಿನಕ್ಕೆ ₹700 ವೇತನ ನೀಡಿ ನಗರ ಪ್ರದೇಶಗಳಿಗೂ ಯೋಜನೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷೆ ವರಲಕ್ಷ್ಮೀ, ಡಿ.ಎಸ್.ಶರಣಬಸವ, ಎಚ್.ಪದ್ಮಾ, ಪ್ರವೀಣರೆಡ್ಡಿ ಗುಂಜಹಳ್ಳಿ, ಅಶೋಕ, ಚೆನ್ನಾರೆಡ್ಡಿ, ಕಲ್ಯಾಣಮ್ಮ, ಅಕ್ಕ ಮಹಾದೇವಿ, ಮಲ್ಲಿಕಾರ್ಜುನ, ನಾಗಮ್ಮ, ಕೆ.ಜಿ.ವೀರೇಶ್, ಜಿಲಾನಿಪಾಷ, ಪಾಲ್‌ಪ್ರಸಾದ್, ಪಾರ್ವತಿ, ಹನುಮಂತರೆಡ್ಡಿ, ರೇಣುಕಾ, ಗೋಕರಮ್ಮ, ಈರಮ್ಮ, ಗಂಗಮ್ಮ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.