ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಮಾರುಕಟ್ಟೆಗೆ ಬಂದ ಮಣ್ಣಿನ ಗಡಿಗೆಗಳು

Published 5 ಮಾರ್ಚ್ 2024, 6:20 IST
Last Updated 5 ಮಾರ್ಚ್ 2024, 6:20 IST
ಅಕ್ಷರ ಗಾತ್ರ

ರಾಯಚೂರು: ಮುಂಗಾರು, ಹಿಂಗಾರು ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬರ ಆವರಿಸಿದೆ. ಮಳೆಯ ಕೊರತೆಯಿಂದಾಗಿ ಮಾರ್ಚ್ ಮೊದಲೇ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗುತ್ತಿದೆ.

ಜಿಲ್ಲೆಯಲ್ಲಿ ಕಳೆದ ವಾರ  18ರಿಂದ 30 ಸೆಲ್ಸಿಯಸ್ ಇದ್ದ ತಾಪಮಾನ ಕನಿಷ್ಠ 20ರಿಂದ ಗರಿಷ್ಠ 35ಕ್ಕೆ ತಲುಪಿದೆ. ಶಿವರಾತ್ರಿಯ ನಂತರ 40 ದಾಟುವುದು ವಾಡಿಕೆ. ಬಿಸಿಲಿನ ಝಳದಿಂದಾಗಿ ಮನೆಯಿಂದ ಹೊರ ಬರುವುದಕ್ಕೂ ಜನ ಹಿಂಜರಿಯುತ್ತಿದ್ದಾರೆ.

ಬೇಸಿಗೆಯಲ್ಲಿ ಬಿಸಿಲಿನ ಝಳ ಸಹಿಸಿಕೊಳ್ಳುವುದು ಕಷ್ಟವಾಗಲಿದೆ. ನಗರದ ಜನ ಆಗಲೇ ತಂಪು ಪಾನೀಯ, ಫ್ರಿಜ್, ಕೂಲರ್ ಖರೀದಿಗೆ ಮುಂದಾಗಿದ್ದಾರೆ. ಬಡವರು ಮಣ್ಣಿನ ಗಡಿಗೆಗಳ ಖರೀದಿ ಭರಾಟೆಯೂ ಶುರುವಾಗಿದೆ.

ಬೇಸಿಗೆ ವಾತಾವರಣ ಹಾಗೂ ಗ್ರಾಹಕರ ನಾಡಿಮಿಡಿತ ಅರಿತಿರುವ ಮಣ್ಣಿನ ಮಡಿಕೆಗಳ ವ್ಯಾಪಾರಿಗಳು ಆಗಲೇ ರಾಯಚೂರು ನಗರಕ್ಕೆ ಬಂದು ಪ್ರಮುಖ ವೃತ್ತ ಹಾಗೂ ಮಾರ್ಗಗಳಲ್ಲಿ ಸಣ್ಣ, ದೊಡ್ಡ ಗಾತ್ರದ ಮಡಕೆಗಳನ್ನು ಪೇರಿಸಿಟ್ಟು ವಹಿವಾಟಿನಲ್ಲಿ ತೊಡಗಿದ್ದಾರೆ.

ನಗರದ ಚಂದ್ರಮೌಳೇಶ್ವರ ರಸ್ತೆ, ಬಸವೇಶ್ವರ ರಸ್ತೆ, ಸ್ಟೇಷನ್ ರಸ್ತೆ, ಎಲ್ಐಸಿ ಕಚೇರಿ ಮುಂಭಾಗ ಸೇರಿದಂತೆ ಕುಂಬಾರರ ಓಣಿಯಲ್ಲಿ ಗಡಿಗೆ ಹಾಗೂ ಇತರೆ ಮಣ್ಣಿನ ಪಾತ್ರೆಗಳ ವ್ಯಾಪಾರ ಜೋರಾಗಿ ನಡೆದಿದೆ. ನಗರ ಹಾಗೂ ವಿವಿಧ ಹಳ್ಳಿಯಿಂದ ಗ್ರಾಹಕರು ತರಹೇವಾರಿ ಗಡಿಗೆ ಖರೀದಿಸಿ ಮನೆಗಳಿಗೆ ಒಯ್ಯುತ್ತಿದ್ದಾರೆ.

ಸಾಮಾನ್ಯವಾಗಿ ಚಿಕ್ಕ ಗಾತ್ರದ ಗಡಿಗೆಯಿಂದ ಹಿಡಿದು 4–5 ಕೊಡ ನೀರು ಸಂಗ್ರಹ ಮಾಡಿಕೊಳ್ಳಬಹುದಾದ ಗಡಿಗೆಗಳು ಮಾರಾಟಕ್ಕೆ ಇವೆ. ನಳ ಜೋಡಿಸಿದ ಗಡಿಗೆಗಳು ಹಾಗೂ ಅಲಂಕಾರಿಕ ಗಡಿಗೆಗಳನ್ನೂ ಮಾರಾಟಕ್ಕೆ ಇಡಲಾಗಿದೆ.

5 ಲೀಟರ್‌ನಿಂದ 3 ಕೊಡ ನೀರು ಸಂಗ್ರಹ ಮಾಡಿಕೊಳ್ಳುವ ಗಡಿಗೆಗಳು ₹100ಯಿಂದ ₹400 ವರೆಗೆ ಮಾರಾಟ ಮಾಡಲಾಗುತ್ತಿದೆ. ಕೆಂಪು ಮಣ್ಣಿನಿಂದ ತಯಾರಿಸಿದ ಗಡಿಗೆಯ ಜತೆಗೆ ರಾಜಸ್ಥಾನದ ರಾಜಕೋಟ್‌ನಿಂದ ತರಿಸಿದ ಬಣ್ಣ ಬಣ್ಣದ ಗಡಿಗೆಗಳು ಜನರನ್ನು ಆಕರ್ಷಿಸುತ್ತಿವೆ. ‌‌‌

‘ಬೇಸಿಗೆ ಬಿಸಿಲು ಶುರುವಾದರೂ ಗಡಿಗೆ ವ್ಯಾಪಾರ ಖರೀದಿ ವ್ಯಾಪಾರ ಬಿರುಸು ಪಡೆದಿಲ್ಲ.15 ದಿನಗಳ ಹಿಂದೆ ₹3 ಲಕ್ಷ ಗಡಿಗೆಗಳನ್ನು ರಾಯಚೂರಿಗೆ ತಂದಿದ್ದೇವೆ. ವ್ಯಾಪಾರ ಮಂದಗತಿಯಲ್ಲಿ ಸಾಗಿದೆ. ₹10 ಸಾವಿರ ಕೊಟ್ಟು ರೆಫ್ರಿಜರೇಟರ್ ಖರೀದಿಸುವ ಗ್ರಾಹಕರು ₹300 ಗಡಿಗೆ ಖರೀದಿಗೆ ಹೆಚ್ಚು ಚೌಕಾಸಿ ಮಾಡುತ್ತಿದ್ದಾರೆ’ ಎಂದು ಗಡಿಗೆ ಮಾರಾಟದಲ್ಲಿ ತೊಡಗಿರುವ ಯಾದಗಿರಿಯ ಸುಭ್ಹಾನಾ ಹೇಳುತ್ತಾರೆ.

ರಾಯಚೂರಿನ ಎಲ್‌ಐಸಿ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ಮಾರಾಟಕ್ಕೆ ಇಡಲಾದ ಬಣ್ಣದ ಗಡಿಗೆಗಳು
ರಾಯಚೂರಿನ ಎಲ್‌ಐಸಿ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ಮಾರಾಟಕ್ಕೆ ಇಡಲಾದ ಬಣ್ಣದ ಗಡಿಗೆಗಳು

‘ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಿದರೆ ಮಾರಾಟಗಾರರು ಹೇಳಿದ ದರದಲ್ಲಿ ಖರೀದಿಸುತ್ತಾರೆ. ಫುಟ್‌ಪಾತ್‌ನಲ್ಲಿ ಮಾರುವ ಗಡಿಗೆಗಳನ್ನು ಕೊಂಡಕೊಳ್ಳಲು ಹಿಂದೆಮುಂದೆ ನೋಡುತ್ತಾರೆ’ ಎನ್ನುತ್ತಾರೆ ಅವರು.

ನಗರದ ಚಂದ್ರಮೌಳೇಶ್ವರ ವೃತ್ತದ ಬಳಿಯ ಕುಂಬಾರ ಓಣಿಯ ವ್ಯಾಪಾರಸ್ಥರಿಗೂ ಬೇಸಿಗೆ ವ್ಯಾಪಾರ ಕೈ ಹಿಡಿಯುತ್ತಿದೆ. ಕೆಲ ಕುಟುಂಬಗಳು ಹೊರಗಿನಿಂದ ಗಡಿಗೆ ತರಿಸಿ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಕಳೆಗುಂದಿರುತ್ತಿದ್ದ ವ್ಯಾಪಾರ ಬಿಸಿಲಿನ ಝಳಕ್ಕೆ ಗರಿ ಬಿಚ್ಚಿಕೊಂಡಿದೆ.

ರಾಯಚೂರಿನ ಎಲ್‌ಐಸಿ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ಯಾದಗಿರಿಯ ವ್ಯಾಪಾರಸ್ಥರು ಗಡಿಗೆ ಮಾರಾಟಕ್ಕೆ ಇಟ್ಟಿರುವುದು
ರಾಯಚೂರಿನ ಎಲ್‌ಐಸಿ ಕಚೇರಿ ಮುಂಭಾಗದ ರಸ್ತೆ ಬದಿಯಲ್ಲಿ ಯಾದಗಿರಿಯ ವ್ಯಾಪಾರಸ್ಥರು ಗಡಿಗೆ ಮಾರಾಟಕ್ಕೆ ಇಟ್ಟಿರುವುದು

ನಗರದ ಹಲವೆಡೆ ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಿದರೂ ಕೂಡ ಕುಂಬಾರ ಓಣಿಯಲ್ಲಿ ಗ್ರಾಹಕರ ಕೊರತೆಯಾಗಿಲ್ಲ. ಜತೆಗೆ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಜನ ಬಂದು ಮಣ್ಣಿನ ಗಡಿಗೆಗಳನ್ನು ಖರೀದಿ ಮಾಡುತ್ತಿದ್ದಾರೆ.

‘ನಮ್ಮಲ್ಲಿ ಮಣ್ಣಿನ ಒಲೆ, ಗಡಿಗೆ, ಗಲ್ಲಾ ಪೆಟ್ಟಿಗೆ, ಮಣ್ಣಿನ ಹೂಕುಂಡ ಹಾಗೂ ಇತರೆ ವಸ್ತುಗಳು ಖರೀದಿ ನಡೆಯುತ್ತಿದೆ. ಆದರೆ ಬೇಸಿಗೆಯಲ್ಲಿ ಮಾತ್ರ ಹೆಚ್ಚಾಗಿ ಮಣ್ಣಿನ ಗಡಿಗೆಗಳು ಮಾರಾಟವಾಗುತ್ತವೆ’ ಎಂದು ಗಡಿಗೆ ವ್ಯಾಪಾರಿ ವೆಂಕಟೇಶ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT