ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣ ಕಹಳೆ ಮೊಳಗಿಸಿದ ಕಾಂಗ್ರೆಸ್, ಬಿಜೆಪಿ

ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಕುಮಾರನಾಯಕ
Published 18 ಏಪ್ರಿಲ್ 2024, 16:24 IST
Last Updated 18 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ರಾಯಚೂರು: ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಈಗಾಗಲೇ ರಾಯಚೂರು ಲೋಕಸಭಾ (ಪರಿಶಿಷ್ಟ ಪಂಗಡದ ಮೀಸಲು) ಕ್ಷೇತ್ರಕ್ಕೆ ಒಂದೊಂದು ಬಾರಿ ಉಮೇದುವಾರಿಕೆ ದಾಖಲು ಮಾಡಿದರೂ, ಗುರುವಾರ ಬಿಜೆಪಿ ಅಭ್ಯರ್ಥಿ ಕಾರ್ಯಕರ್ತರ ಸಭೆ ನಡೆಸಿ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಮತ್ತೆ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಮೆರವಣಿಗೆ ನಡೆಸಿ ಪಕ್ಷದ ಮುಖಂಡರೊಂದಿಗೆ ಬಂದು ನಾಮಪತ್ರ ಸಲ್ಲಿಸಿ ಚುನಾವಣೆ ಕಹಳೆ ಮೊಳಗಿಸಿದರು

ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ರಾಜ್ಯ ಮಟ್ಟದ ನಾಯಕರು ಉಪಸ್ಥಿತರಿರುವರು ಎಂದು ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮೊದಲೇ ಮುನ್ಸೂಚನೆ ನೀಡಿದರೂ ಬಿಸಿಲಿನ ಝಳದಿಂದಾಗಿ ರಾಜ್ಯಮಟ್ಟದ ನಾಯಕರು ಬಿಸಿಲೂರಿನತ್ತ ಸುಳಿಯಲಿಲ್ಲ.

ಬಿಜೆಪಿ ಕಾರ್ಯಕರ್ತರ ಸಭೆ ನಡೆದರೂ ಮೆರವಣಿಗೆಯನ್ನು ಕೊನೆಯ ಕ್ಷಣದಲ್ಲಿ ರದ್ದು ಪಡಿಸಲಾಯಿತು. ಬೆಳಿಗ್ಗೆ 10 ಗಂಟೆ ವೇಳೆಗೆ ಶುರುವಾಗಬೇಕಿದ್ದ ಕಾಂಗ್ರೆಸ್ ಮೆರವಣಿಗೆ ಮಧ್ಯಾಹ್ನ ಶುರುವಾದವು. ಬಿಸಿಲಿನ ತಾಪಕ್ಕೆ ಕಾರ್ಯಕರ್ತರು ಬಳಲಿ ಸುಸ್ತಾಗಿದ್ದರು. ವಿಪರೀತ ಸೆಖೆಯಿಂದ ಅನೇಕ ಜನ ಬೆವರಿನಿಂದ ತೊಯ್ದು ತೊಪ್ಪೆಯಾಗಿದ್ದರು. ಕೆಲವರು ಮೂರ್ಚೆ ಹೋಗಿ ಆಸ್ಪತ್ರೆ ಸೇರಿದರು.

ಕಾಂಗ್ರೆಸ್ ಚಿಹ್ನೆ ಇರುವ ಟೊಪ್ಪಿಗೆ, ಶಲ್ಯ ಧರಿಸಿ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಕಲಾವಿದರು ಡೊಳ್ಳು ಹಾಗೂ ತಾಳ ಬಾರಿಸಿ ಕುಣಿದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು. ಕಾರ್ಯಕರ್ತರು ಧೆಗೆ ಕಡಿಮೆ ಮಾಡಿಕೊಳ್ಳಲು ರಸ್ತೆ ಬದಿಗೆ ಮಾರಾಟಕ್ಕೆ ಇಟ್ಟಿದ್ದ ಮಜ್ಜಿಗೆ, ಐಸ್‌ಕ್ರಿಮ್, ಕಲ್ಲಂಗಡಿ ಹಣ್ಣು ಸೇವಿಸಿದರು. ಕೆಲವರು ನೀರಿನ ಬಾಟಲಿಗಳನ್ನು ಹಿಡಿದುಕೊಂಡು ಮರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಅಭ್ಯರ್ಥಿ ಪರ ಮೊಳಗಿದ ಘೋಷಣೆ

ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ ಮೆರವಣಿಗೆಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಪಕ್ಷದ ಅಭಿಮಾನಿಗಳು ಪಾಲ್ಗೊಂಡಿದ್ದರು. ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಂದಲೂ ಖಾಸಗಿ ವಾಹನಗಳಲ್ಲಿ ಬಂದಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡವರು ಕಾಂಗ್ರೆಸ್‌ ಪರ ಘೋಷಣೆಗಳನ್ನು ಮೊಳಗಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಮೀಪದ ವೃತ್ತದಲ್ಲೇ ತೆರದ ವಾಹನದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಿ.ಕುಮಾರ ನಾಯಕ, ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು, ಕೆಕೆಆರ್‌ಡಿಬಿ ಅಧ್ಯಕ್ಷ ಅಜಯಸಿಂಗ್ ಮಾತನಾಡಿದರು. ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ಸಂಘದಿಂದ ಆರಂಭವಾಗಿದ್ದ ಕಾಂಗ್ರೆಸ್‌ ಮೆರವಣಿಗೆ ವಿವೇಕಾನಂದ ವೃತ್ತ, ನೇತಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬಂದು ಮುಕ್ತಾಯಗೊಂಡಿತು.

ವಾಹನಗಳನ್ನು ಬಸವೇಶ್ವರ ವೃತ್ತ ಸಮೀಪ ಖುಲ್ಲಾ ಜಾಗ, ಸರ್ಕಾರಿ ಕಚೇರಿ ಆವರಣ ಹಾಗೂ ರಸ್ತೆ ಬದಿಗೆ ನಿಲ್ಲಿಸಲಾಗಿತ್ತು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಭಾರಿ ಪ್ರಯಾಸ ಪಡೆಬೇಕಾಯಿತು. ಅರೆ ಸೇನಾ ಸಿಬ್ಬಂದಿಯ ನೆರವು ಪಡೆಯಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT