ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಸಂಕಷ್ಟ: ಮನೆಮನೆಗೆ ತಿರುಗಿ ಅಕ್ಕಿ ಭಿಕ್ಷೆ ಕೇಳುತ್ತಿರುವ ಮಕ್ಕಳು

ಏಪ್ರಿಲ್‌ನಲ್ಲಿ ಕೊಟ್ಟಿದ್ದ ಪಡಿತರವು ಮುಗಿದು ಹೋಗಿದೆ
Last Updated 17 ಮೇ 2020, 8:11 IST
ಅಕ್ಷರ ಗಾತ್ರ

ರಾಯಚೂರು: ಲಾಕ್‌ಡೌನ್‌ನಿಂದ ಸಂಕಷ್ಟದ ಸ್ಥಿತಿಗೆ ಸಿಲುಕಿರುವ ಅಲೆಮಾರಿ ಬುಡ್ಗ ಜಂಗಮ ಸಮದಾಯದ ಕೆಲವು ಕುಟುಂಬಗಳು ಆಹಾರವಿಲ್ಲದೆ ಪರದಾಡುತ್ತಿದ್ದಾರೆ. ಮಕ್ಕಳು ಮನೆಮನೆಗೆ ತಿರುಗಿ ಅಕ್ಕಿ ಭಿಕ್ಷೆ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ಆಶಾಪುರ ಮಾರ್ಗದಲ್ಲಿರುವ ಪದ್ಮಾವತಿ ಕಾಲೋನಿ ಪಕ್ಕದ ಗುಡ್ಡದಲ್ಲಿ ಬಿದಿರು–ಬಟ್ಟೆ ಜೋಪಡಿಗಳನ್ನು ಕಟ್ಟಿಕೊಂಡಿರುವ 22 ಕುಟುಂಬಗಳು, ಸಹಜ ಜೀವನಕ್ಕಾಗಿ ಕಾಯುತ್ತಿದ್ದಾರೆ. ಮಕ್ಕಳು ತರುವ ಧಾನ್ಯಗಳನ್ನು ಬೇಯಿಸಿಕೊಂಡು ದಿನ ಕಳೆಯುತ್ತಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಅಗ್ಗದ ಬಟ್ಟೆಗಳನ್ನು, ಸ್ಟೇಷನರಿ ವಸ್ತುಗಳನ್ನು ಹಾಗೂ ಪ್ಲಾಸ್ಟಿಕ್‌ ಕೊಡಗಳನ್ನು ಮಾರಾಟ ಮಾಡಿ ಈ ಜನರು ಉಪಜೀವನ ನಡೆಸುತ್ತಿದ್ದರು. ಇದೀಗ ವ್ಯಾಪಾರವಿಲ್ಲದೆ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ವಿಧಿಯಿಲ್ಲದೆ ಮಕ್ಕಳು ಭಿಕ್ಷೆಗೆ ಇಳಿದಿದ್ದಾರೆ.

‘ಲಾಕ್‌ಡೌನ್‌ ಆರಂಭವಾದಾಗ ನಗರಸಭೆ ಸದಸ್ಯ ಜಯಣ್ಣ ಅವರು ಆಹಾರಧಾನ್ಯದ ಕಿಟ್‌ಗಳನ್ನು ಕೊಟ್ಟು ಹೋಗಿದ್ದರು. ಟ್ಯಾಂಕರ್‌ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಮೊದಲು ನೀಡಿದ್ದ ಧಾನ್ಯವೆಲ್ಲ ಖಾಲಿಯಾಗಿದೆ. ಈಗ ಹೊಟ್ಟೆ ತುಂಬಿಸಿಕೊಳ್ಳುವ ಚಿಂತೆ ಶುರುವಾಗಿದೆ. ಯಾರೂ ಆಹಾರಧಾನ್ಯ ತಂದುಕೊಟ್ಟಿಲ್ಲ’ ಎಂದು ಜಂಬಣ್ಣ ಅವರು ’ಫ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಪಡಿತರ ಕೊಟ್ಟಿಲ್ಲ: ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಸಾಕಷ್ಟು ಅಕ್ಕಿ ಕೊಡುವುದರಿಂದ ಬಡವರಿಗೆ ಅಕ್ಕಿ ಅಗತ್ಯ ಇರುವುದಿಲ್ಲ ಎಂದು ಸಾಮಾನ್ಯವಾಗಿ ಯೋಚಿಸಲಾಗುತ್ತದೆ. ಇವರಿಗೂ ಏಪ್ರಿಲ್‌ನಲ್ಲಿ ಎರಡು ತಿಂಗಳುಗಳ ಪಡಿತರ ಧಾನ್ಯ ವಿತರಿಸಲಾಗಿತ್ತು. ಪಡಿತರ ಮುಗಿದು ಹೋಗಿದೆ. ಕೇಂದ್ರ ಸರ್ಕಾರವು ಮತ್ತೆ ಬಿಡುಗಡೆ ಮಾಡಿದ ಧಾನ್ಯವು ಮೇ 15 ಕಳೆದರೂ ಜಿಲ್ಲೆಯಲ್ಲಿ ಹಂಚಿಕೆ ಆಗಿಲ್ಲ. ಇದರ ಪರಿಣಾಮದಿಂದಾಗಿಯೆ ಮಕ್ಕಳು ಮನೆಮನೆಗೆ ಅಕ್ಕಿಗಾಗಿ ಅಲೆದಾಡುವ ಪರಿಸ್ಥಿತಿ ಉದ್ಭವಿಸಿದೆ.

‘ರೇಷನ್‌ ಕೊಡುತ್ತಾರೆ ಎಂದು ಕಾದು ಸಾಕಾಗಿದೆ. ಕೆಲವು ಕುಟುಂಬಗಳಲ್ಲಿ ಮೊದಲು ಕೊಟ್ಟಿದ್ದೆಲ್ಲವೂ ಖಾಲಿಯಾಗಿದೆ. ಈಗ ಆಹಾರವಿಲ್ಲದೆ ಮಕ್ಕಳು ಭಿಕ್ಷೆಗೆ ಹೋಗುತ್ತಿದ್ದಾರೆ. ಕಡು ಬಡವರಿದ್ದೇವೆ, ಸರ್ಕಾರದಿಂದ ಏನಾದರೂ ಅನುಕೂಲ ಮಾಡಿಕೊಡಬೇಕು’ ಎಂದು ಜಂಬಣ್ಣ ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT