ಸೋಮವಾರ, ಆಗಸ್ಟ್ 15, 2022
24 °C

ಮಚ್ಚಿಬಜಾರ್‌ ರಸ್ತೆ ಕಾಮಗಾರಿ ಆರಂಭಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಮಚ್ಚಿ ಬಜಾರ್‌ನಿಂದ ಅಶೋಕ್ ಡಿಪೋವರೆಗಿನ 60 ಅಡಿ ರಸ್ತೆ ಅಗಲೀಕರಣ ಕಾಮಗಾರಿ ಕೂಡಲೇ ಕೈಗೊಂಡು, ರಸ್ತೆಯನ್ನು ಉತ್ತಮ ಪಡಿಸಬೇಕು ಹಾಗೂ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಪ್ರಾರಂಭಕ್ಕೆ ಅಗತ್ಯ ಸ್ಪಚ್ಚತಾ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ನಗರಸಭೆ ಅಧಿಕಾರಿಗಳಿಗೆ ಶುಕ್ರವಾರ ತಾಕೀತು ಮಾಡಿದರು.

ನಗರದ ವಿವಿಧೆಡೆ ಸಂಚರಿಸಿ ರಸ್ತೆಗಳನ್ನು ಪರಿಶೀಲಿಸಿದರು. ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿ ಸುಮಾರು ಐದು ತಿಂಗಳು ಕಳೆದಿರುವ ಹಿನ್ನಲೆಯಲ್ಲಿ ತರಕಾರಿ ಮಾರುಕಟ್ಟೆ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಾರುಕಟ್ಟೆ ಪ್ರಾರಂಭಿಸುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಮಾರುಕಟ್ಟೆ ಪುನಃ ಆರಂಭಿಸಲು ಅಗತ್ಯ ಸ್ಪಚ್ಚತಾ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ನಗರಸಭೆ ಕಚೇರಿಯಿಂದ ಟಿಪ್ಪು ಸುಲ್ತಾನ ರಸ್ತೆವರೆಗಿನ 45 ಅಡಿ ರಸ್ತೆ ಅಗಲೀಕರಣ ಕಾರ್ಯಚರಣೆ ಸ್ಥಳವನ್ನು
ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಆನಂತರ ಅಲ್ಲಿಂದ ನೇರವಾಗಿ ಮಂತ್ರಾಲಯ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಶೋಷಿಯೇಷನ್ ವತಿಯಿಂದ ನಿರ್ಮಿಸಲ್ಪಡುತ್ತಿರುವ ಕ್ರೀಡಾಂಗಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕ್ರೀಡಾಂಗಣ ನಿರ್ಮಾಣಕ್ಕೆ ಈಗಾಗಲೇ 12 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಆದರೆ ಪೆವಿಲಿಯನ್, ಪ್ರವೇಶ ದ್ವಾರ ನಿರ್ಮಾಣ ಸೇರಿದಂತೆ ಇನ್ನಿತರ ಕೆಲಸಗಳಿಗೆ ಗುಡ್ಡ ಅಡ್ಡಿಯಾಗಿದ್ದು, ಅದನ್ನು ತೆರವುಗೊಳಿಸಲು ಮತ್ತೊಮ್ಮೆ ಸರ್ವೆ ಮಾಡುವಂತೆ ಅವರು ಸೂಚಿಸಿದರು.

ತಹಶೀಲ್ದಾರ್‌ ಡಾ. ಹಂಪಣ್ಣ, ನಗರಸಭೆ ಎಇಇ ಮಹ್ಮದ್ ಶಫಿ, ಡಿಡಿಎಲ್‍ಆರ್ ಪ್ರವೀಣ ಜಾಧವ್, ಯುವಜನ ಸೇವಾ
ಕ್ರೀಡಾ ಇಲಾಖೆಯ ರಾಜು, ಶರಣರೆಡ್ಡಿ, ವೆಂಕಟಕೃಷ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು