ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಯಿಂದಾಗಿ ಎಳನೀರಿಗೆ ಬೇಡಿಕೆ ಕುಸಿತ

₹25 ದರ ಫಲಕ ಕಣ್ಣಿಗೆ ಬಿದ್ದರೂ ಮನಸೋಲದ ಜನರು
Last Updated 19 ಜನವರಿ 2023, 19:30 IST
ಅಕ್ಷರ ಗಾತ್ರ

ರಾಯಚೂರು: ಮಾರುಕಟ್ಟೆಯಲ್ಲಿ ಎಳನೀರು ದರ ದಿಢೀರ್ ಕುಸಿತವಾಗಿದ್ದು, ₹25 ಮತ್ತು ₹30 ಫಲಕಗಳನ್ನು ನೇತುಹಾಕಿ ಜನರ ಗಮನ ಸೆಳೆಯಲು ವ್ಯಾಪಾರಿಗಳು ಯತ್ನಿಸುತ್ತಿದ್ದಾರೆ.

ರಾಯಚೂರಿನ ಸ್ಟೇಷನ್‌ ರಸ್ತೆ, ಕೇಂದ್ರ ಬಸ್‌ ನಿಲ್ದಾಣದ ಎದುರು, ಚಂದ್ರಮೌಳೇಶ್ವರ ವೃತ್ತದಿಂದ ಗಂಜ್‌ ವೃತ್ತದವರೆಗೂ, ತೀನ್‌ ಕಂದಿಲ್‌, ಮಂತ್ರಾಲಯ ರಸ್ತೆ, ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತ, ಚಂದ್ರಬಂಡಾ ಮಾರ್ಗ, ಲಿಂಗಸುಗೂರು ಮಾರ್ಗ ಸೇರಿದಂತೆ ಅನೇಕ ಕಡೆಗಳಲ್ಲಿ ಎಳನೀರು ವ್ಯಾಪಾರಿಗಳಿದ್ದಾರೆ. ಎಲ್ಲೆಡೆಯಲ್ಲೂ ದರ ಕುಸಿತದ ಫಲಕಗಳು ಗಮನ ಸೆಳೆಯುತ್ತಿದ್ದರೂ ಜನರು ಕಾದು ನಿಂತು ಎಳನೀರು ಸೇವಿಸುವ ದೃಶ್ಯ ಅಪರೂಪವಾಗಿದೆ. ಗೆಳೆಯರು ಗುಂಪುಗಳು, ಆರೋಗ್ಯದ ಬಗ್ಗೆ ಕಾಳಜಿವುಳ್ಳವರು ಹಾಗೂ ಬಿಸಿಲಿನ ತಾಪದಿಂದ ಸುಧಾರಿಸಿಕೊಳ್ಳಲು ಜನರು ಎಳನೀರು ಮೊರೆ ಹೋಗುವುದು ರಾಯಚೂರಿನಲ್ಲಿ ಸಾಮಾನ್ಯ.

ಪ್ರತಿದಿನ ಬೆಳಗಿನ ಜಾವ ಮತ್ತು ಸಂಜೆ ಹೊತ್ತು ಶೀತಗಾಳಿ ಬೀಸುತ್ತಿದೆ ಮತ್ತು ಚಳಿ ಆವರಿಸಿಕೊಳ್ಳುವುದು ಮುಂದುವರಿದಿದೆ. ಮೈ ಮನ ಮುದುರಿದ ಮೇಲೆ ಎಳನೀರು ಕುಡಿಯುವುದಕ್ಕೆ ಜನರು ಮನಸು ಮಾಡುತ್ತಿಲ್ಲ. ಆದರೆ, ಅನಾರೋಗ್ಯದ ಸಮಸ್ಯೆಯಿಂದ ಬಳಲುವವರು ಮತ್ತು ವೈದ್ಯರ ಸಲಹೆ ಪಡೆದವರು ಎಳೆನೀರು ಹುಡುಕಿಕೊಂಡು ಬಂದು ಸೇವಿಸುತ್ತಿದ್ದಾರೆ. ಎಳನೀರು ರಾಯಚೂರಿಗೆ ಹೊರಜಿಲ್ಲೆಗಳಿಂದ ವಾರದಲ್ಲಿ ಎರಡು ಲಾರಿಗಳಷ್ಟು ಮಾತ್ರ ಬರುತ್ತಿದೆ. ಫೆಬ್ರುವರಿ ಮಧ್ಯಭಾಗದಿಂದ ಬಿಸಿಲಿನ ಬೇಗೆ ಏರಿಕೆಯಾದಂತೆ ಎಳನೀರಿಗೂ ಬೇಡಿಕೆ ಹೆಚ್ಚಳವಾಗುತ್ತದೆ ಎಂದು ವ್ಯಾಪಾರಿಗಳು ನಿರೀಕ್ಷಿಸುತ್ತಿದ್ದಾರೆ.

ನಗರದ ಸಗಟು ವ್ಯಾಪಾರಿಗಳು ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಂದ ಎಳನೀರು ತರಿಸಿಕೊಳ್ಳುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಿಂದಲೂ ಕೆಲವೊಬ್ಬರು ಎಳನೀರು ತೆಗೆದುಕೊಂಡು ಬಂದಿದ್ದಾರೆ. ಕಾವೇರಿ ನದಿಭಾಗದಲ್ಲಿ ಬೆಳೆಯುವ ಎಳನೀರು ರುಚಿಯಾಗಿರುತ್ತದೆ. ಜನರು ರುಚಿಯಾದ ಎಳನೀರು ಕೇಳುತ್ತಾರೆ. ಒಮ್ಮೆ ಸೇವಿಸಿದವರು ಮತ್ತೊಮ್ಮೆ ಎಳನೀರು ಹುಡುಕಿಕೊಂಡು ಬರುತ್ತಾರೆ. ಸದ್ಯ ಚಳಿ ಬೀಳುತ್ತಿರುವುದರಿಂದ ಯಾವುದೇ ಎಳನೀರು ಸಾಕಷ್ಟು ಪ್ರಮಾಣದಲ್ಲಿ ಸಿಹಿಯಾಗಿರುವುದಿಲ್ಲ. ಬಿಸಿಲು ಹೆಚ್ಚಾದಂತೆ ಎಳನೀರಿಗೂ ರುಚಿ ಹೆಚ್ಚುತ್ತದೆ, ಬೇಡಿಕೆಯೂ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಬೇಡಿಕೆ ಹೆಚ್ಚಾದಂತೆ ಎಳನೀರು ದರವು ಏರಿಕೆಯಾಗುತ್ತದೆ. ಕಳೆದ ವರ್ಷ ಬೇಸಿಗೆಯಲ್ಲಿ ಒಂದು ಎಳನೀರು ದರ ಗರಿಷ್ಠ ₹50 ಕ್ಕೆ ಮಾರಾಟವಾಗಿದೆ. ಈಗ ಅರ್ಧದಷ್ಟು ಕುಸಿತ ಕಂಡಿದೆ.

‘ಎಳನೀರು ಆರೋಗ್ಯಕ್ಕೆ ಒಳ್ಳೆಯದು. ವಾರದಲ್ಲಿ ಕನಿಷ್ಠ ಐದು ದಿನ ಎಳನೀರು ಕುಡಿಯುತ್ತಾ ಬರುತ್ತಿದ್ದೇನೆ. ದುಬಾರಿ ಮದ್ಯ ಸೇವನೆಗಿಂತ ಎಳನೀರು ಸೇವಿಸುವುದು ಉತ್ತಮ. ಈಗ ₹25 ದರ ನಿಗದಿ ಮಾಡಿರುವುದು, ಕ್ರಮೇಣ ಹೆಚ್ಚಳ ಮಾಡುತ್ತಾರೆ‘ ಎಂದು ಮೂತ್ರಪಿಂಡದ ಹರಳು ಸಮಸ್ಯೆಯಿಂದ ಬಳಲುತ್ತಿರುವ ರಾಯಚೂರು ನಗರ ನಿವಾಸಿ ರಮೇಶ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT