ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ: ₹600 ಕೂಲಿ ನೀಡಲು ಒತ್ತಾಯ

Published 29 ಅಕ್ಟೋಬರ್ 2023, 16:50 IST
Last Updated 29 ಅಕ್ಟೋಬರ್ 2023, 16:50 IST
ಅಕ್ಷರ ಗಾತ್ರ

ಜಾಲಹಳ್ಳಿ: ನರೇಗಾ ಯೋಜನೆ ಅಡಿ ದುಡಿಯುತ್ತಿರುವ ಕೂಲಿಕಾರರಿಗೆ ಕನಿಷ್ಟ ₹ 600 ಕೂಲಿ ನೀಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ‌ ಹೊಸಕೇರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ರಾಜ್ಯದಲ್ಲಿ ಬರಗಾಲ ಇರುವುದರಿಂದ ಗ್ರಾಮೀಣ ಭಾಗದ ಕೃಷಿ ಕೂಲಿಕಾರರಿಗೆ ಜೀವನ ಸಾಗಿಸುವುದು ತುಂಬಾ ಕಷ್ಟವಾಗಿದೆ. ಅರ್ಥಿಕ ತೊಂದರೆ ನಿವಾರಣೆಗೆ ಸರ್ಕಾರ ನರೇಗಾ ಯೋಜನೆಯಡಿ ಒಂದು ಕುಟುಂಬಕ್ಕೆ ಕನಿಷ್ಟ 200 ಮಾನವ ದಿನ ಕೆಲಸ ಹಾಗೂ ₹600 ಕೂಲಿ ನೀಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ 2005 ರಲ್ಲಿ ನರೇಗಾ ಯೋಜನೆ ಪ್ರಾರಂಭಿಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ₹70 ಸಾವಿರ ಕೋಟಿ ಅನುದಾನ ಮೀಸಲಿಟ್ಟು, ಪ್ರತಿ ದಿನಕ್ಕೆ ₹ 62 ಕೂಲಿ ನೀಡಲಾಗುತ್ತಿತ್ತು. ಶೇ 90 ರಷ್ಟು ಅನುದಾನ ಕೂಲಿಗಾಗಿಯೇ ಬಳಕೆ ಮಾಡಲಾಗುತ್ತಿತ್ತು. ಅದರೆ, ಪ್ರಸಕ್ತ ವರ್ಷ ನರೇಗಾ ಯೋಜನೆಗೆ ₹60 ಸಾವಿರ ಕೋಟಿ ಮೀಸಲಿಟ್ಟು, ದಿನಕ್ಕೆ ₹316‌ ಕೂಲಿ ನೀಡಲಾಗುತ್ತಿದೆ. ಕೂಲಿಕಾರರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೂಲಿಗಾಗಿ ಅನುದಾನದ ಶೇ 60 ರಷ್ಟನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದರು.

ಕೂಲಿಕಾರರಿಗೆ ಕನಿಷ್ಟ 2 ಎಕರೆ ಸರ್ಕಾರಿ ಜಮೀನನ್ನು ಕೃಷಿಗಾಗಿ ಹಂಚಿಕೆ ಮಾಡಬೇಕು. ರೈತರಿಗೆ ಅನುಕೂಲವಾಗಿರುವ ಎಂ.ಎಸ್ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ವಿದ್ಯುತ್ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಕಾರ್ಮಿಕರಿಗೆ ಕನಿಷ್ಟ ₹31,000 ವೇತನ ಕೊಡಬೇಕು ಎಂದು ಒತ್ತಾಯಿಸಿ ಮುಂದಿನ ತಿಂಗಳು ನವೆಂಬರ್ 26ರಿಂದ 28 ರವರೆಗೆ ಬೆಂಗಳೂರಿನಲ್ಲಿರುವ ರಾಜಭವನದ ಮುಂದೆ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ರಕ್ಷಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಉತ್ತರ ಭಾರತದಲ್ಲಿ ದಲಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ ಮುಂದುವರಿದಿದೆ. ದಲಿತರಿಗೆ ರಕ್ಷಣೆ ನೀಡಬೇಕು. ಅವರಿಗಾಗಿ ಮೀಸಲಿಟ್ಟ ಅನುದಾನವನ್ನು ಸರಿಯಾಗಿ ಬಳಕೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸಮಿತಿ ಉಪಾಧ್ಯಕ್ಷ ದಾವಲ್ ಸಾಬ್, ಮುಖಂಡರಾದ ಕರಿಯಪ್ಪ ಅಚ್ಚೋಳ್ಳಿ, ಸಂಗಮೇಶ ಮೂಲಿಮನಿ, ಬಿ.ಲಿಂಗಪ್ಪ ಸಿಂಧನೂರು ಹಾಗೂ ನಿಂಗಣ್ಣ ನಾಯಕ ಮಕಾಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT