ಗುರುವಾರ , ಅಕ್ಟೋಬರ್ 1, 2020
28 °C
ಯೂರಿಯಾ ರಸಗೊಬ್ಬರ ಪೂರೈಕೆಯಲ್ಲಿ ವಿಫಲ

ಮಾನ್ವಿ: ಕೃಷಿ ಇಲಾಖೆ ಕಚೇರಿಗೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ: ತಾಲ್ಲೂಕಿನಲ್ಲಿ ಯೂರಿಯಾ ರಸಗೊಬ್ಬರದ ಕೊರತೆ ಹಾಗೂ ಅಧಿಕಾರಿಗಳ ವೈಫಲ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಶುಕ್ರವಾರ ಪಟ್ಟಣದ ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದೆ. ತಾಲ್ಲೂಕಿನಲ್ಲಿ ಭತ್ತ, ಹತ್ತಿ, ಸೂರ್ಯಕಾಂತಿ, ತೊಗರಿ, ಸಜ್ಜೆ ಬೆಳೆ ಚೆನ್ನಾಗಿ ಬೆಳೆಯಲಾಗಿದೆ. ಆದರೆ ಬೆಳೆಗಳ ಬೆಳವಣಿಗೆಗೆ ಸಹಕಾರಿಯಾಗುವ ಯೂರಿಯಾ ಕೊರತೆಯಿಂದ ರೈತರು ಆತಂಕ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾನಿರತ ರೈತರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿಗೆ 20ಸಾವಿರ ಟನ್ ಯೂರಿಯಾ ಬೇಡಿಕೆ ಇದೆ. ಆದರೆ ಕೇವಲ 7 ಸಾವಿರ ಟನ್ ಮಾತ್ರ ಪೂರೈಸಲಾಗಿದೆ. ಕಾರಣ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿಗಳ ಕೊರತೆ ಇದೆ. ವರ್ತಕರು ದುಬಾರಿ ದರಕ್ಕೆ ಯೂರಿಯಾ ಹಾಗೂ ಇತರ ಔಷಧಿಗಳನ್ನು ಮಾರಾಟ ಮಾಡುವ ಮೂಲಕ ರೈತರನ್ನು ವಂಚಿಸುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರು ದೂರಿದರು.

ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಅಗತ್ಯ ಪ್ರಮಾಣದ ಯೂರಿಯಾ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಔಷಧಿ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಸಜ್ಜೆ ಹಾಗೂ ಹತ್ತಿ ಖರೀದಿ ಕೇಂದ್ರ ಆರಂಭಿಸಬೇಕು.

ತಾಲ್ಲೂಕಿಗೆ 10ಸಾವಿರ ಟನ್ ಯೂರಿಯಾ ಸರಬರಾಜು ಮಾಡಬೇಕು. 2020-21ನೇ ಸಾಲಿನ ಕೃಷಿ ಉಪಕರಣಗಳ ಸಹಾಯ ಧನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಹಾಯಕ ಕೃಷಿ ನಿರ್ದೇಶಕ ಹುಸೇನ ಸಾಹೇಬ್ ಮಾತನಾಡಿ, ‘ಮುಂದಿನ ಬುಧವಾರದ ಒಳಗೆ ತಾಲ್ಲೂಕಿಗೆ ಅಗತ್ಯವಿರುವ ಪ್ರಮಾಣದ ಯೂರಿಯಾ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವೈ.ಬಸವರಾಜ ನಾಯಕ, ಮುಖಂಡರಾದ ಶರಣಪ್ಪ ಮರಳಿ, ತಿಮ್ಮಣ್ಣ ಭೋವಿ, ಅಚ್ಯುತರಾಯ ಉದ್ಬಾಳ, ಸಿ.ಎಚ್.ರವಿಕುಮಾರ, ಉಮಾದೇವಿ ನಾಯಕ, ರಾಜಾ ಸಾಬ್, ಶಿವರಾಜ ಮಾಲಿಪಾಟೀಲ್, ಶಿವಕುಮಾರ ಸ್ವಾಮಿ, ಮಲ್ಲಿಕಾರ್ಜುನರೆಡ್ಡಿ, ಕೃಷ್ಣ, ವೀರೇಶನಾಯಕ, ಶಿವಪುತ್ರಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು