ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಡ್ರ್ಯಾಗನ್‌ ಫ್ರೂಟ್‌ ಬೆಳೆದ ವೈದ್ಯ ದಂಪತಿ

ಸಾವಯವ ಪದ್ಧತಿಯಲ್ಲಿ ಬೆಳೆಯುವ ಹಣ್ಣಿಗಿದೆ ವಿಶಿಷ್ಟ ರುಚಿ
Published : 21 ಜನವರಿ 2022, 19:30 IST
ಫಾಲೋ ಮಾಡಿ
Comments

ರಾಯಚೂರು: ವಿವಿಧ ವೃತ್ತಿಗಳನ್ನು ತೊರೆದು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವ ವಿದ್ಯಾವಂತರು ಹೆಚ್ಚಾಗುತ್ತಿದ್ದಾರೆ. ಆದರೆ, ದಂತ ವೈದ್ಯರಾದ ಡಾ.ನೀಲಕಂಠ ಹಾಗೂ ಡಾ.ಜ್ಯೋತಿ ಅವರು ವೈದ್ಯ ವೃತ್ತಿಯ ಜೊತೆಯಲ್ಲೇ ತೋಟಗಾರಿಕೆಯಲ್ಲಿ ನೆಮ್ಮದಿ ಅರಸಿಕೊಂಡು ಬಂದು ಯಶಸ್ಸು ಸಾಧಿಸಿದ್ದಾರೆ. ಅವರು ಮೂರು ವರ್ಷಗಳಿಂದ ಬೆಳೆಯುತ್ತಿರುವ ಡ್ರ್ಯಾಗನ್‌ ಫ್ರುಟ್‌ (ಕಮಲಂ ಹಣ್ಣು) ತೋಟವು ಈಗ ಗಮನ ಸೆಳೆಯುತ್ತಿದೆ.

ರಾಯಚೂರು ತಾಲ್ಲೂಕು ಕೇಂದ್ರದಿಂದ 14 ಕಿಮೀ ದೂರದಲ್ಲಿರುವ ಜೇಗರಕಲ್‌ ಗ್ರಾಮದಲ್ಲಿ ಪರಂಪರಾಗತವಾಗಿ ಬಂದಿರುವ 20 ಎಕರೆ ಜಮೀನು ಹೊಂದಿರುವ ಡಾ.ನೀಲಕಂಠ ಅವರು, ಎಂಟು ಎಕರೆ ಜಮೀನಿನಲ್ಲಿ ಡ್ರ್ಯಾಗನ್‌ ಫ್ರುಟ್‌ ಬೆಳೆದಿದ್ದಾರೆ. ಸಂಪೂರ್ಣ ಸಾವಯವ ಪದ್ಧತಿ ಅನುಸರಿಸಿದ್ದರಿಂದ ಈ ಹಣ್ಣುಗಳ ರುಚಿಯೂ ವಿಭಿನ್ನವಾಗಿದೆ. ಸಿಹಿಯಾಗಿರುವ ಇವರ ತೋಟದ ಹಣ್ಣುಗಳಿಗೆ ಬೇಡಿಕೆಯೂ ವ್ಯಾಪಕವಾಗುತ್ತಿದೆ. ಮಾರುಕಟ್ಟೆಯಲ್ಲಿ ದೊರೆಯುವ ಡ್ರ್ಯಾಗನ್‌ ಫ್ರುಟ್‌ ಸಾಮಾನ್ಯವಾಗಿ ಸ್ವಲ್ಪ ಹುಳಿಯಾಗಿರುತ್ತದೆ.

’ಡ್ರ್ಯಾಗನ್‌ ಫ್ರುಟ್‌ ತೋಟಗಾರಿಕೆಯನ್ನು ಲಾಭ ಮಾಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಿಲ್ಲ. ಕೋವಿಡ್‌ ಮಹಾಮಾರಿ ಇದ್ದಾಗ, ಇಬ್ಬರು ಖಾಲಿ ಇದ್ದೇವು. ಈ ಸಮಯ ಸದುಪಯೋಗ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರದ ಕನ್ಹೇರಿ ಮಠದ ಸ್ವಾಮೀಜಿ ಅವರಿಂದ ಪ್ರಭಾವಿತನಾಗಿ, ಯು ಟ್ಯೂಬ್‌ನಲ್ಲಿ ಡ್ರ್ಯಾಗನ್‌ ಫ್ರುಟ್‌ ಬಗ್ಗೆ ಹುಡುಕಾಡಿ ಮಾಹಿತಿ ಸಂಗ್ರಹಿಸಿದೆ. ಇದಕ್ಕಾಗಿ ವಿಜಯಪುರ, ಸೋಲ್ಲಾಪುರದಲ್ಲಿರುವ ಡ್ರ್ಯಾಗನ್‌ ಫ್ರುಟ್‌ ಬೆಳೆಗಾರರನ್ನು ಭೇಟಿ ಮಾಡಿದ್ದೇನೆ. ಏಳು–ಬೀಳು ಎರಡನ್ನೂ ಅರಿತು ನನ್ನದೇ ಆದ ವಿಧಾನದಲ್ಲಿ ಹಣ್ಣು ಬೆಳೆಯಲಾರಂಭಿಸಿದ್ದೇನೆ. ಎರಡು ವರ್ಷಗಳಿಂದ ಹಣ್ಣಿನ ಇಳುವರಿ ಬರುತ್ತಿದ್ದು, ನಾನು ಹಾಕಿದ ಬಂಡವಾಳ ಬಹುತೇಕ ಮರಳಿ ಬಂದಿದೆ‘ ಎನ್ನುತ್ತಾರೆ ಡಾ.ನೀಲಕಂಠ ಅವರು.

’ಕೊಳವೆಬಾವಿ ನೀರು ಲಭ್ಯವಿದ್ದು, ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೊಂಡು ಡ್ರ್ಯಾಗನ್‌ ಫ್ರುಟ್‌ ಬೆಳೆಯುತ್ತಿದ್ದೇನೆ. ಈ ಹಣ್ಣಿನ ತೋಟಗಾರಿಕೆಗೆ ನೀರಿನ ಅವಶ್ಯಕತೆ ಕಡಿಮೆ ಇರುವುದು ರೈತನಿಗೆ ಅನುಕೂಲ. ಬೇರೆ ಬೆಳೆಗಳಿಗೆ ಹೋಲಿಕೆ ಮಾಡಿದರೆ, ಇದರಲ್ಲಿ ನಿರ್ವಹಣೆ ಕೂಡಾ ಕಡಿಮೆ. ಒಂದು ಎಕರೆಯಲ್ಲಿ 500 ಕಂಬಗಳಿದ್ದು, ಒಂದು ಕಂಬಕ್ಕೆ ನಾಲ್ಕು ಸಸಿಗಳನ್ನು ನೆಡಲಾಗಿದೆ. ಸಮಯಕ್ಕೆ ಸರಿಯಾಗಿ ಗೊಬ್ಬರ ಕೊಡುವುದು, ಕಳೆ ಬೆಳೆಯದಂತೆ ನೋಡಿಕೊಳ್ಳುವುದೇ ಇದರ ನಿರ್ವಹಣೆ. ಪ್ರತಿ ಎಕರೆಗೆ ಕನಿಷ್ಠ ₹3 ಲಕ್ಷದವರೆಗೂ ವೆಚ್ಚ ಮಾಡಿದ್ದೇನೆ’ ಎಂದರು.

2020 ಲಾಕ್‌ಡೌನ್‌ ದಿನಗಳಲ್ಲೇ ಡ್ರ್ಯಾಗನ್‌ ಫ್ರುಟ್‌ ಸಸಿಗಳನ್ನು ನೆಟ್ಟಿದ್ದಾರೆ. ಒಂಭತ್ತು ತಿಂಗಳುಗಳ ಬಳಿಕ ಹಣ್ಣುಗಳು ಬಿಡಲಾರಂಭಿಸಿದ್ದು, ವರ್ಷದಿಂದ ವರ್ಷಕ್ಕೆ ಸಸಿಯಲ್ಲಿ ಬಿಡುವ ಹಣ್ಣುಗಳ ಸಂಖ್ಯೆ ಹಾಗೂ ಗಾತ್ರವು ಹೆಚ್ಚಾಗುತ್ತಾ ಹೋಗುವುದು ಇದರ ವಿಶೇಷತೆ.

‘ಸದ್ಯಕ್ಕೆ ಸ್ಥಳೀಯವಾಗಿಯೇ ಹಣ್ಣುಗಳಿಗೆ ಸಾಕಷ್ಟು ಬೇಡಿಕೆ ಬರುತ್ತಿದೆ. ಸ್ನೇಹಿತರ ವಲಯದಲ್ಲಿ ಹಾಗೂ ಸ್ಥಳೀಯ ಶಾಪಿಂಗ್‌ ಮಾಲ್‌ಗಳಿಗೆ ಪ್ರತಿ ಕೆಜಿಗೆ ₹300 ರವರೆಗೂ ಮಾರಾಟ ಆಗುತ್ತಿದೆ. ಒಂದು ಹಣ್ಣು ಗರಿಷ್ಠ 300 ಗ್ರಾಂ ತೂಕವಿದೆ. ದೊಡ್ಡ ಗಾತ್ರದಲ್ಲಿ ಬೆಳೆದರೆ, ಬೆಲೆಯೂ ಉತ್ತಮವಾಗಿ ಸಿಗುತ್ತದೆ’ ಎಂದು ಡಾ.ನೀಲಕಂಠ ತಿಳಿಸಿದರು.

‘ತೋಟಗಾರಿಕೆ ಮಾಡುವುದಕ್ಕೆ ನನಗೆ ತುಂಬಾ ಆಸಕ್ತಿ ಇತ್ತು. ಪತಿ ಡಾ.ನೀಲಕಂಠ ಅವರು ತೊಡಗಿಸಿಕೊಂಡಿದ್ದನ್ನು ಗಮನಿಸಿ, ಅವರೊಂದಿಗೆ ಸಾಧ್ಯವಾದಷ್ಟು ಕೈಜೋಡಿಸಿ ಕೆಲಸ ಮಾಡುತ್ತಿದ್ದೇನೆ. ಕೃಷಿಯಲ್ಲಿ ನೆಮ್ಮದಿ ಇದೆ. ನಗರಗಳಲ್ಲಿ ಒತ್ತಡ ಅನುಭವಿಸುವುದಕ್ಕಿಂತ ತೋಟಕ್ಕೆ ಬಂದು ಕೈಜೋಡಿಸುತ್ತೇನೆಎ. ಕೃಷಿ ಮಾಡುವುದಕ್ಕೆ ಮನಸ್ಥಿತಿ ತುಂಬಾ ಮುಖ್ಯ’ ಎಂದು ಡಾ.ಜ್ಯೋತಿ ಅವರು ಹೇಳುವ ಮಾತಿದು.

ಡಾ.ನೀಲಕಂಠ ಹಾಗೂ ಡಾ.ಜ್ಯೋತಿ ದಂಪತಿಯು ರಾಯಚೂರಿನ ಎಎಂಎ ದಂತ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಸದ್ಯ ಡಾ.ನೀಲಕಂಠ ಅವರು ಮಾತ್ರ ಕೃಷಿ ಜೊತೆಗೆ ಪ್ರಾಧ್ಯಾಪಕ ವೃತ್ತಿ ಮುಂದುವರಿಸಿದ್ದಾರೆ. ಖಾಸಗಿ ದಂತ ವೈದ್ಯಕೀಯ ಆಸ್ಪತ್ರೆ ಕೂಡಾ ಇದೆ. ರಾಯಚೂರು ನಗರದಲ್ಲಿ ವಾಸವಿದ್ದರೂ, ಜೇಗರಕಲ್‌ ಗ್ರಾಮಕ್ಕೆ ಹೋಗಿ ತೋಟಗಾರಿಕೆ ಮಾಡುವುದನ್ನು ರೂಢಿಸಿಕೊಂಡಿರುವುದು ಗಮನಾರ್ಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT