ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ: ರಾಜಕಾಲುವೆ, ಚರಂಡಿ ಸ್ವಚ್ಛ ಮಾಡದ ಪುರಸಭೆ

ದೇವದುರ್ಗ: ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಬೆಸತ್ತ ವ್ಯಾಪಾರಿಗಳು, ಜನರು
ಯಮನೇಶ ಗೌಡಗೇರಾ
Published 28 ಜೂನ್ 2024, 5:16 IST
Last Updated 28 ಜೂನ್ 2024, 5:16 IST
ಅಕ್ಷರ ಗಾತ್ರ

ದೇವದುರ್ಗ: ಈ ವರ್ಷ ಭರ್ಜರಿ ಮಳೆಯಾಗುತ್ತಿದ್ದರೂ ಪಟ್ಟಣದ ರಾಜಕಾಲುವೆ ಸ್ವಚ್ಛಗೊಳಿಸಿದ ಹಿನ್ನೆಲೆಯಲ್ಲಿ ವಾಣಿಜ್ಯ ಮಳಿಗೆ ಮತ್ತು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗವ ಅವಾಂತರ ಸೃಷ್ಟಿಯಾಗುವ ಸಾಧ್ಯತೆ ಇದೆ.

ಪಟ್ಟಣದ ವಡ್ಡರಕಟ್ಟಿ, ಅಶೋಕ ಓಣಿ ಮೂಲಕ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ಹರಿಯುವ ರಾಜಕಾಲುವೆ ಮತ್ತು ಸಂಪರ್ಕ ಕಲ್ಪಿಸುವ ಎಪಿಎಂಸಿ, ಅಂಬೇಡ್ಕರ್ ವೃತ್ತ, ಎಚ್‌ಝ್‌ಪಿ ಚೌಕ್ ಮತ್ತು ನಗರಗುಂಡ ಕ್ರಾಸ್ ಹತ್ತಿರದ ಚರಂಡಿ ಸಾಧಾರಣ ಮಳೆಯಾದರೂ ತುಂಬಿ ರಸ್ತೆ ಮೇಲೆ ಚರಂಡಿ ನೀರು ಹರಿದು ದುರ್ವಾಸನೆ ಬೀರುತ್ತಿದೆ.

ಪ್ರತಿ ವರ್ಷ ಹೊಸ ಬಸ್ ನಿಲ್ದಾಣ ಮತ್ತು ರಾಯಚೂರು ತಿಂಥಣಿ ರಸ್ತೆ ಚರಂಡಿ ನೀರಿನಿಂದ ಸಂಪೂರ್ಣ ಜಲಾವೃತವಾಗುತ್ತವೆ. ರಸ್ತೆ ಬದಿಯ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗುತ್ತದೆ.  ಪುರಸಭೆ ವತಿಯಿಂದ ಪ್ರತಿ ವರ್ಷ ಮಳೆಗಾಲ ಆರಂಭವಾದಾಗ ಚರಂಡಿಗಳ ಹೂಳು ಎತ್ತಲಾಗುತ್ತಿತ್ತು. ಈ ವರ್ಷ ಇನ್ನೂ ಅದಕ್ಕೆ ಕಾಲ ಕೂಡಿ ಬಂದಿಲ್ಲ. ಪುರಸಭೆ ನಿರ್ಲಕ್ಷ್ಯಕ್ಕೆ ವ್ಯಾಪಾರಿಗಳು ಬೇಸರ ಗೊಂಡಿದ್ದಾರೆ.

ರಾಜಕಾಲುವೆಗಳ ಮೇಲೆ ಮನೆ, ಅಂಗಡಿಗಳನ್ನು ನಿರ್ಮಾಣ ಮಾಡಿದ್ದನ್ನು ಗುರುತಿಸಿ ಅಕ್ರಮ ಕಟ್ಟಡ ತೆರವು ಮಾಡಿದರೆ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ನಿವಾಸಿ ರಮೇಶ ಹೇಳುತ್ತಾರೆ.

ಪಟ್ಟಣದ ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಎಪಿಎಂಸಿ, ಅಂಬೇಡ್ಕರ್ ಚೌಕ್ ಸೇರಿದಂತೆ ಹಲವೆಡೆ ಚರಂಡಿ ಹಾಗೂ ರಾಜಕಾಲುವೆಗಳ ಮೇಲೆಯೇ ನಿರ್ಮಿಸಿದ ಕಟ್ಟಡಗಳಿಂದಾಗಿ ಹೂಳು ತೆಗೆಯಲು ಆಗುತ್ತಿಲ್ಲ. ಪಟ್ಟಣದ ಹಲವು ಕಡೆ ರಸ್ತೆ ಬದಿಯಲ್ಲಿ ಗಟಾರಗಳೇ ಇಲ್ಲ. ಇದ್ದ ಚರಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಮಳೆ ನೀರು ಚರಂಡಿಗೆ ಹೋಗದೇ ರಸ್ತೆ ಮೇಲೆ ನಿಲ್ಲುತ್ತಿದೆ.

ಬಸ್ ನಿಲ್ದಾಣ ಹತ್ತಿರ ರಾಯಚೂರ - ತಿಂಥಣಿ ಮುಖ್ಯ ರಸ್ತೆಯಲ್ಲಿ ಸಾಧಾರಣ ಮಳೆ ಬಂದರೂ ಎರಡು ಬದಿಯಲ್ಲಿ ನೀರು ನಿಂತಿರುತ್ತದೆ. ಪಾದಚಾರಿಗಳಿಗೆ ನಡೆದಾಡಲು ಜಾಗವಿಲ್ಲದೇ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ.

ದೇವದುರ್ಗದ ರಾಜಕಾಲುವೆ ನೀರು ಬಸ್ ನಿಲ್ದಾಣಕ್ಕೆ ನುಗ್ಗಿರುವುದು (ಸಂಗ್ರಹ ಚಿತ್ರ)
ದೇವದುರ್ಗದ ರಾಜಕಾಲುವೆ ನೀರು ಬಸ್ ನಿಲ್ದಾಣಕ್ಕೆ ನುಗ್ಗಿರುವುದು (ಸಂಗ್ರಹ ಚಿತ್ರ)

ಮಳೆಯಿಂದ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು. ರಾಜಕಾಲುವೆ ಚರಂಡಿ ಒತ್ತುವರಿ ಬಗ್ಗೆ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು

–ಹಂಪಯ್ಯ.ಕೆ ಪುರಸಭೆ ಮುಖ್ಯಾಧಿಕಾರಿ

ಚರಂಡಿ ಮೇಲೆ ಇರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು. ರಸ್ತೆ ಮೇಲೆ ಚರಂಡಿ ನೀರು ಸಂಗ್ರಹದಿಂದ ಸಾರ್ವಜನಿರಿಗೆ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತದೆ

–ಸುನೀಲ್ ಕುಮಾರ ಮಡಿವಾಳ ಸ್ಥಳೀಯ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT