ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ತರಬೇತಿಗೆ ಸರ್ಕಾರದಿಂದ ನೆರವು

ಎಂಎಸ್‌ಎಂಇ ಸಮಾವೇಶದಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿಕೆ
Last Updated 5 ಫೆಬ್ರುವರಿ 2020, 11:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿರುವ ಯಾವುದೇ ಕೈಗಾರಿಕೆಗಳು ನಿರುದ್ಯೋಗಿ ಯುವಕರನ್ನು ಸೇರಿಸಿಕೊಂಡು ಪ್ರಾಯೋಗಿಕ ಕೌಶಲತರಬೇತಿ ನೀಡಿದರೆ, ಅದರ ವೆಚ್ಚವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಹೇಳಿದರು.

ನಗರದ ಪವನ್‌ ಮ್ಯಾನ್ಷನ್‌ ಸಭಾಂಗಣದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನಿಂದ ಬುಧವಾರ ಏರ್ಪಡಿಸಿದ್ದ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಹರಿಯುವ ಎರಡು ನದಿಗಳಿಂದಾಗಿ ನೀರಾವರಿ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿದೆ. ಕೋಲಾರ, ಚಿತ್ರದುರ್ಗ, ಹಾಸನ ಹಾಗೂ ಕಲಬುರ್ಗಿ ಜಿಲ್ಲೆಗೆ ಹೋಲಿಕೆ ಮಾಡಿದರೆ ರಾಯಚೂರಿನಲ್ಲಿಯೇ ನೀರಾವರಿ ಪ್ರದೇಶ ಹೆಚ್ಚಿದೆ. ಆದರೆ, ಜನರು ಗುಳೆ ಹೋಗುವ ಪದ್ಧತಿ ನಿಲ್ಲುತ್ತಿಲ್ಲ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯವಸ್ಥಿತವಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿದೆ ಎಂದು ತಿಳಿಸಿದರು.

ಕಲಬುರ್ಗಿಯಲ್ಲಿ ಮಳೆ ಆಶ್ರಯದಿಂದ ತೊಗರಿ ಒಂದೇ ಬೆಳೆಯನ್ನು ಅತಿಹೆಚ್ಚಾಗಿ ಬೆಳೆಯುತ್ತಾರೆ. ಅಲ್ಲಿನ ಜನರು ಗುಳೆ ಹೋಗುವುದು ಕಡಿಮೆ. ಕೃಷಿ ಅವಲಂಬಿತ ಕುಟುಂಬಗಳು ಆ ಜಿಲ್ಲೆಯಲ್ಲಿ ಇದ್ದರೂ, ಅದರೊಂದಿಗೆ ಹೈನುಗಾರಿಕೆ ಹಾಗೂ ಕೃಷಿ ಸಂಬಂಧಿತ ಇನ್ನಿತರೆ ಚಟುವಟಿಕೆಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.

ರಾಯಚೂರು ಜಿಲ್ಲೆಯಲ್ಲಿಯೂ ಹೈನುಗಾರಿಕೆ ಹೆಚ್ಚಳ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿರುವ ಬ್ಯಾಂಕುಗಳು ಹಸು, ಗೋವು ಹಾಗೂ ಮೇಕೆಗಳನ್ನು ಖರೀದಿಸುವವರಿಗೆ ಹೆಚ್ಚಿನ ಸಾಲಸೌಲಭ್ಯ ಒದಗಿಸಬೇಕು. ರಾಯಚೂರಿನಲ್ಲಿ ಕೆಲವು ಕುಟುಂಬಗಳು ಉನ್ನತ ಸ್ತರದಲ್ಲಿದ್ದರೆ, ಬಹಳಷ್ಟು ಕುಟುಂಬಗಳು ಕೆಳಗಿನ ಸ್ತರದಲ್ಲಿ ಆರ್ಥಿಕತೆ ಹೊಂದಿವೆ. ಹೈನುಗಾರಿಕೆ ಸೇರಿದಂತೆ ವಿವಿಧ ಯೋಜನೆಗಳನ್ನು ವ್ಯವಸ್ಥಿತ ರೂಪದಲ್ಲಿ ಮಾಡಿದರೆ ಮಾತ್ರ, ಜನರು ಅದನ್ನು ರೂಢಿಗೆ ತಂದುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯನ್ನು ಡಿಜಿಟಲೀಕರಣ ಮಾಡುವುದಕ್ಕೆ ಬೇಕಾದ ಕ್ರಮಗಳನ್ನು ವ್ಯವಸ್ಥಿತವಾಗಿ ಬ್ಯಾಂಕುಗಳು ಮಾಡಬೇಕು. ಇದಕ್ಕೆ ಅಗತ್ಯವಾಗುವ ಸಹಕಾರವನ್ನು ಜಿಲ್ಲಾಡಳಿತ ನೀಡುತ್ತದೆ. ಜಿಲ್ಲೆಯಲ್ಲಿರುವ ಎಲ್ಲ ಗ್ರಾಮ ಪಂಚಾಯಿತಿಗಳು ಶೇ 80 ರಷ್ಟು ಕಾರ್ಯವನ್ನು ಇಂಟರ್‌ನೆಟ್‌ ಮೂಲಕವೇ ಮಾಡುತ್ತಿವೆ. ಹಾಗಾಗಿ ಯಾವುದೇ ಭಾಗದಲ್ಲಿ ಇಂಟರ್‌ನೆಟ್‌ ಸಂಪರ್ಕ ಕೊರತೆಯಿಲ್ಲ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಹೈನುಗಾರಿಕೆ ಹೆಚ್ಚಳ ಮಾಡುವುದಕ್ಕಾಗಿ ಈಗಾಗಲೇ ಆರು ಕಡೆಗಳಲ್ಲಿ ಹಾಲಿನ ಸೊಸೈಟಿಗಳನ್ನು ಆರಂಭಿಸಲಾಗಿದೆ. ಜಾನುವಾರು ಖರೀದಿಸುವುದಕ್ಕೆ ಜನರಲ್ಲಿ ಹಣವಿಲ್ಲ. ಬ್ಯಾಂಕ್‌ ಅಧಿಕಾರಿಗಳು ಹೈನುಗಾರಿಕೆಗೆ ಸಂಬಂಧಿಸಿದ ಸಾಲದ ಅರ್ಜಿಗಳನ್ನು ಪರಿಗಣಿಸಿ, ಹೆಚ್ಚು ಸಾಲ ಕೊಡಬೇಕು. ಎಂಎಸ್‌ಎಂಇಗಳಲ್ಲಿಯೂ ಸಾಕಷ್ಟು ಉದ್ಯಮಿಗಳು ಲೇವಾದೇವಿ ಮೂಲಗಳಿಂದ ಗರಿಷ್ಠ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದಾರೆ. ಇದು ಕೊನೆಯಾಗಬೇಕಿದ್ದು, ಬ್ಯಾಂಕುಗಳು ಹೆಚ್ಚಿನ ಪ್ರಮಾಣದ ಸಾಲಸೌಲಭ್ಯ ನೀಡಬೇಕು ಎಂದು ಹೇಳಿದರು.

ಆರ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಪಿ.ಪ್ರದೀಪ್‌, ಕೆನರಾಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಸತ್ಯಪ್ರಕಾಶ್‌ ಸಿಂಗ್‌, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಂಟಿ ನಿರ್ದೇಶಕ ಮೊಹಮ್ಮದ್‌ ಇರ್ಫಾನ್‌, ಮಧುಸೂಧನ್‌ಗೌಡ, ರಾಯಚೂರು ವಾಣಿಜ್ಯೋದ್ಯಮಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪಿ.ಎಸ್‌. ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT