ಶನಿವಾರ, ಮೇ 15, 2021
24 °C
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹ

ಬಹಿರಂಗ ಹಣ ಹಂಚಿಕೆ: ಬಿಜೆಪಿ ಅಭ್ಯರ್ಥಿ ಅನರ್ಹಗೊಳಿಸಲು ಡಿ.ಕೆ.ಶಿವಕುಮಾರ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ‘ಮಸ್ಕಿ ಕ್ಷೇತ್ರದ ಉಪಚುನಾವಣೆ ಕಾರಣ ಬಿಜೆಪಿ ಮುಖಂಡರು ವಿವಿಧ ಗ್ರಾಮಗಳಲ್ಲಿನ ಜನರಿಗೆ  ಬಹಿರಂಗವಾಗಿ ಹಣ ಹಂಚಿಕೆ ಮಾಡಿರುವುದು ವಿಡಿಯೊ ಸಮೇತ ಸಾಬೀತಾಗಿದೆ. ಆದ್ದರಿಂದ ಚುನಾವಣಾ ಆಯೋಗ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರನ್ನು ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು‘ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದರು.

ನಗರದ ಹೆಲಿಪ್ಯಾಡ್‍ನಲ್ಲಿ ಬುಧವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿವಿಧ ಗ್ರಾಮಗಳಲ್ಲಿ ಜನರನ್ನು ಗುಂಪುಗೂಡಿಸಿ ಒಬ್ಬರಿಗೆ ₹ 200ರಂತೆ ಬಿಜೆಪಿಯವರು ಹಣ ಹಂಚಿಕೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬಿಜೆಪಿಯ ನಂದೀಶ ರೆಡ್ಡಿ ಹಣ ಹಂಚಿಕೆ ಮಾಡುತ್ತಿರುವ ವಿಡಿಯೊ ದೃಶ್ಯದೊಂದಿಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಮಸ್ಕಿ ಮತ್ತು ಮುದಗಲ್‍ನಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಸಭೆ ನಡೆಸಿರುವುದು ಸಂವಿಧಾನ ಬಾಹಿರವಾಗಿದೆ. ಈ ಬಗ್ಗೆ ಚುನಾವಣಾ ಆಯೋಗದ ಗಮನಕ್ಕಿದ್ದರೂ ಕ್ರಮಕೈಗೊಳ್ಳದೆ ಮೌನ ವಹಿಸಿರುವುದು ಸರ್ಕಾರದ ಒತ್ತಡಕ್ಕೆ ಮಣಿದಿರುವಂತೆ ಕಾಣುತ್ತಿದೆ’ ಎಂದು ಆಪಾದಿಸಿದರು.

ಓದಿ: 

‘ಮಸ್ಕಿ ವಿಧಾನಸಭೆ ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿದ್ದು, ಈ ಉಪಚುನಾವಣೆಯಲ್ಲಿ ಬಿಜೆಪಿಯವರು ಎಷ್ಟೇ ಹಣ ಸುರಿದರೂ, ಜನರು ಮಾತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮತ ಹಾಕಿ ಗೆಲ್ಲಿಸಲಿದ್ದಾರೆ‘ ಎಂದರು.

ಖಾಸಗೀಕರಣಕ್ಕೆ ಹುನ್ನಾರ: ರಾಜ್ಯ ಬಿಜೆಪಿ ಸರ್ಕಾರ ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಹುನ್ನಾರದಲ್ಲಿದೆ. ಸಾರಿಗೆ ನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿದ್ದರೆ ಅವರ ಕುಟುಂಬಗಳು ಬೀದಿಗೆ ಬಂದು ಭಿಕ್ಷೆ ಬೇಡುವ ಸ್ಥಿತಿ ಬರುತ್ತಿರಲಿಲ್ಲ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದರು.

‘ಕೋವಿಡ್‌ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದಿನಕ್ಕೊಂದು ನಿಯಮ ಮಾಡಿ ಜಾರಿಗೆ ತರುತ್ತಿದ್ದಾರೆ. ಉಪಚುನಾವಣೆ ಕಾರಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಏ.18 ಮುಖ್ಯಮಂತ್ರಿ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ. ಮೊದಲು ತಮ್ಮ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಭಾಗವಹಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು‘ ಎಂದು ಡಿ.ಕೆ.ಶಿವಕುಮಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಓದಿ: 

ಶಾಸಕರಾದ ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ, ಡಿ.ಎಸ್.ಹೂಲಗೇರಿ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಯುವ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿ ಮಲಿಕ್, ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಇದ್ದರು.

ಅಧಿಕಾರಿಗಳಿಗೆ ತರಾಟೆ: ಚುನಾವಣೆ ಪ್ರಚಾರಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸಿಂಧನೂರಿನ ಹೆಲಿಪ್ಯಾಡ್‍ಗೆ ಆಗಮಿಸುವ ಸಂದರ್ಭದಲ್ಲಿ ಸ್ವಾಗತ ಕೋರಲು ತೆರಳುತ್ತಿದ್ದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರನ್ನು ತಹಶೀಲ್ದಾರ್ ಕವಿತಾ ಹಾಗೂ ಪೊಲೀಸ್ ಅಧಿಕಾರಿಗಳು 20 ನಿಮಿಷಗಳ ಕಾಲ ತಡೆದರು. ಇದರಿಂದ ಆಕ್ರೋಶಗೊಂಡ ಶಾಸಕರಿಬ್ಬರು ‘ಚುನಾವಣಾ ಮಾರ್ಗಸೂಚಿಗಳು ನಮಗೂ ತಿಳಿದಿವೆ. ಹೆಲಿಪ್ಯಾಡ್ ಪ್ರವೇಶಕ್ಕೆ ಅವಕಾಶ ಕೊಡದೆ ಶಾಸಕರಿಗೆ ಅಗೌರವ ತೋರುವುದು ಸರಿಯಲ್ಲ. ಗೌರವ ಕೊಡುವುದು ಕಲಿತುಕೊಳ್ಳಿ’ ಎಂದು ತಹಶೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಘಟನೆ ಕೂಡ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು