ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಗೆಹರಿಯದ ನೀರಿನ ಸಮಸ್ಯೆ: ಸರ್ಕಾರದ ಮಾತಿಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲ

ಮಳೆಗಾಲ ಆರಂಭವಾದರೂ ಬಗೆಹರಿಯದ ಕುಡಿಯವ ನೀರಿನ ಸಮಸ್ಯೆ l ಜಲ ಜೀವನ್ ಮಿಷನ್‌ನ ನಲ್ಲಿ ಇದ್ದರೂ ನೀರಿಲ್ಲ l ಜಿಲ್ಲಾಡಳಿತ ನಿರ್ಲಕ್ಷ್ಯ
Published 10 ಜೂನ್ 2024, 7:15 IST
Last Updated 10 ಜೂನ್ 2024, 7:15 IST
ಅಕ್ಷರ ಗಾತ್ರ

ರಾಯಚೂರು: ರಾಜ್ಯದಲ್ಲಿ ಯಾವ ಸರ್ಕಾರ ಬಂದರೇನು?, ಹೋದರೇನು? ಸರ್ಕಾರದ ಮಾತಿಗೆ ಜಿಲ್ಲೆಯಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಜಿಲ್ಲೆಯ ಹಲವೆಡೆ ನೀರಿಗಾಗಿ ಪರಿತಪಿಸುತ್ತ ವರ್ಷ ಕಳೆದರೂ ಜಿಲ್ಲಾಡಳಿತ ಗಂಭೀರವಾಗಿಲ್ಲ. ಚುನಾಯಿತ ಪ್ರತಿನಿಧಿಗಳೂ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜನರ ಗೋಳು ಹೆಚ್ಚಿದೆ.

ಜಿಲ್ಲಾ ಉಸ್ತುವಾರಿ ಸಚಿವರು ಇದ್ದರೂ ಯಾವ ಲೆಕ್ಕಕ್ಕೂ ಇಲ್ಲ. ಅವರು ಜಿಲ್ಲೆಯ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಮೂಲಕವಾದರೂ ಸಮಸ್ಯೆ ಅರಿತುಕೊಳ್ಳಲು ಪ್ರಯತ್ನಿಸಬಹುದು ಎನ್ನುವ ಭರವಸೆಯೂ ಇದೀಗ ಹುಸಿಯಾಗಿದೆ.

ಮಹಿಳೆಯರು ಮಕ್ಕಳು ಜಿಲ್ಲಾಧಿಕಾರಿ ನಿವಾಸ, ಜಿಲ್ಲಾಡಳಿತ ಕಚೇರಿ, ತಾಲ್ಲೂಕು ಆಡಳಿತ ಕಚೇರಿ, ಗ್ರಾಮ ಪಂಚಾಯಿತಿ ಕಚೇರಿಗಳ ಮುಂದೆ ನೀರಿಗಾಗಿ ಕೊಡ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನೀರು ಕೊಡಬೇಕಾದ ಅಧಿಕಾರಿಗಳು ಪ್ರತಿಭಟನೆ ನಡೆಸಿದವರ ವಿರುದ್ಧವೇ ಪ್ರಕರಣ ದಾಖಲಿಸಿ, ನೋಟಿಸ್‌ ಕೊಟ್ಟು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಆಡಳಿತದ ವಿರುದ್ಧ ಜನರ ಆಕ್ರೋಶ ಹೆಚ್ಚುತ್ತಿದೆ.

ಗಣೇಕಲ್ ಜಲಾಶಯ ಖಾಲಿ

ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳ ಕುಡಿಯುವ ನೀರಿನ ಕೆರೆಗಳಿಗೆ ನೀರು ಪೂರೈಕೆ ಮಾಡುವ ಗಣೇಕಲ್ ಜಲಾಶಯದಲ್ಲಿ ನೀರು ಬಹುತೇಕ ಖಾಲಿಯಾಗಿದೆ. ಒಂದು ತಿಂಗಳ ಹಿಂದಷ್ಟೇ ರಾಯಚೂರು ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಕೆರೆಗಳಿಗೆ ಗಣೇಕಲ್ ಜಲಾಶಯದಿಂದ ನೀರು ಹರಿಸಿ ಕೆರೆ ಭರ್ತಿ ಮಾಡಲಾಗಿದೆ. ಸದ್ಯ ಕೆರೆ ಸಂಪೂರ್ಣ ಖಾಲಿಯಾಗಿದ್ದು ಮಳೆ ಬಾರದಿದ್ದರೆ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಲಿದೆ.


ಮರ್ಚೆಟ್ಹಾಳ ಸಮಸ್ಯೆ:

ರಾಯಚೂರು ತಾಲ್ಲೂಕಿನ ಮರ್ಚೆಟ್ಹಾಳ್ ಗ್ರಾಮದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಗ್ರಾಮದ ವಾರ್ಡ್ ನಂಬರ್ 1ರ ಪರಿಶಿಷ್ಟ ಜಾತಿಯ ಕಾಲೊನಿಗೆ ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ.
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದಲ್ಲಿ ಪೈಪ್ ಲೈನ್ ಹಾಕಿದಾರೆ. ವಾರ್ಡ್ ನಂಬರ್ 1 ರಲ್ಲಿ ಪೈಪ್ ಲೈನ್ ಅಳವಡಿಸಿಲ್ಲ. ಹಳ್ಳಗಳಲ್ಲಿ ಚೆಂಬು, ಲೋಟಗಳ ಮೂಲಕ ನೀರು ತುಂಬಿಕೊಳ್ಳಬೇಕಾದ ಪರಿಸ್ಥಿತಿ ಇದೆ.
ಇಲ್ಲಿನ ನೀರಿನ ಸಮಸ್ಯೆಯ ಕುರಿತು ಈಚೆಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಪಿಡಿಒ ಹಾಗೂ ಕೆಲ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ,ಸಮಸ್ಯೆ ಬಗೆ ಹರಿದಿಲ್ಲ. ಎರಡು ತಿಂಗಳಿನಿಂದ ನೀರಿನ ಸಮಸ್ಯೆ ತೀವ್ರಗೊಂಡಿದೆ‘ ಎಂದು ಗ್ರಾಮದ ನಿವಾಸಿ ಮಲ್ಲೇಶ ಬೇಸರ ವ್ಯಕ್ತಪಡಿಸುತ್ತಾರೆ.

ಮಸ್ಕಿ: ಜಲಕ್ಷಾಮದ ಭೀತಿ - ತಿಂಗಳಿಗೆ ಮೂರೇ ದಿನ ನೀರು

ಮಸ್ಕಿ: ಪಟ್ಟಣದ ಶಾಶ್ವತ ಶುದ್ಧ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಭಾನುವಾರ ನಾಲ್ಕು ಅಡಿಗೆ ಕುಸಿದಿದೆ. ಜಲಕ್ಷಾಮ ಭೀತಿ ಹಿನ್ನೆಲೆ ಪುರಸಭೆ ಆಡಳಿತ ಸಾರ್ವಜನಿಕರ ಹತ್ತು ದಿನಕ್ಕೊಮ್ಮೆ ಕುಡಿಯಲು ನೀರು ಸರಬರಾಜು ಮಾಡುತ್ತಿದೆ.


28 ಅಡಿ ಹಾಗೂ 10 ಅಡಿ ಸಾಮಾರ್ಥ್ಯದ ಎರಡು ಕೆರೆಗಳನ್ನು ಪುರಸಭೆ ಆಡಳಿತ ಕಳೆದ ಎರಡು ತಿಂಗಳ ಹಿಂದೆಯಷ್ಟೆ ಭರ್ತಿ ಮಾಡಿಕೊಂಡಿತ್ತು. ಎರಡು ಕೆರೆ ಸೇರಿ ನಾಲ್ಕು ಅಡಿ ನೀರು ಮಾತ್ರ ಇದ್ದು 15 ದಿನಗಳಲ್ಲಿ ನೀರಿನ ಕೆರೆ ಸಂಪೂರ್ಣ ಬರೀದಾಗುವ ಭೀತಿ ಎದುರಾಗಿದೆ.


ಪಟ್ಟಣದ ವಾರ್ಡ್ ಗಳಿಗೆ ಸರದಿ ಮೇಲೆ ಹತ್ತು ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಜೂನ್ ಕೊನೆವರೆಗೆ ನೀರು ಕೊಡಲು ಪುರಸಭೆ ಸಾಧ್ಯ. ಜುಲೈನಲ್ಲಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು ಬಿಟ್ಟರೆ ಮಾತ್ರ ಜಲಕ್ಷಾಮದಿಂದ ಪುರಸಭೆ ಹೊರ ಬರಬಹುದು. ಒಂದು ವೇಳೆ ನೀರು ಬಿಡದಿದ್ದರೆ ನೀರು ಪೂರೈಕೆ ದೊಡ್ಡ ಸಮಸ್ಯೆಯಾಗಲಿದೆ.


ಪಟ್ಟಣದಲ್ಲಿನ ಕಿರು ನೀರು ಸಬರಾಜು ಯೋಜನೆಗಳು ಅಂತರ್ ಜಲ ಕುಸಿತದಿಂದ ಸಮರ್ಪಕ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಪರ್ಯಾಯವಾಗಿ ಖಾಸಗಿ ವ್ಯಕ್ತಿಗಳ ತೆರೆದ ಬಾವಿ ಹಾಗೂ ಕೊಳವೆ ಬಾವಿಯಗಳ ನೀರು ಪಡೆಯಲು ಪುರಸಭೆ ಮುಂದಾಗಿದೆ. ಈಗಾಗಲೇ ಕೆಲವು ಬಾವಿಗಳ ಮಾಲೀಕರ ಜತೆ ಪುರಸಭೆ ಅಧಿಕಾರಿಗಳು ಚರ್ಚೆ ನಡೆಸಿದ್ದು ಕುಡಿಯುವ ನೀರು ಒದಗಿಸಲು ಪುರಸಭೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.


‘ಜೂನ್ ಕೂನೆ ವಾರದಿಂದ ಉದ್ಭವಿಸುವ ನೀರಿನ ಸಮಸ್ಯೆ ಪರಿಹಾರಕ್ಕೆ ಪುರಸಭೆ ಆಡಳಿತ ಎಲ್ಲ ಮುಂಜಾಗೃತ ಕ್ರಮ ಕೈಗೊಂಡಿದೆ’ ಎಂದು ಪುರಸಭೆ ಎಂಜನಿಯರ್ ಮೀನಾಕ್ಷಿ ಹೇಳುತ್ತಾರೆ.

ಕವಿತಾಳಕ್ಕೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ

ಕವಿತಾಳ : ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಸದ್ಯ ಎರಡು ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.


ಕುಡಿಯುವ ನೀರಿನ ಕೆರೆಗೆ ಕಾಲುವೆ ನೀರು ಭರ್ತಿ ಮಾಡುವಲ್ಲಿ ಅಧಿಕಾರಿಗಳು ಕಾಳಜಿ ವಹಿಸದ ಕಾರಣ ನೀರಿನ ಸಮಸ್ಯೆ ಉಂಟಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಕೆರೆಯಲ್ಲಿ ನೀರು ಸಂಗ್ರಹ ಕಡಿಮೆಯಾಗುತ್ತಿದ್ದಂತೆಯೇ ಎರಡು ತಿಂಗಳಿಂದ ಐದು ದಿನಗಳಿಗೆ ಒಮ್ಮೆ ನೀರು ಪೂರೈಸಿದ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ಮುಂದಾಗಲಿಲ್ಲ, ಈಗ ಕಲುಷಿತ ನೀರು ಪೂರೈಕೆ ವಿರುದ್ದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜಿಲ್ಲಾ ನಗರಾಭಿವೃದ್ದಿ ಕೋಶದ ಐವರು ಅಧಿಕಾರಿಗಳ ತಂಡ ರಚಿಸಿ ಅವರಿಗೆ ನೀರು ಪೂರೈಕೆಯ ಉಸ್ತುವಾರಿಗೆ ನೇಮಿಸಿದೆ.


ಸದ್ಯ ಕೆಲವು ವಾರ್ಡ್ ಗಳಿಗೆ ಟ್ಯಾಂಕರ್ ನೀರು ಪೂರೈಸುತ್ತಿದ್ದು ಖಾಸಗಿ ಕೊಳವೆಬಾವಿಗಳ ಬಾಡಿಗೆ ಪಡೆದು ಅವುಗಳ ದುರಸ್ತಿ ಮತ್ತು ಪೈಪ್ ಲೈನ್ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

ತಿಂಗಳ ಹಿಂದೆ ಕೊಳವೆಬಾವಿಗಳ ಬಾಡಿಗೆ ಪಡೆದು ಅವುಗಳ ದುರಸ್ತಿ ಹಾಗೂ ಪೈಪ್ ಲೈನ್ ವ್ಯವಸ್ಥೆ ಮಾಡಿಕೊಂಡಿದ್ದರೆ ನೀರಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ ಅಧಿಕಾರಿಗಳ ನಿರ್ಲಕ್ಷದಿಂದ ನೀರಿನ ಸಮಸ್ಯೆ ಉಲ್ಬಣವಾಗಿದೆʼ ಎಂದು ಮುಖಂಡ ಸುರೇಶ ಗಂಗಾನಗರ ಕ್ಯಾಂಪ್ ಆರೋಪಿಸಿದರು.

ಸಿಂಧನೂರು: ತಿಂಗಳಲ್ಲಿ ಎರಡೇ ದಿನ ನೀರು

ಸಿಂಧನೂರು: ಸಿಂಧನೂರು ನಗರದಲ್ಲಿ ಕುಡಿಯುವ ನೀರಿಗೆ ವಿಪರೀತ ಬರ ಬಂದಿದ್ದು, ನೀರಿನ ಟ್ಯಾಂಕರ್ ಗಳಿಗೆ ಬೇಡಿಕೆ ಹೆಚ್ಚಿದೆ.


ತುರ್ವಿಹಾಳ ಕೆರೆಯಲ್ಲಿ ನೀರು ತಳ ಮುಟ್ಟಿದೆ. ನಗರದ ದೊಡ್ಡ ಮತ್ತು ಸಣ್ಣ ಕೆರೆಗೆ ನಗರಸಭೆ ಸದಸ್ಯ ಛತ್ರಪ್ಪ ಕುರಕುಂದಿ ಹಾಗೂ ಗೀತಾ ಕ್ಯಾಂಪಿನ ಪಾಪಿರೆಡ್ಡಿ ಅವರ ಖಾಸಗಿ ಕೆರೆಯಿಂದ ಪೈಪ್ ಲೈನ್ ಹಾಕಿ ನೀರು ಡಂಪ್ ಮಾಡಿ, ನಗರದ ವಾರ್ಡ್‌ಗಳಿಗೆ 13 ರಿಂದ 15 ದಿನಗಳಿಗೆ ಕುಡಿಯಲು ನೀರು ಪೂರೈಕೆ ಮಾಡಲಾಗುತ್ತಿದೆ.


ನಗರಸಭೆ ಪೌರಾಯುಕ್ತರು 10 ದಿನಕ್ಕೊಮ್ಮೆ ನೀರು ಬಿಡುವುದಾಗಿ ಹೇಳಿ 15 ದಿನಕ್ಕೊಮ್ಮೆ ಬಿಡುತ್ತಿರುವುದರಿಂದ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಕೊಡಗಳನ್ನು ಹಿಡಿದು ದೊಡ್ಡ ಕೆರೆ, ಯಲ್ಲಮ್ಮ ಗುಡಿ, ರೈತನಗರ ಕ್ಯಾಂಪ್ ಕ್ರಾಸ್‌ಗೆ ತೆರಳಿ ಬೈಕ್, ಆಟೊ, ತಳ್ಳುವ ಬಂಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ನೀರು ತರುವುದು ಸಾಮಾನ್ಯವಾಗಿದೆ.


ತುಂಗಭದ್ರಾ ಜಲಾಶಯದಿಂದ ನೀರು ಹರಿಸುವವರೆಗೆ ಕೆರೆಯಲ್ಲಿ ಸಂಗ್ರಹ ಇರುವ ನೀರನ್ನೇ ಪೂರೈಕೆ ಮಾಡಬೇಕಿದೆ. ಹೀಗಾಗಿ ನಗರಸಭೆ ಅತ್ಯಂತ ಜಾಗೃತರಾಗಿ ಖಾಸಗಿ ಕೆರೆ, ಬೋರ್ ವೆಲ್ ವಶಕ್ಕೆ ಪಡೆದು ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ನಗರದ ಜನತೆ ಸರ್ಕಾರಕ್ಕೆ ಮನವಿ ಮಾಡಿದೆ.

ನಿರ್ವಹಣೆ ವೈಫಲ್ಯ : ಕುಡಿಯುವ ನೀರಿನ ಸಮಸ್ಯೆ ಉಲ್ಬಣ

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಅಂತರ್ಜಲಮಟ್ಟ ಕುಸಿತ ಒಂದಡೆಯಾದರೆ, ಇರುವ ನೀರು ಸದ್ಬಳಕೆ ಮಾಡಿಕೊಳ್ಳುವಲ್ಲಿನ ವೈಫಲ್ಯದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.


ಯರಡೋಣಿ, ಹುನಕುಂಟಿ, ರಾಂಪೂರ ಸೇರಿದಂತೆ ಇತರೆ ಬಹುಗ್ರಾಮ ಕುಡಿವ ನೀರಿನ ಯೋಜನೆ ನಿರ್ವಹಣೆ ಮತ್ತು ಮೇಲ್ವಿಚಾರಣೆ ನಿರ್ಲಕ್ಷ್ಯದಿಂದ ಹತ್ತಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.


ಹುನಕುಂಟಿ, ಭೂಪುರ, ಕಳ್ಳಿಲಿಂಗಸುಗೂರು, ಮಾವಿನಭಾವಿ, ಯರಡೋಣಿ, ಹೊನ್ನಳ್ಳಿ, ಗುಡದನಾಳ, ಸರ್ಜಾಪುರ, ಕುಪ್ಪಿಗುಡ್ಡ, ಯಲಗಲದಿನ್ನಿ ಇತರೆ ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರಿನ ಯೋಜನೆ ಶಾಪಗ್ರಸ್ಥವಾಗಿ ಪರಿಣಮಿಸಿದ್ದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ.



ಸ್ಥಳೀಯ ಪುರಸಭೆ ವ್ಯಾಪ್ತಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಈ ವ್ಯಾಪ್ತಿಯ ಕರಡಕಲ್ಲ, ಕಸಬಾಲಿಂಗಸುಗೂರು, ಲಿಂಗಸುಗೂರು 23 ವಾರ್ಡಗಳಿಗೆ ನಿತ್ಯ ಕುಡಿಯುವ ನೀರು ಪೂರೈಸುವ ಕನಸು ಸಾಕಾರಗೊಂಡಿಲ್ಲ.


ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಿರ್ವಹಣೆ ಸಮಸ್ಯೆಯಿಂದ ಕೆರೆ ಭರ್ತಿ ಆಗಿದ್ದರೂ ಶುದ್ದ ಸಮಪರ್ಕ ಕುಡಿವ ನೀರು ಪೂರೈಕೆ ಆಗುತ್ತಿಲ್ಲ. ಆಡಳಿತ ವೈಫಲ್ಯದಿಂದ ವಾರಕ್ಕೊಮ್ಮೆ ನೀರು ಪೂರೈಕೆ ಆಗುತ್ತಿದೆ.

'ಹುನಕುಂಟಿ ಕೊಳವೆಬಾವಿ ಮತ್ತು ತೆರೆದಬಾವಿಗಳಲ್ಲಿ ನೀರು ತಳ ಕಂಡಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೈಫಲ್ಯದಿಂದಾಗಿ ನೀರಿಗಾಗಿ ಪರದಾಡುವಂತಾಗಿದೆ' ಎಂದು ಗ್ರಾಮಸ್ಥ ಉಮೇಶ ಹುನಕುಂಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಲ್ಕು ದಿನಕ್ಕೊಮ್ನೆ ಕುಡಿಯುವ ನೀರು ಪೂರೈಕೆ

ಮಾನ್ವಿ: ಪಟ್ಟಣದಲ್ಲಿ ಪುರಸಭೆಯ ವತಿಯಿಂದ ನಾಲ್ಕು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಬೇಸಿಗೆ ಆರಂಭಕ್ಕೆ ಮೊದಲು ತುಂಗಭದ್ರಾ ಎಡದಂಡೆ ನಾಲೆಯ ಕಾಲುವೆ ಮೂಲಕ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ರಬ್ಬಣಕಲ್ ಕೆರೆ ಭರ್ತಿ ಮಾಡಿಲ್ಲ. ಇದಕ್ಕೆ ಪುರಸಭೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ.

ಲಿಂಗಸುಗೂರು ತಾಲ್ಲೂಕಿನ ಹುನಕುಂಟಿ ಗ್ರಾಮದಲ್ಲಿ ಜನ ಕೈಗಾಡಿ ಹಾಗೂ ಹೊತ್ತುಕೊಂಡು ನೀರು ಒಯ್ಯುತ್ತಿರುವುದು
ಲಿಂಗಸುಗೂರು ತಾಲ್ಲೂಕಿನ ಹುನಕುಂಟಿ ಗ್ರಾಮದಲ್ಲಿ ಜನ ಕೈಗಾಡಿ ಹಾಗೂ ಹೊತ್ತುಕೊಂಡು ನೀರು ಒಯ್ಯುತ್ತಿರುವುದು

ಕಾತರಕಿ ಸಮೀಪದ ತುಂಗಭದ್ರಾ ನದಿಯಲ್ಲಿ ನೀರು ಹರಿದರೆ ಮಾತ್ರ ಅಲ್ಲಿನ ಜಾಕ್ವೆಲ್ ಬಳಿ ಇರುವ ಕೊಳವೆ ಬಾವಿಗಳಿಂದ ನೀರು ಪೂರೈಸಲು ಸಾಧ್ಯ. ಮಳೆ ಕೊರತೆಯಿಂದ ನದಿ ನೀರಿನ ಕೊರತೆಯೂ ಕುಡಿಯುವ ನೀರು ಪೂರೈಕೆಗೆ ಸವಾಲಾಗಿ ಪರಿಣಮಿಸಿದೆ.


ಹಲವು ವಾರ್ಡ್ ಗಳಲ್ಲಿ ಪೈಪ್ ಲೈನ್ ದುರಸ್ತಿಗೆ ಕಾದಿಗೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಜಾಲಹಳ್ಳಿ: ಅಂತರ್ಜಲ ಮಟ್ಟ ಕುಸಿತ

ಲಿಂಗಸುಗೂರು ತಾಲ್ಲೂಕಿನ ಹುನಕುಂಟಿ ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ನೀರು ಒಯ್ಯುತ್ತಿರುವ ಗ್ರಾಮಸ್ಥರು
ಲಿಂಗಸುಗೂರು ತಾಲ್ಲೂಕಿನ ಹುನಕುಂಟಿ ಗ್ರಾಮದಲ್ಲಿ ಎತ್ತಿನ ಬಂಡಿಯಲ್ಲಿ ನೀರು ಒಯ್ಯುತ್ತಿರುವ ಗ್ರಾಮಸ್ಥರು

ಜಾಲಹಳ್ಳಿ: ಪಟ್ಟಣದಲ್ಲಿ ಬಹುತೇಕ ವಾರ್ಡ್ ಗಳಿಗೆ ಕಿರು ನೀರು ಸರಬರಾಜು ಘಟಕಗಳ ಮೂಲಕ ನೀರು ಪೂರೈಸಲಾಗುತ್ತಿದೆ.


ಅದರೆ, ಪಟ್ಟಣದ ಜನತಾ ಕಾಲೊನಿ, ಗಂಗಾನಗರ, ಅಪ್ಪ ಈರಪ್ಪ ಕಾಲೊನಿ, ಶಾಹೀನ್ ಕಾಲೊನಿ, ಜಯಶಾಂತಲಿಂಗೇಶ್ವರ ಕಾಲೊನಿಯಲ್ಲಿರುವ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ನೀರು ಸರಬರಾಜು ಮಾಡುವುದು ಕಷ್ಟವಾಗಿದೆ ಎಂದು ಗ್ರಾ.ಪಂ ಸಿಬ್ಬಂದಿ ಹೇಳುತ್ತಾರೆ.


ಕೆಲವು ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಇರುವುದರಿಂದ ವಾರ್ಡ್ ನ ಸದಸ್ಯರು ಟ್ಯಾಂಕರ್ ಮೂಲಕ ಕಳೆದ 15 ದಿನಗಳಿಂದ ನೀರು ಸರಬರಾಜು ಮಾಡುತ್ತಿದ್ದಾರೆ. ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ. ಜಿಲ್ಲಾಡಳಿತ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡುತ್ತಾರೆ.

ಸಿಂಧನೂರಲ್ಲಿ ಕುಡಿಯುವ ನೀರು ಸಾಗಿಸುತ್ತಿರುವ ಖಾಸಗಿ ಟ್ಯಾಂಕರ್‌
ಸಿಂಧನೂರಲ್ಲಿ ಕುಡಿಯುವ ನೀರು ಸಾಗಿಸುತ್ತಿರುವ ಖಾಸಗಿ ಟ್ಯಾಂಕರ್‌

ಕೆರೆಗಳು ಭರ್ತಿ : ತಪ್ಪಿದ ನೀರಿನ ತೊಂದರೆ

ಸಿರವಾರ : ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಗಳು ತುಂಗಭದ್ರಾ ನೀರಾವರಿ ಪ್ರದೇಶದಲ್ಲಿರುವುದರಿಂದ ಬಹುತೇಕ ಕ್ಯಾಂಪ್, ಗ್ರಾಮಗಳು ಕೆರೆಗಳನ್ನು ಅವಲಂಬಿಸಿವೆ.ನ್ನು ಭರ್ತಿ ಮಾಡಿಕೊಂಡಿದೆ.

ಕೆರೆಗಳ ಹೊರತಾಗಿವೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೊಳವೆ ಬಾವಿಗಳ ಬೋರ್ ವೆಲ್ ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಬೋರ್‌ವೆಲ್‌ ವ್ಯವಸ್ಥೆ ಇರುವ ಕೆಲ ಗ್ರಾಮಗಳಲ್ಲಿ ದಿನ ಬಿಟ್ಟು ದಿನ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಸಹಕಾರ: ಡಿ.ಎಚ್‌.ಕಂಬಳಿ, ಬಾವಸಲಿ, ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಪ್ರಕಾಶ ಮಸ್ಕಿ, ಮಂಜುನಾಥ ಬಳ್ಳಾರಿ, ಪಿ.ಕೃಷ್ಣ ಸಿರವಾರ, ಅಲಿಬಾಬಾ

ಮಸ್ಕಿ ಪಟ್ಟಣದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ
ಮಸ್ಕಿ ಪಟ್ಟಣದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT