ಸೋಮವಾರ, ಜೂನ್ 21, 2021
29 °C
ದೇವಿಕ್ಯಾಂಪ್‌: ಕೊಳಚೆ ತುಂಬಿ ನಿಂತ ಜಲಮೂಲ: ನಿವಾಸಿಗಳಿಗೆ ಕಲುಷಿತ ನೀರೇ ಗತಿ!

ಕೇಳುತಿದೆ ಕೆರೆಗಳ ಒಡಲ ಆರ್ತನಾದ

ಡಿ.ಎಚ್.ಕಂಬಳಿ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ತಾಲ್ಲೂಕು ಕೇಂದ್ರದಿಂದ 10 ಕಿ.ಮೀ ಅಂತರದಲ್ಲಿರುವ ದೇವಿಕ್ಯಾಂಪ್ ಕೆರೆ ದಿನದಿಂದ ದಿನಕ್ಕೆ ಮಲಿನಗೊಳ್ಳುತ್ತಿದೆ.

‘ಶುದ್ದವಾಗಿದ್ದ ನೀರು ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದ ಕಲುಷಿತಗೊಳ್ಳುತ್ತಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಈ ಮೊದಲು ದೇವಿಕ್ಯಾಂಪ್‍ನಲ್ಲಿರುವ ಎರಡು ಕೆರೆಗಳೂ ಚೆನ್ನಾಗಿದ್ದವು. ಪಂಚಾಯಿತಿಯಿಂದ ಹಣ ಖರ್ಚು ಮಾಡಿ ಕೆರೆ ದುರಸ್ತಿ ಮಾಡಿಸಲಾಗಿತ್ತು. ಆದರೆ, ಮಳೆ ನೀರು ಮತ್ತು ಅಕ್ಕಪಕ್ಕದ ಚರಂಡಿ ನೀರು ಹರಿಯಲು ಪ್ರತ್ಯೇಕ ಮಾರ್ಗವಿಲ್ಲದೆ ಕೆರೆಗಳಿಗೆ ಸೇರಿ ಮಲಿನವಾಗಿದೆ.

ಕೊಳಚೆ ನೀರಿನ ದುರ್ವಾಸನೆ ಸಹಿಸಲು ಆಗುವುದಿಲ್ಲ. ಆದಾಗ್ಯೂ ಅದೇ ನೀರನ್ನೇ ಸೇವಿಸುವ ಅನಿವಾರ್ಯತೆ ಇದೆ ಎಂದು ಕ್ಯಾಂಪ್‌ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಪಂಚಾಯಿತಿ ಅಧಿಕಾರಿ ನಿಷ್ಕಾಳಜಿ ವಹಿಸಿದ ಕಾರಣ ಎರಡು ಕೆರೆಗಳಲ್ಲಿ ಈಗಾಗಲೇ ಒಂದು ಕೆರೆಯಲ್ಲಿ ಕೊಳಚೆ ನೀರು ಸಂಗ್ರಹವಾಗಿ ಉಪಯೋಗಕ್ಕೆ ಬಾರದಂತಾಗಿದೆ.

ಕೆರೆಯಲ್ಲಿ ಘನತ್ಯಾಜ್ಯ ಬಿದ್ದು, ನೀರೆಲ್ಲ ತೀರಾ ಮಲಿನಗೊಂಡು ದನಗಳ ಈಜುಕೊಳವಾಗಿದೆ. ಅಲ್ಲದೆ ಕೆರೆ ಸುತ್ತಲೂ ಜಾಲಿಗಿಡಗಳು ಬೆಳೆದು ನಿಂತಿರುವುದರಿಂದ ಹಾವು, ಚೇಳುಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ಕೆರೆ ಇದ್ದರೂ ಉಪಯೋಗ ಇಲ್ಲದಂತಾಗಿದೆ. ಮತ್ತೊಂದು ಕೆರೆಗೆ ಕಾಲುವೆ ಮೂಲಕ ನೀರು ತುಂಬಿಸಲಾಗಿದೆ. ನೀರು ಕಲುಷಿತಗೊಂಡು ಕಂದು ಬಣ್ಣಕ್ಕೆ ತಿರುಗಿದೆ. ಈ ಎರಡೂ ಕೆರೆಗಳ ದುಸ್ಥಿತಿಗೆ ಬೇಸತ್ತು ಕ್ಯಾಪ್‌ನ ಜನತೆ ಶುದ್ದ ಕುಡಿಯುವ ನೀರಿಗಾಗಿ ಪ್ರತಿನಿತ್ಯ ಪರದಾಡುವ ಮೂಲಕ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕೆರೆಯ ಸ್ಥಿತಿ ಏಕೆ ಹೀಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರ ಪಿಡಿಒ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಇದಕ್ಕೆ ಜನರೇ ಕಾರಣ. ಪ್ಲಾಸ್ಟಿಕ್, ಕಸವನ್ನು ಕೆರೆಗೆ ಹಾಕುವುದರಿಂದಲೇ ಈ ಸಮಸ್ಯೆಯಾಗುತ್ತಿದೆ’ ಎಂದು ಹೇಳುತ್ತಾರೆ.

ಆದರೆ ‘ಅಧಿಕಾರಿಗಳೇ ಕೆರೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಆದ್ದರಿಂದಲೇ ಕೆರೆ ಅಸ್ವಚ್ಛತೆಯಿಂದ ಕೂಡಿ, ಸಂಗ್ರಹವಾದ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ನೀರು ಕುಡಿದು ವಾಂತಿ, ಬೇಧಿ, ಹೊಟ್ಟೆನೋವು ಸಮಸ್ಯೆಯಿಂದ ಬಳಲುವಂತಾಗಿದೆ. ಶುದ್ದ ಕುಡಿಯುವ ನೀರು ಬೇಕಾದರೆ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಇದೆ’ ಎಂದು ಕ್ಯಾಂಪ್‌ನ ಮೂರ್ತಿ ನಾಯ್ಕ್ ಮತ್ತು ಲಿಂಗಪ್ಪ ಭಂಡಾರಿ ದೂರುತ್ತಾರೆ.

ಅಧಿಕಾರಿಗಳು ಚಿಕ್ಕಪುಟ್ಟ ದುರಸ್ತಿ ಕಾರ್ಯ ಮಾಡಿ ಕೈತೊಳೆದುಕೊಳ್ಳುವುದು ಬಿಟ್ಟು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕೆರೆಯ ಸುತ್ತ ತಂತಿ ಬೇಲಿ ಹಾಕಿ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆತಡೆ ಮಾಡುವುದಲ್ಲದೆ ದೇವರಗುಡಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು