ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಉದ್ಯೋಗ ಖಾತರಿ ಯೋಜನೆಗೆ ಒತ್ತು

ಒಂದು ತಿಂಗಳಲ್ಲಿ 1.6 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನೆ
Last Updated 6 ಮೇ 2020, 20:00 IST
ಅಕ್ಷರ ಗಾತ್ರ

ರಾಯಚೂರು: ಲಾಕ್‌ಡೌನ್‌ ಇದ್ದರೂ ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಏಪ್ರಿಲ್‌ನಲ್ಲಿ ಉದ್ಯೋಗ ವಹಿಸುವ ಕಾರ್ಯ ಆರಂಭಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದ ಮೊದಲ ತಿಂಗಳು 1.60 ಲಕ್ಷ ಮಾನವ ದಿನಗಳ ಉದ್ಯೋಗ ಸೃಜನೆಯಾಗಿದೆ.

ಕೆರೆಗಳ ಹೂಳೆತ್ತುವುದು, ಕಲ್ಯಾಣಿಗಳ ಮರುಪೂರಣ, ಜಮೀನುಗಳಿಗೆ ಬದು ನಿರ್ಮಾಣ, ಗ್ರಾಮಗಳ ಸ್ವಚ್ಛತೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶಾಲೆಗಳಿಗೆ ಆವರಣ ಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜನವರಿಗೆ ವಹಿಸುತ್ತಿದ್ದಾರೆ. ಉದ್ಯೋಗ ಬೇಡಿಕೆಗೆ ತಕ್ಕಂತೆ ಕೆಲವು ಪಂಚಾಯಿತಿಗಳಲ್ಲಿ ಇನ್ನೂ ಉದ್ಯೋಗ ವಹಿಸಲು ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಬೇರೆ ಜವಾಬ್ದಾರಿ ಕೂಡಾ ವಹಿಸಿರುವುದು, ಖಾತರಿ ಯೋಜನೆ ತ್ವರಿತಗೊಳಿಸಲು ಅಡ್ಡಿಯಾಗಿದೆ.

ಮಾನ್ವಿ ತಾಲ್ಲೂಕಿನಲ್ಲಿ ಏಪ್ರಿಲ್‌ ತಿಂಗಳು ಅತಿಹೆಚ್ಚು ಮಾನವ ದಿನಗಳ ಉದ್ಯೋಗ ಸೃಜನೆಯಾಗಿದೆ. ರಾಯಚೂರು ತಾಲ್ಲೂಕಿನಲ್ಲಿ ಅತಿಕಡಿಮೆ ಉದ್ಯೋಗ ಸೃಜನೆಯಾಗಿದ್ದು, ಬಹುತೇಕ ಗ್ರಾಮಗಳು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಗಡಿಗಳಿಗೆ ಹೊಂದಿಕೊಂಡಿವೆ. ಇದರಿಂದಾಗಿ ಗಡಿಗಳಲ್ಲಿ ನಿಗಾ ವಹಿಸುವ ಕಾರ್ಯಕ್ಕೆ ಮಹತ್ವ ನೀಡಲಾಗಿದ್ದು, ಉದ್ಯೋಗ ಖಾತರಿ ಯೋಜನೆಯು ಸದ್ಯಕ್ಕೆ ಮಂದಗತಿಯಲ್ಲಿ ಸಾಗುತ್ತಿದೆ.

ಈ ವರ್ಷ ಜಿಲ್ಲೆಯಲ್ಲಿ ಹೊಸದಾಗಿ ಒಟ್ಟು 2,157 ಜಾಬ್‌ಕಾರ್ಡ್‌ಗಳನ್ನು ಮಾಡಿಕೊಟ್ಟಿದ್ದು, ದೇವದುರ್ಗದಲ್ಲಿ 606, ಲಿಂಗಸುಗೂರಿನಲ್ಲಿ 275, ಮಾನ್ವಿಯಲ್ಲಿ 652, ರಾಯಚೂರಿನಲ್ಲಿ 389 ಹಾಗೂ ಸಿಂಧನೂರಿನಲ್ಲಿ 235 ಜಾಬ್‌ಕಾರ್ಡ್‌ಗಳನ್ನು ಏಪ್ರಿಲ್‌ನಲ್ಲಿ ಸಿದ್ಧಪಡಿಸಿ ಕೊಡಲಾಗಿದೆ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಿಂದ ಇದುವರೆಗೂ ಒಟ್ಟು 2,09,426 ಜಾಬ್‌ಕಾರ್ಡ್‌ಗಳನ್ನು ನೀಡಲಾಗಿದೆ. ಅದರಲ್ಲಿ ಶೇ 98 ರಷ್ಟು ಕಾರ್ಡ್‌ಗಳು ಸಕ್ರಿಯವಾಗಿವೆ.

‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 50 ಸಾವಿರದಷ್ಟು ಜನರು ವಾಪಸ್‌ ಬಂದಿದ್ದಾರೆ. ಅದರಲ್ಲಿ ಮಕ್ಕಳನ್ನು ಹೊರತುಪಡಿಸಿ, ಸುಮಾರು 20 ಸಾವಿರದಷ್ಟು ಕಾರ್ಮಿಕರು ಇರಬಹುದು. ಈಗಾಗಲೇ ಬಹುತೇಕ ಜನರಿಗೆ ಜಾಬ್‌ ಕಾರ್ಡ್‌ ಇದೆ. ಇಲ್ಲದಿದ್ದರೆ ಮಾಡಿಕೊಡಲು ಪಂಚಾಯಿತಿಗೆ ಸೂಚಿಸಲಾಗಿದೆ. ಉದ್ಯೋಗದ ಬೇಡಿಕೆ ಸಲ್ಲಿಸಿದವರಿಗೆ ಉದ್ಯೋಗ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT