ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ಮಳೆಗಾಲ ಆರಂಭ; ಎಚ್ಚೆತ್ತ ನಗರಸಭೆ

ಚರಂಡಿ, ರಾಜಕಾಲುವೆಗಳ ಮೇಲಿನ ಮನೆ, ಅಂಗಡಿ ಗುರುತಿಸಿ ಕ್ರಮ ಕೈಗೊಳ್ಳಲು ಆಗ್ರಹ
Published 22 ಮೇ 2024, 6:41 IST
Last Updated 22 ಮೇ 2024, 6:41 IST
ಅಕ್ಷರ ಗಾತ್ರ

ರಾಯಚೂರು: ಮಳೆಯಿಂದಾಗಿ ರಾಯಚೂರು ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ. ನಗರಸಭೆಯಿಂದ ಅಲ್ಲಲ್ಲಿ ಚರಂಡಿ, ರಾಜಕಾಳುವೆಗಳನ್ನು ಸ್ವಚ್ಛಗೊಳಿಸುವ ಮೂಲಕ ಮಳೆಗಾಲಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮಳೆಗಾಲದಲ್ಲಿ ಪ್ರತಿ ವರ್ಷ ಸಿಯಾತಲಾಬ್‌, ನೀರಬಾವಿ ಕುಂಟಾ, ಜಲಾಲ್‌ ನಗರ, ದೇವಿನಗರ, ಕಾಕನಕೆರೆ ಸೇರಿದಂತೆ ವಿವಿಧ ತಗ್ಗು ಪ್ರದೇಶಗಳು ಜಲಾವೃತವಾಗುತ್ತವೆ. ಮನೆಗಳಿಗೆ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ನಾಗರಿಕರು ರಾತ್ರಿವೇಳೆ ಮಳೆ ನೀರು ಹೊರ ಹಾಕುವುದೇ ಒಂದು ಕೆಲಸವಾಗಿ ಬಿಡುತ್ತದೆ. ನಗರಸಭೆಯಿಂದ ಪ್ರತಿ ವರ್ಷ ಮಳೆಗಾಲ ಆರಂಭವಾದಾಗ ಚರಂಡಿಗಳ ಹೂಳು ಎತ್ತಲಾಗುತ್ತಿತ್ತು. ಈ ಬಾರಿ ಆಡಳತ ಮಂಡಳಿ ಎಚ್ಚೆತ್ತು ಹೂಳು ತೆಗೆಯಲು ಮುಂದಾಗಿದೆ.

ಮಳೆಗಾಲದ ಪೂರ್ವದಲ್ಲಿಯೇ ಗಟಾರಗಳ, ರಾಜಕಾಲುವೆಗಳ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿದರೆ ಸಮಸ್ಯೆ ಬಗೆಹರಿಸಬಹುದು. ತಗ್ಗು ಪ್ರದೇಶಗಳಲ್ಲಿ ಸರ್ಕಾರಿ ಶಾಲೆ, ಸಮುದಾಯ ಭವನಗಳಲ್ಲಿ ಪ್ರತಿ ವರ್ಷ ತಾತ್ಕಾಲಿಕ ಗಂಜಿ ಕೇಂದ್ರ ತೆರೆದು ಆಹಾರ ಒದಗಿಸುವುದು ಸಂತ್ರಸ್ತರಿಗೆ ₹10,000, ₹20,000 ಪರಿಹಾರ ನೀಡಿ ಕೇವಲ ತಾತ್ಕಾಲಿಕ ಶಮನ ಮಾಡಲಾಗುತ್ತಿದೆ.

‘ಮಳೆಯಿಂದ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ ಹಾನಿ ತಡೆಯುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ. ಚರಂಡಿ ಹಾಗೂ ರಾಜಕಾಲುವೆಗಳ ಮೇಲೆ ಮನೆ, ಅಂಗಡಿಗಳನ್ನು ನಿರ್ಮಾಣ ಮಾಡಿದ್ದನ್ನು ಗುರುತಿಸಿ ಅಕ್ರಮ ಕಟ್ಟಡ ತೆರವು ಮಾಡಿದರೆ ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎನ್ನುವುದು ನೀರಬಾವಿಕುಂಟಾ ಬಡಾವಣೆಯ ನಿವಾಸಿ ತಾಯಪ್ಪ, ಹನುಮಂತಪ್ಪ ಹೇಳುತ್ತಾರೆ.

ನಗರದ ಎಲ್‌ಬಿಎಸ್ ನಗರ, ಸಿಯಾತಲಾಬ್, ಅಶೋಕ ಡಿಪೊ, ಜಹೀರಾಬಾದ್ ಸೇರಿದಂತೆ ಹಲವೆಡೆ ಚರಂಡಿ ಹಾಗೂ ರಾಜಕಾಲುವೆಗಳ ಮೇಲೆಯೇ ನಿರ್ಮಿಸಿದ ಕಟ್ಟಡಗಳಿಂದಾಗಿ ಹೂಳು ತೆಗೆಯಲು ಆಗುತ್ತಿಲ್ಲ. ನಗರದ ಹಲವು ಕಡೆ ರಸ್ತೆ ಬದಿಯಲ್ಲಿ ಗಟಾರಗಳೇ ಇಲ್ಲ. ಇದ್ದ ಚರಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಮಳೆ ನೀರು ಚರಂಡಿಗೆ ಹೋಗದೇ ರಸ್ತೆ ಮೇಲೆ ನಿಲ್ಲುತ್ತಿದೆ.

ಶಂಶಾಲಂ ದರ್ಗಾದಿಂದ ಹೊಸ ಹತ್ತಿ ಮಾರುಕಟ್ಟೆಗೆ ಹೋಗುವ ಹೈದರಾಬಾದ್ ಮುಖ್ಯ ರಸ್ತೆಯಲ್ಲಿ ಸಾಧಾರಣ ಮಳೆ ಬಂದರೂ ಎರಡು ಬದಿಯಲ್ಲಿ ನೀರು ನಿಂತಿರುತ್ತದೆ. ಪಾದಚಾರಿಗಳಿಗೆ ನಡೆದಾಡಲು ಜಾಗವಿಲ್ಲದೇ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ.

ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯಿಂದ ಕನಿಷ್ಟ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿಲ್ಲ ಎಂದು ಎಲ್ ಬಿಎಸ್ ನಗರದ ನಿವಾಸಿ ಸಾದಿಕ್ ಪಾಶ, ರಾಜಶೇಖರ, ಸುರೇಶ ದೂರುತ್ತಾರೆ.

ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಹಲವು ಸಂಘಟನೆಗಳು ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿವೆ. ಆದರೆ, ಒತ್ತುವರಿಗಳನ್ನು ತೆರವುಗೊಳಿಸುವ ಕೆಲಸವನ್ನು ನಗರಸಭೆ ಮಾಡುತ್ತಿಲ್ಲ. ರಾಜಕಾಲುವೆಗಳ ಒತ್ತುವರಿಯ ಪರಿಣಾಮದಿಂದ ಮಳೆಯ ನೀರು ಮನೆಗಳಿಗೆ ನುಗ್ಗಿ ಹಾನಿ ಉಂಟು ಮಾಡುತ್ತಿದೆ’ ಎನ್ನುವುದು ಜನರ ಅಳಲು.

‘ಒತ್ತುವರಿ ಪರಿಶೀಲಿಸಿ ಕ್ರಮ’

‘ನಗರಸಭೆಗೆ ಸೇರಿದ ಜೆಸಿಬಿ ಯಂತ್ರಗಳಿಂದ ಬಿಟ್ಟುಬಿಡದೆ ಕೆಲಸ ಮಾಡುತ್ತಿವೆ. ಸಿಯತಲಾಬ್ ನೀರಭಾವಿಕುಂಟಾ ಬಡಾವಣೆಯಲ್ಲಿ ಮಳೆ ನೀರು ನುಗ್ಗದಂತೆ ಕ್ರಮ ವಹಿಸಲಾಗುತ್ತಿದೆ. ಮಳೆಯಿಂದ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು. ರಾಜಕಾಲುವೆ ಚರಂಡಿ ಒತ್ತುವರಿಯ ಬಗ್ಗೆ ಪರಿಶೀಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭೆಯ ಪೌರಾಯುಕ್ತ ಚಲಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT