ಗುರುವಾರ , ಏಪ್ರಿಲ್ 15, 2021
24 °C
ಜನಸಂಖ್ಯಾ ದಿನಾಚರಣೆ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಕೆ.ಎಸ್.ನಸೀರ ಹೇಳಿಕೆ

ಜನಸಂಖ್ಯಾ ನಿಯಂತ್ರಣ ಕ್ರಮ ಎಲ್ಲರೂ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜನಸಂಖ್ಯಾ ನಿಯಂತ್ರಣದ ಕ್ರಮಗಳನ್ನು ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಎಂ.ಕೆ.ಎಸ್.ನಸೀರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜನಸಂಖ್ಯಾ ದಿನಾಚರಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವದ ಜನಸಂಖ್ಯೆ 500 ಕೋಟಿಗೆ ತಲುಪಿದಾಗಿನಿಂದ ವಿಶ್ವ ಜನಸಂಖ್ಯಾ ದಿನ ಆಚರಿಸಲು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್‌ ತೀರ್ಮಾನಿಸಿದೆ. 1987ರ ಜುಲೈ 11ರಂದು ಜನಸಂಖ್ಯಾ ದಿನಾಚರಣೆ ಆರಂಭಿಸಲಾಗಿದೆ. ಜನಸಂಖ್ಯಾ ಹೆಚ್ಚಳದಿಂದಾಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಸಲು ಪ್ರತಿವರ್ಷ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು.

ದೇಶದಲ್ಲಿ ಪ್ರತಿ ನಿಮಿಷಕ್ಕೆ 29 ಮಕ್ಕಳು, ಗಂಟೆಗೆ 1,768, ದಿನಕ್ಕೆ 42,434 ಹಾಗೂ ತಿಂಗಳಿಗೆ 1.55 ಕೋಟಿ ಮಕ್ಕಳು ಜನಿಸುತ್ತಿದ್ದು, ಜನಸಂಖ್ಯಾ ಸ್ಪೋಟ ಹೆಚ್ಚಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಜನಸಂಖ್ಯೆ ತಡೆಗಟ್ಟಲು ಇರುವ ಮಾರ್ಗಗಳನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.

ಮದುವೆ ಮಾಡಿಕೊಳ್ಳುವ ವರನಿಗೆ 21 ಹಾಗೂ ವಧುವಿಗೆ 18 ವರ್ಷ ತುಂಬಿರಬೇಕು. ಇಬ್ಬರ ನಡುವೆ 4 ವರ್ಷದ ಅಂತರ ಇರಬೇಕು. ಯುವಜನತೆಯ ಸಬಲೀಕರಣ ಮತ್ತು ಶಿಕ್ಷಣ ಇಲಾಖೆಯಿಂದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಅಂದಾಗ ಮಾತ್ರ ಜನಸಂಖ್ಯೆ ತಡೆಗಟ್ಟಲು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೆ.ನಾಗರಾಜ, ಆರ್‌ಸಿಎಚ್‌ ಅಧಿಕಾರಿ ಡಾ.ಕೆ.ವಿಜಯ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಸುರೇಂದ್ರಬಾಬು, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕೆ.ವಿಜಯಾ, ತಾಲ್ಲೂಕು ಆರೋಗ್ಯ ಅಧಿಕಾರಿ ಮಹ್ಮದ ಶಾಕೀರ ಇದ್ದರು. ವಿವಿಧ ಕಾಲೇಜಿನಗಳ ವಿದ್ಯಾರ್ಥಿಗಳು ಇದ್ದರು.

ಅಭಿವೃದ್ಧಿಯ ವೇಗಕ್ಕೆ ಮಾರಕ: ದೇಶದ ಅಭಿವೃದ್ಧಿಯ ವೇಗಕ್ಕೆ ಜನಸಂಖ್ಯಾ ಬೆಳವಣಿಗೆ ಮಾರಕವಾಗಿದೆ ಎಂದು ಎಲ್‌ವಿಡಿ ಕಾಲೇಜಿನ ಉಪನ್ಯಾಸಕ ಚನ್ನಮಲ್ಲಿಕಾರ್ಜುನ ಹೇಳಿದರು.

ತಾರಾನಾಥ ಶಿಕ್ಷಣ ಸಂಸ್ಥೆಯ ಬಿಆರ್‌ಬಿ ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

1989ರಿಂದ ಜನಸಂಖ್ಯಾ ದಿನಾಚರಣೆ ಆರಚಣೆ ಮಾಡಲಾಗುತ್ತಿದೆ. 1947ರಿಂದ ಭಾರತ ಸಾಕಷ್ಟು ಅಭಿವೃದ್ಧಿ ಹೊಂದುತ್ತಾ ಬಂದಿದೆ. ಆದರೆ, ಜನಸಂಖ್ಯಾ ಬೆಳವಣಿಗೆ ಅಭಿವೃದ್ಧಿಯ ವೇಗಕ್ಕೆ ಮಾರಕವಾಗಿದೆ ಎಂದರು.

1960ರಿಂದ 1974ರ ಅವಧಿಯಲ್ಲಿ ಪ್ರಪಂಚದ ಜನಸಂಖ್ಯೆ 400 ಕೋಟಿ ಇತ್ತು. 1987ಕ್ಕೆ 500 ಕೋಟಿಗೆ ಏರಿತು. ಈಗ 771 ಕೋಟಿಯಾಗಿದೆ. ಜನಸಂಖ್ಯೆ ದ್ವಿಗುಣಗೊಳ್ಳುತ್ತಿರುವುದು ಮನುಕುಲಕ್ಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ತಿಳಿಸಿದರು.

1901ರಲ್ಲಿ ದೇಶದ ಜನಸಂಖ್ಯೆ 23 ಕೋಟಿಯಿತ್ತು, 1956ಕ್ಕೆ 36 ಆಗಿತ್ತು. 2011ರ ಜನಗಣತಿ ಪ್ರಕಾರ 121 ಕೋಟಿಗೆ ಏರಿಕೆಯಾಗಿತ್ತು. ಜನಸಂಖ್ಯೆ ಹೆಚ್ಚಿದಂತೆ ಭೂಮಿ ಹೆಚ್ಚಳವಾಗಲ್ಲ. ಇದು ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗಲಿದ್ದು, ಜನಸಂಖ್ಯೆ ನಿಯಂತ್ರಣ ಮಹತ್ವದ್ದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಬಿ.ದೇವರೆಡ್ಡಿ ಮಾತನಾಡಿ, ಜನಸಂಖ್ಯಾ ಸ್ಪೋಟದಿಂದ ಅಧಿಕ ಪ್ರಮಾಣದ ವಲಸೆ, ಶಿಶುಮರಣ ದರ ಹಾಗೂ ಕೊಳಚೆ ಪ್ರದೇಶಗಳು ಹೆಚ್ಚುತ್ತಿವೆ ಎಂದರು.

ಕನ್ನಡ ಉಪನ್ಯಾಸಕ ಚನ್ನಬಸಯ್ಯ, ಎನ್.ಮಲ್ಲಿಕಾರ್ಜುನ, ಎಸ್.ಯು.ಬಸವರಾಜ ಇದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ತಿಪ್ಪಣ್ಣ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.