ಬುಧವಾರ, ಜನವರಿ 26, 2022
25 °C
ಮೂರು ಕೃಷಿ ಕಾಯ್ದೆ ಸಂಸತ್ತಿನಲ್ಲಿ ರದ್ದುಗೊಳಿಸಲು ಆಗ್ರಹ

ರಾಯಚೂರು: ಕೇಂದ್ರದ ವಿರುದ್ಧ ರೈತರಿಂದ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿ ರದ್ದುಗೊಳಿಸಬೇಕು. ಸಮಗ್ರ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಬೆಲೆ ನಿಗದಿ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಹೋರಾಟ ವೇದಿಕೆ, ಸಂಯುಕ್ತ ಕಿಸಾನ್‌ ಮೋರ್ಚಾದಿಂದ ರೈತರು ಶುಕ್ರವಾರ ರಸ್ತೆ ತಡೆ ನಡೆಸಿದರು.

ನಗರ ಹೊರವಲಯದ ಸಾತ್‌ಮೈಲಿನಲ್ಲಿ ಅರ್ಧಗಂಟೆಗೂ ಹೆಚ್ಚು ರಾಜ್ಯಹೆದ್ದಾರಿಯಲ್ಲಿ ರೈತರು ಕುಳಿತಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು.

ಕನಿಷ್ಠ ಬೆಂಬಲ ಬೆಲೆಗೆ ಖಾತರಿ ಆಯ್ದೆ ರೂಪಿಸಬೇಕು. ಎಲ್ಲ ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ತೀರ್ಮಾನವಾಗಬೇಕು. ವಿದ್ಯುತ್‌ ತಿದ್ದುಪಡಿ ಮಸೂದೆ ವಾಪಸ್‌ ಪಡೆಯಬೇಕು. ಲಿಖಿಂಪುರಖೇರಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯ ತಂದೆ ಮತ್ತು ಘಟನೆಯ ಮೂಲ ಸೂತ್ರಧಾರನಾದ ಅಜಯ ಮಿತ್ರ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಿ, ಬಂಧಿಸಬೇಕು. ಸತತ ಒಂದು ವರ್ಷದ ಚಳವಳಿಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ 700 ರೈತರ ಸ್ಮಾರಕಗಳನ್ನು ನಿರ್ಮಿಸಲು ದೆಹಲಿಯ ಸಿಂಘು ಗಡಿಯಲ್ಲಿ ಭೂಮಿಯನ್ನು ಮೀಸಲಿಡಬೇಕು ಮತ್ತು ಪ್ರತಿಯೊಂದು ಕುಟುಂಬಗಳಿಗೆ ₹50 ಲಕ್ಷ ಪರಿಹಾರ ನೀಡಬೇಕು ಎಂದರು.

ಪಂಜಾಬ್‌, ಹರಿಯಾಣ, ಉತ್ತರ ‍ಪ್ರದೇಶ ಸೇರಿದಂತೆ ದೇಶದಾದ್ಯಂತ ಹೋರಾಟ ನಿರರ ರೈತರ ಮೇಲೆ ಹಾಕಿರುವ ಸಾವಿರಾರು ಪ್ರಕರಣಗಳನ್ನು ಹಿಂಪಡೆಯಬೇಕು. ಅಕಾಲಿಕ ಮಳೆಯಿಂದ ಹಾನಿಯಾದ ಬೆಳೆಗಳಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿ ತೊಗರಿಗೆ ರಾಜ್ಯ ಸರ್ಕಾರವು ₹300 ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಕಡ್ಡಾಯವಾಗಿ ಸರ್ಕಾರಿ ಕೃಷಿ ಖರೀದಿ ಕೇಂದ್ರಗಳಲ್ಲಿಯೇ ಎಲ್ಲಾ ಕೃಷಿ ಉತ್ಪನ್ನಗಳನ್ನು ಖರಿದೀಸಬೇಕು. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಭಾಗದಲ್ಲಿರುವ ಎಲ್ಲಾ ಅಕ್ರಮ ಪೈಪ್‌ಗಳನ್ನು ತೆರವುಗೊಳಿಸಬೇಕು. ಅಕ್ರಮ ನೀರು ಬಳಕೆ ಮಾಡಿಕೊಳ್ಳುವವರ ಮೇಲೆ ಕ್ರಿಮಿನಲ್‌ ಕೇಸ್‌ ದಾಖಲಿಸಿ ಬಂಧಿಸಬೇಕು ಎಂದರು.

ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಕೆ.ಜಿ.ವೀರೇಶ, ಡಿ.ಎಚ್‌.ಪೂಜಾರ್‌, ಖಾಜಾ ಅಸ್ಲಂ, ಅಮರಣ್ಣ ಗುಡಿಹಾಳ, ಸೂಗೂರಯ್ಯ ಆರ್‌.ಎಸ್‌.ಮಠ, ಮಲ್ಲನಗೌಡ, ಮರೆಪ್ಪ ಹರವಿ, ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಆಂಜನೇಯ ಕುರುಬದೊಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು