ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭೂಗಳ್ಳರ ವಿರುದ್ಧ ಕ್ರಿಮಿನಲ್‍ ಪ್ರಕರಣ ದಾಖಲಿಸಿ: ಮಾನಸಯ್ಯ

Published : 23 ಸೆಪ್ಟೆಂಬರ್ 2024, 14:30 IST
Last Updated : 23 ಸೆಪ್ಟೆಂಬರ್ 2024, 14:30 IST
ಫಾಲೋ ಮಾಡಿ
Comments

ಲಿಂಗಸುಗೂರು: ‘ತಾಲ್ಲೂಕಿನ ಸುಣಕಲ್ಲ ಬಳಿ ಅಲ್ಪಸ್ವಲ್ಪ ಜಮೀನು ಖರೀದಿಸಿ ಕಂದಾಯ, ಅರಣ್ಯ ಭೂಮಿ ಕಬಳಿಕೆ ಮಾಡಿದ ಮೆ. ಆರ್‌.ಬಿ ಸುಗರ್ಸ್‍ ಕಂಪನಿ ನಿರ್ದೇಶಕ ಮಂಡಳಿ, ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‍ ಮೊಕದ್ದಮೆ ದಾಖಲಿಸಬೇಕು’ ಎಂದು ಟಿಯುಸಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರ್. ಮಾನಸಯ್ಯ ಒತ್ತಾಯಿಸಿದರು.

ಸೋಮವಾರ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಿಸಿದ 48ಗಂಟೆಗಳ ಅಹೋರಾತ್ರಿ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಅವರು, ‘ಆರ್,ಬಿ. ಸುಗರ್ಸ್‍ ಕಂಪನಿ ಸಹ ವಿದ್ಯುತ್‍ ಘಟಕ ಸ್ಥಾಪನೆಗೆ ಸರ್ಕಾರದಿಂದ 2018ರಲ್ಲಿ ಪರವಾನಿಗೆ ಪಡೆದಿದೆ. 2020ರೊಳಗಡೆ ಘಟಕ ಸ್ಥಾಪನೆ ಆಗಬೇಕಿತ್ತು. ಸರ್ಕಾರಿ ಭೂಮಿ ಕಬಳಿಕೆಗೆ ಅನುಕೂಲ ಆಗುವಂತಹ ಜಮೀನು ಹುಡುಕಾಟದಲ್ಲಿ ಕಾಲಹರಣ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಸಚಿವರ ಆರ್‍.ಬಿ ತಿಮ್ಮಾಪುರ ಪೋಷಿತ ಕಂಪನಿ ಭೂಗಳ್ಳತನಕ್ಕೆ ತಾಲ್ಲೂಕು ಆಡಳಿತ ಪರೋಕ್ಷ ಬೆಂಬಲ ನೀಡುತ್ತಿದೆ. ಚಿಕ್ಕ ಉಪ್ಪೇರಿ ಸ.ನಂ 62ರ 92 ಎಕರೆ ಜಮೀನ ಕಲ್ಲುಗುಡ್ಡ ಸಮತಟ್ಟು ಮಾಡಿ 25ಕ್ಕೂ ಹೆಚ್ಚು ಎಕರೆ ಮಠದ ಹೆಸರಲ್ಲಿ ಕಬ್ಜಾ ಮಾಡಿಕೊಂಡಿದ್ದು ಮೇಲ್ನೊಟಕ್ಕೆ ಕಂಡು ಬಂದಿದೆ. ಸಚಿವರ ಒತ್ತಡಕ್ಕೆ ಮಣಿದ ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ನಡೆದಿಲ್ಲ ಎಂದು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಎಂದು ಕಿಡಿಕಾರಿದರು.

‘ಸರ್ಕಾರಿ ಅಧಿಕಾರಿಗಳು ಸಂವಿಧಾನ, ಕಾನೂನು ಪರಿಪಾಲನೆ ಮಾಡಬೇಕು ಆದರೆ, ರಾಜಕಾರಣಿಗಳ ಗುಲಾಮರಾದರೆ ಆಡಳಿತ ವ್ಯವಸ್ಥೆ ಹದಗೆಡುತ್ತದೆ. 48ಗಂಟೆಗಳಲ್ಲಿ ಹೋರಾಟಗಾರರ ಸಮೇತ ಚಿಕ್ಕ ಉಪ್ಪೇರಿ, ಸುಣಕಲ್ಲ ಒತ್ತುವರಿ ಜಮೀನು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಂಪನಿ ಒತ್ತುವರಿ ಮಾಡಿರದಿದ್ದರೆ ಹೂಮಾಲೆ ಹಾಕುತ್ತೇವೆ. ತಪ್ಪು ಇದ್ದರೆ ಕಂಪೆನಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ದೂರು ದಾಖಲಿಸುತ್ತೇವೆ; ಎಂದು ಎಚ್ಚರಿಸಿದರು.

ಕರ್ನಾಟಕ ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಶ್ರೀನಿವಾಸ ಕಂದೆಗಾಲ ಮಾತನಾಡಿ, ‘ಸಿದ್ಧರಾಮಯ್ಯ ನೇತೃತ್ವ ಸರ್ಕಾರ ಬಿಟ್ಟಿ ಗ್ಯಾರಂಟಿ ಯೋಜನೆ ಮೂಲಕ ಜನರನ್ನು ಬೀದಿಗೆ ತಂದಿದ್ದಾರೆ. ಬಿಟ್ಟಿ ಗ್ಯಾರಂಟಿ ರದ್ದುಪಡಿಸಿ, ಭೂ ಮಂಜೂರಿ ಮಾಡಿಸಬೇಕು. ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಬೆಂಬಲಿಸಬೇಕು. ಕಂಪೆನಿಗಳಿಗೆ ಸಾವಿರಾರು ಎಕರೆ ಜಮೀನು ನೀಡುವ ಸರ್ಕಾರಗಳು ರೈತರಿಗೆ ಒಕ್ಕಲೆಬ್ಬಿಸುತ್ತಿರುವುದು ವಿಪರ್ಯಾಸ’ ಎಂದರು.

‘ಸರ್ಕಾರಿ ಗೈರಾಣು, ಪರಂಪೋಕ್‍, ಅರಣ್ಯ, ಸರ್ಕಾರ, ಖಾರೇಜಖಾತಾ ಭೂಮಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ಆದೇಶ ನೀಡಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮ ದಾಖಲೆ ಸೃಷ್ಠಿಸುತ್ತಿರುವ ಭೂಗಳ್ಳರ ಹೆಡೆಮುರಿ ಕಟ್ಟಲು ಮುಂದಾಗಬೇಕು ಎಂದರು.

ರೈತ ಸಂಘದ ಮನವಿ: ಕರ್ನಾಟಕ ರೈತ ಸಂಘ ಪದಾಧಿಕಾರಿಗಳು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್‍ ಮತ್ತು ತಹಶೀಲ್ದಾರ್‍ ಶಂಶಾಲಂ ನಾಗಡದಿನ್ನಿ ಅವರಿಗೆ ಮನವಿ ಸಲ್ಲಿಸಿ, ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರ ರಕ್ಷಣೆ ಮಾಡಬೇಕು. ಚಿಕ್ಕ ಉಪ್ಪೇರಿ ಸ.ನಂ 62 ಮತ್ತು ಸುಣಕಲ್ಲ ಬಳಿಯ ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿ ಕ್ರಿಮಿನಲ್‍ ಮೊಕದ್ದಮೆ ದಾಖಲಿಸಬೇಕು ಎಂದು ಗಮನ ಸೆಳೆದರು.

ಸರ್ಕಾರಿ ಜಮೀನದಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದಂತೆ ತಡೆಯಬೇಕು. ತಾಲ್ಲೂಕಿನಲ್ಲಿ ಹೆಚ್ಚುವರಿ ಜಮೀನು ಭೂ ರಹಿತರಿಗೆ ಹಂಚಿಕೆ ಮಾಡಬೇಕು. ಹೊಸೂರು ಮಂಜೂರಾದ ಜಮೀನು ಕಬ್ಜಾ ಕೊಡಿಸಿ. ಸಾಗುವಳಿದಾರರ ಮೇಲೆ ಹಾಕಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ದೇವರಭೂಪುರ ಜಮೀನದಲ್ಲಿ ಪಪ್ಪಾಯಿ, ದಾಳಿಂಬೆ ಬೆಳೆ ನಾಶಪಡಿಸಿದ ಅರಣ್ಯ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ದೇವರಭೂಪುರ, ಯರಜಂತಿ, ತೊರಲಬೆಂಚಿ, ಗೊರೆಬಾಳ, ಭೂಪುರ, ಚಿಕ್ಕನಗನೂರು, ಚಿಕ್ಕಹೆಸರೂರು, ವ್ಯಾಪ್ತಿಯ ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟಾ ಆದೇಶ ಮಾಡಬೇಕು. ಭೂ ಒತ್ತುವರಿಗೆ ಕುಮ್ಮಕ್ಕು ನೀಡುತ್ತಿರುವ ತಾಲ್ಲೂಕು ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಸಂರಕ್ಷಿಸಬೇಕು. ಇಲ್ಲವಾದಲ್ಲಿ ಆಕ್ಟೋಬರ್‍ 2ನೇ ವಾರದಲ್ಲಿ ಲಿಂಗಸುಗೂರು ಬಂದ್‍ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸಣ್ಣಪ್ಪ ಕೊಡಗು,ತಾಲ್ಲೂಕು ಘಟಕ ಅಧ್ಯಕ್ಷ ವೀರಭದ್ರಪ್ಪ ಹಡಪದ. ಮುಖಂಡರಾದ ಎಸ್‍.ಆರ್‍ ಮಂಜುನಾಥ, ಎಂ. ಗಂಗಾಧರ, ಆದೇಶ ನಗನೂರು, ತಿಪ್ಪಣ್ಣ ಹೆಸರೂರು, ಅಮೀನುದ್ದೀನ್‍ ದಿದ್ದಗಿ, ಮಲ್ಲಯ್ಯ ಕಟ್ಟಿಮನಿ, ಸಂತೋಷ ಹಿರಿದಿನ್ನಿ, ಮಾರುತಿ ಜಿನ್ನಾಪುರ, ವೆಂಕಟೇಶ, ಗಂಗಾಧರ ಗುಂತಗೋಳ, ಬಸವರಾಜ, ಆರ್. ಶಾಂತಪ್ಪ, ರಮೇಶ ಹೆಸರೂರು ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.

ಲಿಂಗಸುಗೂರಲ್ಲಿ ಸೋಮವಾರ ಕರ್ನಾಟಕ ರೈತ ಸಂಘ ಆರಂಭಿಸಿದ 48ಗಂಟೆಗಳ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಸಂಬಂಧಿಸಿದ ಬೇಡಿಕೆ ಮನವಿಯನ್ನು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್‍ ಗೆ ಸಲ್ಲಿಸಿದರು.
ಲಿಂಗಸುಗೂರಲ್ಲಿ ಸೋಮವಾರ ಕರ್ನಾಟಕ ರೈತ ಸಂಘ ಆರಂಭಿಸಿದ 48ಗಂಟೆಗಳ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಸಂಬಂಧಿಸಿದ ಬೇಡಿಕೆ ಮನವಿಯನ್ನು ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟರ್‍ ಗೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT