ಶನಿವಾರ, ಅಕ್ಟೋಬರ್ 24, 2020
27 °C
ಕೃಷ್ಣಾನದಿ ತೀರದ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರ ಗೋಳು

ರಾಯಚೂರು: ಮಳೆಯಿಂದ ಉಳಿದದ್ದು; ಪ್ರವಾಹದಲ್ಲಿ ಹೋಯ್ತು

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಸುರಿದ ಅತಿವೃಷ್ಟಿಯಿಂದ ಬೆಳೆನಷ್ಟ ಹಾಗೂ ಬೆಳೆಗಳಿಗೆ ರೋಗಬಾಧೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ರೈತರು ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಈ ಮಧ್ಯೆ ಕೃಷ್ಣಾನದಿಯಲ್ಲಿ ದಿಢೀರ್‌ ಪ್ರವಾಹ ಏರಿಕೆ ಆಗಿದ್ದರಿಂದ ರಾಯಚೂರು ತಾಲ್ಲೂಕಿನ ನದಿತೀರದ ರೈತರು ಸಂಪೂರ್ಣ ಬೆಳೆನಷ್ಟಕ್ಕೀಡಾಗಿದ್ದಾರೆ.

ಗುರ್ಜಾಪೂರ, ಕಾಡ್ಲೂರು, ಗುಂಜಳ್ಳಿ, ದೇವಸುಗೂರು, ಕರೆಕಲ್‌, ಕೊರ್ವಿಹಳ್ಳಿ, ಕೊರ್ತಕುಂದಾ, ಡಿ.ರಾಂಪೂರ, ಆತ್ಕೂರು, ಬೂರ್ದಿಪಾಡ, ಕುರ್ವಕಲಾ, ಕುರವಕುರ್ದಾ ಗ್ರಾಮಗಳ ನೂರಾರು ಎಕರೆ ಭತ್ತದ ಬೆಳೆಗಳು ಕೃಷ್ಣಾನದಿ ಪ್ರವಾಹದಲ್ಲಿ ಮುಳುಗಿವೆ. ನಾಲ್ಕು ಅಡಿಯಷ್ಟು ಬೆಳೆದಿದ್ದ ಭತ್ತವು ಕಟಾವು ಹಂತದಲ್ಲಿತ್ತು. ಇದುವರೆಗೂ ಅತೀಯಾಗಿ ಸುರಿದ ಮಳೆಯಿಂದ ಭತ್ತಕ್ಕೆ ರೋಗಬಾಧೆ ಕಾಣಿಸಿಕೊಂಡಿತ್ತು. ಅದರಲ್ಲಿ ಅಲ್ಪ ಭತ್ತದ ಬೆಳೆಯಾದರೂ ಕೈ ಸೇರುತ್ತದೆ ಎನ್ನುವ ನಿರೀಕ್ಷೆ ರೈತರಲ್ಲಿತ್ತು. ಆದರೆ ಕೃಷ್ಣಾನದಿ ಪ್ರವಾಹ ಅಲ್ಪ ಬೆಳೆಯನ್ನೂ ಆಹುತಿ ಪಡೆದಿದೆ.

‘ಕೃಷ್ಣಾನದಿ ಪ್ರವಾಹ ರಾತ್ರೋರಾತ್ರಿ ಬಂದಿದ್ದು ನೀರಿನ ಪಂಪ್‌ಸೆಟ್‌ಗಳೆಲ್ಲ ಮುಳುಗಡೆಯಾಗಿವೆ. ಟ್ರಾನ್ಸ್‌ಫಾರ್ಮರ್‌ ಕೂಡಾ ಮುಳುಗಡೆ ಆಗಿದೆ. ಕನಿಷ್ಠ ಟ್ರಾನ್ಸ್‌ಫಾರ್ಮರ್‌ ಹೊರತೆಗೆದುಕೊಳ್ಳುವ ಸಾಹಸ ಮಾಡಬೇಕಾಗಿದೆ’ ಎಂದು ಗುಂಜಳ್ಳಿ ಗ್ರಾಮದ ರೈತ ಸೂಗಪ್ಪ ಅವರು ಅಳಲು ಹಂಚಿಕೊಂಡರು.

ರಾಯಚೂರು ತಾಲ್ಲೂಕಿನ ಗಡಿಭಾಗ ಗುರ್ಜಾಪುರ, ಕಾಡ್ಲೂರ ಬಳಿ ಕೃಷ್ಣಾ–ಭೀಮಾನದಿಗಳ ಸಂಗಮವಿದೆ. ಭೀಮಾನದಿಯಿಂದ ಹರಿದು ಬರುವ ಭಾರಿ ಪ್ರವಾಹದ ಬಗ್ಗೆ ಮಾಹಿತಿ ಇರಲಿಲ್ಲ. ಒಂದೇ ದಿನದಲ್ಲಿ ಇಷ್ಟೊಂದು ನೀರು ಹರಿದು ಬಂದಿದ್ದರಿಂದ ನೀರಿನ ಪಂಪ್‌ಸೆಟ್‌ಗಳೆಲ್ಲ ಪ್ರವಾಹದಲ್ಲಿ ಮುಳುಗಡೆಯಾಗಿವೆ. ನಾರಾಯಣಪುರ ಜಲಾಶಯದಿಂದ ಹೊರಬಿಡುವ ನೀರಿನ ಬಗ್ಗೆ ಮೊದಲೇ ಮಾಹಿತಿ ಕೊಡುತ್ತಿದ್ದರು. ಹೀಗಾಗಿ ಮೋಟರ್‌ ಪಂಪ್‌ಸೆಟ್‌ಗಳನ್ನು ಎತ್ತಿಕೊಂಡು ಸುರಕ್ಷಿತ ಜಾಗಕ್ಕೆ ಇರಿಸುತ್ತಿದ್ದೇವು ಎಂದು ಕಾಡ್ಲೂರ, ಗುಂಜಳ್ಳಿ ಗ್ರಾಮಗಳ ರೈತರು ಹೇಳುತ್ತಿದ್ದಾರೆ.

ಪರಿಹಾರಕ್ಕೆ ಮನವಿ: ‘ಫಲವತ್ತಾಗಿ ಬೆಳೆದಿದ್ದ ಭತ್ತದ ಬೆಳೆ ಎಲ್ಲವೂ ಪ್ರವಾಹದಲ್ಲಿ ಮುಳುಗಡೆ ಆಗಿದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಬೀಜ, ಗೊಬ್ಬರಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿದ್ದು ಕೂಡಾ ವಾಪಸ್‌ ಕೈಗೆ ಸಿಗುತ್ತಿಲ್ಲ. ತಕ್ಷಣ ಪರಿಹಾರ ಒದಗಿಸಿದರೆ ಬೀಜ, ಗೊಬ್ಬರಕ್ಕಾಗಿ ಮಾಡಿರುವ ಸಾಲವನ್ನಾದರೂ ಮರಳಿಸುತ್ತೇವೆ’ ಎಂದು ಆತ್ಕೂರು ಗ್ರಾಮದ ರೈತ ರಾಮು ಅವರ ಮನವಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು