ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: 3 ಲಕ್ಷ ಕ್ಯುಸೆಕ್‌ ದಾಟಿದ ಕೃಷ್ಣಾ ಪ್ರವಾಹ

ತುಂಗಭದ್ರಾ, ಭೀಮಾ ನದಿಗಳಲ್ಲೂ ನೀರಿನ ಹರಿವು ಹೆಚ್ಚಳ
Last Updated 19 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಏಕಕಾಲಕ್ಕೆ ಕೃಷ್ಣಾ, ತುಂಗಭದ್ರಾ ಹಾಗೂ ಭೀಮಾ ನದಿಗಳಲ್ಲಿ ಪ್ರವಾಹ ಬಂದಿದ್ದು, ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.

ಕೃಷ್ಣಾನದಿ ತೀರದಲ್ಲಿರುವ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕುಗಳ 32 ಗ್ರಾಮಗಳಲ್ಲಿ ಡಂಗುರದ ಮೂಲಕ ಜನಜಾಗೃತಿ ಮೂಡಿಸಲಾಗಿದೆ. ಇದಲ್ಲದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಿರುವ ವಿಪತ್ತು ನಿರ್ವಹಣಾ ತಂಡದವರು, ಯಾವುದೇ ಅಪಾಯ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸರು ಕೂಡಾ ಅಲ್ಲಲ್ಲಿ ನಿಗಾ ವಹಿಸಿದ್ದು, ಮುಳುಗಡೆಯಾದ ಸೇತುವೆ ಕಡೆಗೆ ಹಾಗೂ ಅನಗತ್ಯ ನದಿತೀರದ ಗ್ರಾಮಗಳಿಗೆ ಸಂಚರಿಸಲು ಅವಕಾಶ ನೀಡುತ್ತಿಲ್ಲ.

ಅದೇ ರೀತಿ, ತುಂಗಭದ್ರಾ ನದಿತೀರದಲ್ಲಿರುವ ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲ್ಲೂಕುಗಳ 20 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬುಧವಾರದಿಂದ ಡಂಗುರದ ಮೂಲಕ ಎಚ್ಚರಿಕೆ ನೀಡಲಾಗಿದೆ. ನದಿಗೆ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದ ಯಾವುದೇ ಕಾರಣಕ್ಕೂ ನದಿತೀರದ ಕಡೆಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನದಿತೀರದ ಗ್ರಾಮಗಳಲ್ಲಿ ನಿಗಾ ವಹಿಸಿದ್ದಾರೆ.

ಯಾದಗಿರಿ ಜಿಲ್ಲೆ ಸನ್ನತಿ ಬ್ರಿಡ್ಜ್‌ನಿಂದ 25 ಸಾವಿರ ಕ್ಯುಸೆಕ್‌ ನೀರನ್ನು ಭೀಮಾನದಿಗೆ ಹರಿಬಿಡಲಾಗುತ್ತಿದೆ. ರಾಯಚೂರು ತಾಲ್ಲೂಕಿನ ಕಾಡ್ಲೂರ್‌ ಸಮೀಪ ಕೃಷ್ಣಾನದಿಗೆ ಭೀಮಾ ನೀರು ಸಂಗಮವಾಗುತ್ತಿದೆ. ಇದರಿಂದ ಗುರ್ಜಾಪುರ ಗ್ರಾಮಕ್ಕೆ ಈ ವರ್ಷವೂ ಪ್ರವಾಹ ನುಗ್ಗುವ ಸಾಧ್ಯತೆ ಇದ್ದು, ಜನರು ಆತಂಕದಲ್ಲಿ ಮುಳುಗಿದ್ದಾರೆ. ಇವರಿಗೆ ಜೆ.ಮಲ್ಲಾಪುರ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗುತ್ತಿದ್ದು, ಅಲ್ಲಿಗೆ ನಡೆದುಕೊಂಡು ಹೋಗುವುದಕ್ಕೆ 3 ಕಿಮೀ ದೂರವಾಗುತ್ತದೆ.

ನಾರಾಯಣಪುರ ಜಲಾಶಯದಿಂದ 2.96 ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ಕ್ರಮೇಣ 3 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರವಾಹ ಹರಿದು ಬರಲಿದೆ. ತುಂಗಭದ್ರಾ ಜಲಾಶಯದಿಂದ 1.12 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಮಾನ್ವಿ ತಾಲ್ಲೂಕಿನ ನದಿತೀರದ ಗ್ರಾಮಗಳ ಜಮೀನುಗಳು ಕೆಲವು ಮುಳುಗಡೆ ಆಗಿವೆ. ಬೆಳೆ ಮುಳುಗಡೆಯಿಂದ ಹಾನಿಯಾಗುವ ಸಾಧ್ಯತೆ ಇದೆ.

ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಿಂದ 10 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಮ್ಯಾದರಗಡ್ಡಿಗೆ ಸಂಪಕ ಕಡಿತವಾಗಿದ್ದು, ಅಲ್ಲಿದ್ದ 14 ಜನರ ಪೈಕಿ ನಾಲ್ಕು ಜನರನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ರಾಯಚೂರು ತಾಲ್ಲೂಕಿನ ಕುರ್ವಕುಲಾ, ಕುರ್ವಕುರ್ದ, ರಾಮಗಡ್ಡಿ ಜನರಿಗೆ ಸಂಪರ್ಕ ಕಡಿತವಾಗಿದೆ. ನೀರಿನ ಸೆಳೆತ ಹೆಚ್ಚಾಗಿರುವುದರಿಂದ ನಡುಗಡ್ಡೆ ಜನರು ತೆಪ್ಪದಲ್ಲಿ ಸಂಚರಿಸುವುದಕ್ಕೆ ಅವಕಾಶ ನೀಡುತ್ತಿಲ್ಲ. ನಡುಗಡ್ಡೆಯ ಇನ್ನೊಂದು ಭಾಗದಲ್ಲಿ ತೆಪ್ಪದಲ್ಲಿ ನದಿಯನ್ನು ದಾಟಿ ತೆಲಂಗಾಣದ ಹೋಬಳಿಗೆ ಸಂತೆಗೆ ಹೋಗಿ ಬರುತ್ತಿದ್ದರು. ಈಚೆಗೆ ತೆಪ್ಪ ಮುಳುಗಿದ ಘಟನೆಯಿಂದ ಭೀತಿಗೊಳಗಾದ ಜನರು ಅಲ್ಲಿಯೂ ತೆಪ್ಪದ ಸವಾರಿ ನಿಂತಿದೆ. ಮನೆಗಳಲ್ಲಿ ಲಭ್ಯವಿರುವ ದವಸ, ಧಾನ್ಯಗಳನ್ನು ಆಧಾರವಾಗಿ ಇಟ್ಟುಕೊಂಡು ಜೀವನ ಸಾಗಿಸುವುದು ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT