ಸಿಂಧನೂರು: ‘ತುಂಗಭದ್ರಾ ಜಲಾಶಯದಲ್ಲಿ 59 ಟಿಎಂಸಿ ನೀರು ತುಂಬಿದ್ದು, 1.30 ಲಕ್ಷ ಒಳಹರಿವಿದೆ. ತಕ್ಷಣವೇ ಎಡದಂಡೆ ನಾಲೆಗೆ ನೀರು ಹರಿಸುವ ಮೂಲಕ ರೈತರು ಸಸಿಮಡಿ ಹಚ್ಚಿಕೊಂಡು, ಬೆಳೆ ಬೆಳೆಯಲು ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವಂತರಾಯಗೌಡ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳೆದ ವರ್ಷ 40 ಟಿಎಂಸಿ ಇದ್ದಾಗಲೇ ಜುಲೈ 18 ರಂದು ನೀರು ಹರಿಸಲಾಗಿತ್ತು. ಆದ್ದರಿಂದ ಕೂಡಲೇ ಟಿಎಲ್‍ಬಿಸಿಯಿಂದ ಎಡದಂಡೆ ನಾಲೆಗೆ ನೀರು ಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕ್ರಮವಹಿಸಬೇಕು’ ಎಂದರು.
‘ಶಾಸಕರು ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನೀರಾವರಿ ಸಲಹಾ ಸಮಿತಿ ಅಧ್ಯಕ್ಷರ ಆಯ್ಕೆ, ಕಾಡಾ ಅಧ್ಯಕ್ಷರ ನೇಮಕ ಹಾಗೂ ಐಸಿಸಿ ಸಭೆ ಕರೆಯುವುದು, ಈ ಸಭೆಗೆ ರೈತ ಮುಖಂಡರ ಆಹ್ವಾನಿಸುವ ಕುರಿತು ಗಮನ ಸೆಳೆಯಬೇಕು. ‘ಎಡದಂಡೆ ನಾಲೆ ನಿರ್ಮಾಣವಾದ ಸುಮಾರು 60 ವರ್ಷಗಳಲ್ಲಿ ಆನ್-ಆಫ್ ಪದ್ಧತಿ ಅಳವಡಿಸಿರಲಿಲ್ಲ. ಆದರೆ ಮೈಲ್ 47 ರಿಂದ 169ರ ಮೈಲ್‍ವರೆಗೆ ಈ ಪದ್ಧತಿ ಮಾಡಿರುವುದು ಖಂಡನೀಯ’ ಎಂದರು.
ಗೇಜ್ ಪ್ರಕಾರ ನೀರು ಬಿಡಬೇಕು. ಹೆಚ್ಚು-ಕಡಿಮೆ ಮಾಡುವುದರಿಂದ ಕಳೆದ 15 ವರ್ಷಗಳಿಂದಲೂ ಕೆಳಭಾಗದ ರೈತರಿಗೆ ನೀರು ತಲುಪದೆ ಅನ್ಯಾಯವಾಗುತ್ತಿದೆ’ ಎಂದು ದೂರಿದರು.
‘ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ 3300 ಕ್ಯುಸೆಕ್‌ನಂತೆ ನೀರು ಹರಿಸಿದರೆ ಸಿಂಧನೂರುಗೆ 836, ಸಿರವಾರಗೆ 919 ಹಾಗೂ ಯರಮರಸ್ ಡಿವಿಜನ್‍ಗೆ 491 ಕ್ಯುಸೆಕ್ ಪಾಲು ನೀರು ಬರಬೇಕು. ಆದರೆ 3300 ಕ್ಯುಸೆಕ್‌ನಲ್ಲಿ ಶೇ 50ರಷ್ಟು ನೀರನ್ನು ವಡ್ಡರಟ್ಟಿ ಡಿವಿಜನ್‍ನಲ್ಲಿ ಬಳಸಿಕೊಂಡು ಸುಮಾರು 1.50 ಲಕ್ಷ ಎಕರೆಕ್ಕೂ ಹೆಚ್ಚು ಅಕ್ರಮ ನೀರಾವರಿ ಮಾಡಲಾಗುತ್ತಿದೆ. ಇದನ್ನು ನೀರಾವರಿ ಇಲಾಖೆ ಅಧಿಕಾರಿಗಳು ತಡೆಹಿಡಿಯುವ ಕೆಲಸ ಮಾಡಬೇಕು ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿರುಪನಗೌಡ, ಉಪಾಧ್ಯಕ್ಷ ತಿಪ್ಪಣ್ಣ ಮುಳ್ಳೂರು, ಮುಖಂಡ ಬಿ.ಲಿಂಗಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.