ಚಂದ್ರಕಾಂತ ಮಸಾನಿ
ರಾಯಚೂರು: ಪ್ರಧಾನ ಮಂತ್ರಿ ಸ್ಕೂಲ್ಸ್ ಆಫ್ ರೈಸಿಂಗ್ ಇಂಡಿಯಾ (ಪಿಎಂಶ್ರೀ) ಯೋಜನೆ ಅಡಿ ಜಿಲ್ಲೆಯ ನಾಲ್ಕು ಪ್ರಮುಖ ಶಾಲೆಗಳು ಆಯ್ಕೆಯಾಗಿವೆ.
ಮಾನ್ವಿ ತಾಲ್ಲೂಕಿನ ನೀರಮಾನ್ವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದೇವದುರ್ಗ ತಾಲ್ಲೂಕಿನ ಕೊಪ್ಪರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ರಾಯಚೂರು ತಾಲ್ಲೂಕಿನ ದುಗನೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಿಂಧನೂರು ತಾಲ್ಲೂಕಿನ ಪುನರ್ವತಿ ಕೇಂದ್ರ–2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಿಎಂಶ್ರೀ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ವರ್ಷ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಪಿಎಂ- ಶ್ರೀ ಯೋಜನೆ ಅಡಿಯಲ್ಲಿ ದೇಶದ 14,500 ಶಾಲೆಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವ ಕುರಿತು ಘೋಷಣೆ ಮಾಡಿದ್ದರು. ಶೈಕ್ಷಣಿಕ ವರ್ಷದಲ್ಲಿ ಯುಡೈಸ್ ತಂತ್ರಾಂಶದ ಮೂಲಕ ಸಲ್ಲಿಸಲಾದ ಮಾನದಂಡಗಳನ್ನು ಪರಿಶೀಲಿಸಿ ಜಿಲ್ಲೆಯ ನಾಲ್ಕು ಶಾಲೆಗಳನ್ನು ಯೋಜನೆಗೆ ಗುರುತಿಸಲಾಗಿದೆ.
ರಾಯಚೂರು ತಾಲ್ಲೂಕಿನ ದುಗನೂರು ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಹಾಗೂ ಆಕರ್ಷಕ ಶಾಲಾ ಕಟ್ಟಡ, ಶಾಲಾ ಆವರಣ ಗೋಡೆ, ಸುರಕ್ಷತೆಗಾಗಿ ಆಗ್ನಿನಂದಕ, ಉತ್ತಮ ಕಲಿಕಾ ವಾತಾವರಣ, ಸ್ಮಾರ್ಟ ಕ್ಲಾಸ್, ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಆಟದ ಮೈದಾನ, ಶಾಲೆಗೆ ವಿದ್ಯುತ್ ವ್ಯವಸ್ಥೆ, ಶಾಲಾ ಕೈತೋಟ, ಮಕ್ಕಳಿಗೆ ಆಟದ ಸಾಮಗ್ರಿಗಳ ವ್ಯವಸ್ಥೆ, ಗ್ರಂಥಾಲಯದ ವ್ಯವಸ್ಥೆ, ಭೋಜನಾಲಯದ ವ್ಯವಸ್ಥೆ, ಶೌಚಾಲಯ ಮತ್ತು ಅವುಗಳ ನಿರ್ವಹಣೆಗೆ ನೀರಿನ ವ್ಯವಸ್ಥೆ, ಹಸಿರಿನ ಪರಿಸರ, ಪ್ರತಿ ತರಗತಿಗೊಂದು ಸ್ಕಾರ್ಟ್ ಟಿವಿ, ಸೌಲಭ್ಯ ಮತ್ತು ಮಕ್ಕಳಿಗೆ ಕೈತೊಳೆಯುವ ಕಟ್ಟೆಯ ವ್ಯವಸ್ಥೆ ಇತ್ಯಾದಿ ಅಂಶಗಳನ್ನು ಹೊಂದಿದೆ.
ಸುಮಾರು 2,200 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಶಾಲೆಯಲ್ಲಿ 263 ಮಕ್ಕಳು ಓದುತ್ತಿದ್ದಾರೆ.
ಗಂಡು ಮಕ್ಕಳಕ್ಕಿಂತ ಹೆಣ್ಣುಮಕ್ಕಳು ದಾಖಲಾತಿ ಅಧಿಕ ಇದೆ. ಶಾಲೆ ಮಕ್ಕಳ ಕಲಿಕೆಯ ಜತೆ ಮಾನಸಿಕ ಬೌದ್ಧಿಕ ಬೆಳವಣೆಗೆ ನೆರವಾಗುವ ಸೌಲಭ್ಯಗಳನ್ನು ಮಕ್ಕಳಿಗೆ ಒದಗಿಸಲಾಗಿದೆ. ಈ ಅಂಶಗಳನ್ನು ಪರಿಗಣಿಸಿಯೇ ಶಾಲೆಯನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ.
‘ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶಾಲೆಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿದೆ. ಶಾಲೆಗೆ ಎಂಟು ಶಿಕ್ಷಕರ ಹುದ್ದೆಗಳ ಮಂಜೂರಾತಿ ಇದೆ. ನಾಲ್ವರು ಪೂರ್ಣವಧಿಯ ಶಿಕ್ಷಕರಿದ್ದರೆ, ನಾಲ್ವರು ಅತಿಥಿ ಶಿಕ್ಷಕರು ಇದ್ದಾರೆ. ಪಿಎಂಶ್ರೀ ಯೋಜನೆಯ ಲಾಭ ಪಡೆದು ಶಾಲೆಯ ವಿದ್ಯಾರ್ಥಿಗಳಿಗೆ ಇನ್ನಷ್ಟು ಸೌಲಭ್ಯ ವಿಸ್ತರಿಸಲು ಸಾಧ್ಯವಾಗಲಿದೆ’ ಎನ್ನುತ್ತಾರೆ ದುಗನೂರು ಶಾಲೆಯ ಮುಖ್ಯ ಶಿಕ್ಷಕ ಗಫೂರ್ .
‘ಸಿಂಧನೂರು ತಾಲ್ಲೂಕಿನ ಪುನರ್ವತಿ ಕೇಂದ್ರ–2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಗಾಲಿ ಮಕ್ಕಳೇ ಇದ್ದಾರೆ. ಶಾಲೆಯಲ್ಲಿ 18 ಕೊಠಡಿಗಳು ಹಾಗೂ 12 ಶಿಕ್ಷಕರ ಹುದ್ದೆಗಳು ಇವೆ. ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಐವರು ಮಾತ್ರ ಸದ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಏಳು ಶಿಕ್ಷಕರು ಇಲ್ಲಿ ವರ್ಗಾವಣೆಯಾಗಿ ಬರಬೇಕಿದೆ. ಒಟ್ಟು 251 ವಿದ್ಯಾರ್ಥಿಗಳಿದ್ದರೂ ಹೆಣ್ಣು ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಓದುತ್ತಿದ್ದಾರೆ’ ಎಂದು ಪ್ರಭಾರ ಶಿಕ್ಷಕ ಮಹೇಶ್ವರ ಕೆ.ಎಚ್. ಹೇಳುತ್ತಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದೇ ಸ್ಕೂಲ್ಸ್ ಆಫ್ ರೈಸಿಂಗ್ ಇಂಡಿಯಾ ಯೋಜನೆಯ ಉದ್ದೇಶವಾಗಿದೆ.
‘ವೈವಿಧ್ಯಮಯ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುತ್ತದೆ. ಶಾಲೆಗಳು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸ್ಮಾರ್ಟ್ ತರಗತಿಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳು, ಆಟದ ಮೈದಾನಗಳ ಸೌಲಭ್ಯಗಳನ್ನು ಹೊಂದಿವೆ.
‘21 ನೇ ಶತಮಾನದ ಕಲಿಯುವವರ ಅಗತ್ಯಗಳನ್ನು ಪೂರೈಸಲು ಯೋಜನೆ ರೂಪಿಸಲಾಗಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಿಗೆ ಶಾಲೆಗಳಲ್ಲಿ ಹೆಚ್ಚಿನ ಆದ್ಯತೆ ದೊರೆಯಲಿದೆ‘ ಎಂದು ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.