ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಾಡುಗಳಿಗೆ ಜೀವ ತುಂಬಿದ ಎಸ್‌ಪಿಬಿ’

ಎಸ್‌.ಪಿ. ಬಾಲಸುಬ್ರಮಣ್ಯಂ ಅವರಿಗೆ ನುಡಿ– ಗಾನ ನಮನ
Last Updated 10 ಅಕ್ಟೋಬರ್ 2020, 3:21 IST
ಅಕ್ಷರ ಗಾತ್ರ

ರಾಯಚೂರು: ದೈಹಿಕವಾಗಿ ಎಸ್‌.ಪಿ.ಬಾಲಸುಬ್ರಮಣ್ಯಂ ನಮ್ಮೊಂದಿಗೆ ಇಲ್ಲದಿದ್ದರೂ ಹಾಡುಗಳಲ್ಲಿ ಅವರು ಜೀವಂತವಾಗಿದ್ದಾರೆ. ಹಾಡುಗಳ ಮೂಲಕ ದೇಶದ ಜನರಿಗೆ ಅಜರಾಮರ ಕೊಡುಗೆ ನೀಡಿದ್ದಾರೆ ಎಂದು ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಹೇಳಿದರು.

ನಗರದ ಜೆ.ಸಿ.ಭವನ ಸಭಾಂಗಣದಲ್ಲಿ ಅಸ್ಕಿಹಾಳದ ಗುರುಪುಟ್ಟ ಕಲಾಬಳಗದಿಂದ ಶುಕ್ರವಾರ ಏರ್ಪಡಿಸಿದ್ದ ಪದ್ಮಭೂಷಣ ಡಾ.ಎಸ್‌.ಪಿ.ಬಾಲಸುಬ್ರಣ್ಯಂ ಇವರಿಗೆ ನುಡಿ– ಗಾನ ನಮನ, ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಎಸ್‌ಪಿಬಿ ಅವರು ಹಾಡಿರುವ ಹಾಡಿನ ಗುಂಗಿನಲ್ಲಿ ಜನರಿದ್ದಾರೆ. ಅವರ ಹಾಡಿದಷ್ಟೂ ಹಾಡುಗಳನ್ನು ಬರೀ ಕೇಳುವುದಕ್ಕೂ ಆಗುವುದಿಲ್ಲ; ಅಷ್ಟೊಂದಿವೆ. ಅವರು ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾದರೂ ಸಾಯುವಾಗ ಕೋವಿಡ್ ಇರಲಿಲ್ಲ‌. ಯಾವುದೇ ಕಾರ್ಯಕ್ರಮದಲ್ಲಿ ಅವರಾಡುತ್ತಿದ್ದ ಪ್ರತಿ ನುಡಿಗಳು ಸ್ಪಷ್ಟವಾಗಿರುತ್ತಿದ್ದವು. ಕನ್ನಡವನ್ನು ಬಹು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ರಾಯಚೂರು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ವೆಂಕಟೇಶ ಆಲ್ಕೋಡ ಮಾತನಾಡಿ, 74 ವರ್ಷಗಳ ಕಾಲ ಬದುಕಿದ ಎಸ್‌ಪಿಬಿ ಅವರು ಜೀವಿತಾವಧಿಯ 50 ವರ್ಷಗಳ ಚಿತ್ರೋದ್ಯಮದಲ್ಲಿದ್ದರು. ಪ್ರಮುಖವಾಗಿ ಐದು ಭಾಷೆಗಳಲ್ಲಿ 40 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಇಷ್ಟು ದೀರ್ಘಾವಧಿ ಹಾಡಿದ ಕಲಾವಿದರು ಅತೀ ವಿರಳ. ಗಾಯನಪಟ್ಟವನ್ನು ಅಲಂಕರಿಸಿ 6 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಜಾತಿ, ಮತಗಳನ್ನು ಮೀರಿದ ಕಲಾವಿದರು ಎಂಬುದನ್ನು ತೋರಿಸಿದ್ದಾರೆ. ದಶಾವತಾರ ಸಿನಿಮಾಗೆ ಕಮಲಹಾಸನ್ ಅವರ ಆರು ಪಾತ್ರಗಳಿಗೆ ಎಸ್‌ಪಿಬಿ ಧ್ವನಿ ನೀಡಿದ್ದಾರೆ ಎಂದು ಸ್ಮರಿಸಿದರು.

ಪತ್ರಕರ್ತ ಅಂಬಣ್ಣ ಅರೋಲಿಕರ ಮಾತನಾಡಿ, ಎಸ್‌ಪಿಬಿ ಅವರ ಸ್ವರ ಮಾಂತ್ರಿಕತೆ ಚಿರಸ್ಥಾಯಿ ಉಳಿದಿದೆ. ಯಾವುದೇ ಹಾಡು ಕೇಳಿದರೂ ಜನರು ಅದರಲ್ಲಿ ತಲ್ಲೀನರಾಗುತ್ತಾರೆ ಎಂದರು.

ಜಾನಪದ ಗಾಯಕ ಶರಣಪ್ಪ ಗೋನಾಳ ಮಾತನಾಡಿ, ‘ಎದೆ ತುಂಬಿ ಹಾಡುವೆನು ಟಿವಿ ಕಾರ್ಯಕ್ರಮದಲ್ಲಿ ಅವರೊಂದಿಗೆ ನಿರ್ಣಾಯಕನಾಗಿ ಕುಳಿತಿದ್ದು ನನ್ನ ಸೌಭಾಗ್ಯ‘ ಎಂದು ಹೇಳಿದರು.

ಹಿಂದೂಸ್ತಾನಿ ಗಾಯಕ ಸೂಗುರೇಶ್ವರ ಅಸ್ಕಿಹಾಳ ಮಾತನಾಡಿ, ಹಾಡಿಗಾಗಿ ಸರ್ವಸ್ವವನ್ನು ಕೊಡುವಂತಹ ಸಂಗೀತ ಕಲಾವಿದ ಅವರಾಗಿದ್ದರು ಎಂದು ಬಣ್ಣಿಸಿದರು.

ಪಶ್ಚಿಮ ಪೊಲೀಸ್‌ ಠಾಣೆಯ ಪಿಎಸ್‌ಐ ದಾದಾವಲಿ ಕೆ.ಎಚ್‌. ಮಾತನಾಡಿದರು.

ವಿವಿಧ ಕಲಾವಿದರು ಗಾಯನ ಪ್ರಸ್ತುತ ಪಡಿಸಿದರು. ಜೈ ಗುರುದೇವ ಸಂಗೀತ ಕಲಾ ಬಳಗದ ಮಲ್ಲಿಕಾರ್ಜುನಸ್ವಾಮಿ, ಸಂಗೀತ ಕಲಾವಿದರಾದ ರಾಮಚಂದ್ರಪ್ಪ ಮಸೀದಾಪೂರ, ಇಬ್ರಾಹಿಂಜೀ, ಎನ್‌.ಬಿ.ಲಕ್ಷ್ಮೀರೆಡ್ಡಿ, ಜೋಸೆಫ್‌ ಆಶಾಪೂರ, ಗುರುರಾಜ ಕುಲಕರ್ಣಿ ಮತ್ತಿತರರು ಇದ್ದರು.

ಸಂಗೀತ ಕಲಾವಿದ ರಾಘವೇಂದ್ರ ಆಶಾಪೂರ ಸ್ವಾಗತಿಸಿದರು. ಗುರುಪುಟ್ಟ ಕಲಾಬಳಗದ ಅಧ್ಯಕ್ಷ ಸುಧಾಕರ ಅಸ್ಕಿಹಾಳ ವಂದಿಸಿದರು. ಅಶ್ವಿನಕುಮಾರ್‌ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT