ಶನಿವಾರ, ಜೂಲೈ 11, 2020
28 °C

ರಾಯಚೂರು: ದಿನಸಿ ಖರೀದಿ ಮಂದಗತಿ, ಕಿರಾಣಿ ವ್ಯಾಪಾರವನ್ನು ಬಾಧಿಸದ ಲಾಕ್‌ಡೌನ್

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

prajavani

ರಾಯಚೂರು: ಲಾಕ್‌ಡೌನ್ ಆರಂಭವಾದಾಗ ಮಾರ್ಚ್‌ನಲ್ಲಿ ಜನರು ಕಿರಾಣಿ ದಿನಸೀ ಸರಕುಗಳನ್ನು ಮುಗಿಬಿದ್ದು ಖರೀದಿಸಿದ್ದರು. ಏಪ್ರಿಲ್‌ನಲ್ಲಿ ಲಾಕ್‌ಡೌನ್‌ ಮುಂದುವರಿಸಿದ ಬಳಿಕ ಸರಕುಗಳನ್ನು ಎಲ್ಲರೂ ದಾಸ್ತಾನು ಮಾಡಿಕೊಂಡಿದ್ದಾರೆ. ಇದರಿಂದ ಸಗಟು ವ್ಯಾಪಾರಿಗಳು ಮಾಡಿಕೊಂಡ ದಾಸ್ತಾನು ಮೇ ತಿಂಗಳಲ್ಲಿ ಮಾರಾಟವಾಗುವುದು ಮಂದವಾಗಿದೆ.

ಆದರೆ, ಚಿಲ್ಲರೆ ಕಿರಾಣಿ ವ್ಯಾಪಾರಕ್ಕೆ ಯಾವುದೇ ಬಾಧೆ ಎದುರಾಗಿಲ್ಲ. ಇದೀಗ ಮದುವೆ ಸಮಾರಂಭಕ್ಕೆ ಅವಕಾಶ ನೀಡಿರುವುದರಿಂದ ಸರಕುಗಳು ಮಾರಾಟ ಆಗುತ್ತಿವೆ. ಕಿರಾಣಿ ಅಂಗಡಿಗಳಲ್ಲಿ ಮತ್ತು ಮನೆಗಳಲ್ಲಿ ಮಾಡಿಕೊಂಡ ದಿನಸೀ ಸಂಗ್ರಹ ಖಾಲಿಯಾದ ಬಳಿಕವೆ ಎಪಿಎಂಸಿಯಲ್ಲಿರುವ ಸಗಟುದಾರರ ವ್ಯಾಪಾರವು ಸಾಮಾನ್ಯ ಸ್ಥಿತಿಗೆ ಬರಲಿದೆ. ಅಲ್ಲಿಯವರೆಗೂ ಕೆಲವು ಸಗಟು ವ್ಯಾಪಾರಿಗಳು ನಷ್ಟಕ್ಕೊಳಗಾಗುವ ಆತಂಕದಲ್ಲಿದ್ದಾರೆ.

ಲಾಕ್‌ಡೌನ್‌ ಆರಂಭವಾದಾಗ ದೇಶದಲ್ಲಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಸಗಟು ವ್ಯಾಪಾರಿಗಳು ಯಾವುದೇ ದಿನಸೀ ವಸ್ತುಗಳನ್ನು ತಂದುಕೊಳ್ಳಲು ಸಾಧ್ಯವಾಗಿರಲಿಲ್ಲ. ಏಪ್ರಿಲ್‌ನಲ್ಲಿ ಲಾಕ್‌ಡೌನ್‌ ಸಡಿಲಿಕೆಗೊಳಿಸಿ ಸರಕು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಆದರೂ ಮಧ್ಯಪ್ರದೇಶ, ಮುಂಬೈ, ಗುಜರಾತ್‌ಗಳಿಂದ ರಾಯಚೂರಿಗೆ ಲಾರಿಗಳು ತಲುಪುವುದು ದುಸ್ತರವಾಗಿತ್ತು. ಲಾರಿಗಳಿಗೆ ಬಾಡಿಗೆ ದುಪ್ಪಟ್ಟು ಪಾವತಿಸಿ ಸಗಟು ವ್ಯಾಪಾರಿಗಳು ಸರಕುಗಳನ್ನು ತರಿಸಿಕೊಂಡಿದ್ದಾರೆ. ಆದರೆ, ನಿರೀಕ್ಷಿತ ವ್ಯಾಪಾರವಿಲ್ಲದೆ ಸಗಟುದಾರರು ನಷ್ಟ ಅನುಭವಿಸುವ ಸ್ಥಿತಿಯಲ್ಲಿದ್ದಾರೆ. ಹೊರರಾಜ್ಯದಿಂದ ತರಿಸಿಕೊಳ್ಳುವ ಸರಕುಗಳು ಒಂದು ವಾರದೊಳಗೆ ಮಾರಾಟವಾಗದಿದ್ದರೆ ಸಗಟು ವ್ಯಾಪಾರಿಗಳಿಗೆ ನಷ್ಟ ಶುರುವಾಗುತ್ತದೆ. 

ಕಿರಾಣಿ ಅಂಗಡಿಗಳಲ್ಲಿ ಮಾತ್ರ ನಷ್ಟವಿಲ್ಲದೆ ಸರಕುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪೂರೈಕೆಯಿಲ್ಲದ ಕೆಲವು ದಿನಸೀಗಳನ್ನು ಕೆಲವರು ಹೆಚ್ಚಿನ ದರಕ್ಕೂ ಮಾರಾಟ ಮಾಡುತ್ತಿದ್ದಾರೆ. ಹೆಚ್ಚು ಬಾಡಿಗೆ ಪಾವತಿಸಿ ಸರಕುಗಳನ್ನು ತಂದುಕೊಂಡಿರುವ ಸಗಟುದಾರರು ಕಿರಾಣಿ ವ್ಯಾಪಾರಿಗಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ಅಡುಗೆ ಎಣ್ಣೆ, ರವೆ, ಮೈದಾ, ರಾಗಿ ಹಿಟ್ಟು ಸಾಕಷ್ಟು ದಾಸ್ತಾನಾಗಿದೆ.

‘ವ್ಯಾಪಾರದ ಲಾಭ–ನಷ್ಟವನ್ನು ಯಾರೂ ಬಿಟ್ಟುಕೊಡುವುದಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ವ್ಯಾಪಾರ ಸಾಮಾನ್ಯ ಸ್ಥಿತಿಯಲ್ಲಿತ್ತು. ಗ್ರಾಮೀಣ ಭಾಗದ ಕಿರಾಣಿ ವ್ಯಾಪಾರ ನಿರೀಕ್ಷಿತ ಪ್ರಮಾಣದಲ್ಲಿ ನಡೆದಿಲ್ಲ. ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷ ವ್ಯಾಪಾರ ಜೋರಾಗಿ ಇರುತ್ತಿತ್ತು. ಈ ವರ್ಷ ನಿರೀಕ್ಷಿಸಿದಷ್ಟು ವ್ಯಾಪಾರವಾಗಿಲ್ಲ. ವ್ಯಾಪಾರದಲ್ಲಿ ಸಹಿ–ಕಹಿ ಎರಡೂ ಇದೆ’ ಎಂದು ನೇತಾಜಿ ಕಿರಾಣಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಸಂತೋಷ ಇಲ್ಲೂರು ಪ್ರತಿಕ್ರಿಯೆ ನೀಡಿದರು.

‘ಜಿಲ್ಲಾಡಳಿತವು ಸರಿಯಾದ ಸಮಯಕ್ಕೆ ವ್ಯಾಪಾರಿಗಳ ಸಭೆ ನಡೆಸಿ ದರ ನಿಗದಿ ಮಾಡಿತು. ಇದರಿಂದಾಗಿ ರಾಯಚೂರಿನಲ್ಲಿ ಎಪಿಎಂಸಿ ಸಗಟು ವ್ಯಾಪಾರದಲ್ಲಿ ಯಾವುದೇ ದಿನಸೀ ದರಗಳು ಹೆಚ್ಚಳವಾಗಲಿಲ್ಲ. ಮಾರ್ಚ್‌ನಲ್ಲಿ ಭಾರಿ ವ್ಯಾಪಾರ ನಡೆದಿತ್ತು. ಏಪ್ರಿಲ್‌ ಕೊನೆಯಲ್ಲಿ ಬಾಡಿಗೆ ಹೆಚ್ಚು ಪಾವತಿಸಿ ದಾಸ್ತಾನು ಮಾಡಿದ್ದ ಅನೇಕ ಸರಕುಗಳನ್ನು ಮಾರಾಟವಾಗದೆ ಉಳಿದಿದೆ. ಮುಖ್ಯವಾಗಿ ಅಡುಗೆ ಎಣ್ಣೆ ದರ ಇದ್ದಕ್ಕಿದ್ದಂತೆ ಕುಸಿದಿದೆ. ಈಗ ನಷ್ಟ ಅನುಭವಿಸುವ ಸ್ಥಿತಿ ಬಂದಿದೆ’ ಎಂದು ರಾಯಚೂರು ದಿನಸೀ ಸರಕುಗಳ ಸಗಟು ವ್ಯಾಪಾರಿ ಶ್ರೀನಿವಾಸ ದೇವನಪಲ್ಲಿ ಅವರು ಹೇಳುವ ಮಾತಿದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು